ಸರ್ಕಾರಿ ರಸ್ತೆ ಅತಿಕ್ರಮಣ ವಾರದಲ್ಲಿ ತೆರವು- ವನ್ಯ ಜೀವಿಗಳಿಂದ ಬೆಳೆ ನಾಶಕ್ಕೆ ಪರಿಹಾರ
ಜನತಾ ದರ್ಶನದಲ್ಲಿ ಸ್ವೀಕೃತಿಯಾದ ಸಾರ್ವಜನಿಕ ಅರ್ಜಿಗಳನ್ನು 15 ದಿನದೊಳಗಾಗಿ ವಿಲೇಗೊಳಿಸಬೇಕು. ಸರ್ಕಾರದ ಹಂತದಲ್ಲಿ ಇತ್ಯರ್ಥವಾಗುವ ಅರ್ಜಿಗಳನ್ನು ವಿವರಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ನಿರ್ದೇಶನ ನೀಡಿದರು.
ಶಿಗ್ಗಾಂವಿಯ ತಹಸೀಲ್ದಾರ ಕಚೇರಿಯಲ್ಲಿ ಮಂಗಳವಾರ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದು ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ ತಹಸೀಲ್ದಾರ ಹಾಗೂ ಉಪವಿಭಾಗಾಧಿಕಾರಿಗಳ ಹಂತದಲ್ಲಿ ಪರಿಹಾರ ಒದಗಿಸಬೇಕು. ಮಾಹಿತಿಯನ್ನು ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ದಾಖಲಿಸಬೇಕು. ನಮ್ಮ ಹಂತದಲ್ಲಿ ನಿವಾರಣೆಯಾಗುವ ಸಮಸ್ಯೆಗಳಿಗೆ ಸ್ಥಳದಲ್ಲೇ ಅಥವಾ ಕಾಲಮಿತಿಯಲ್ಲಿ ಪರಿಹಾರ ಒದಗಿಸಬೇಕು. ಸರ್ಕಾರದ ಹಂತದಲ್ಲಿ ತೀರ್ಮಾನವಾಗುವ ಸಮಸ್ಯೆಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.
ವಾರದೊಳಗಾಗಿ ತೆರವುಗೊಳಿಸಿ:
ಆದರೆ ರೂಢಿಗತ ದಾರಿ, ಬಂಡಿ ದಾರಿಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಆದಾಗ್ಯೂ ಬೆಳೆಯ ಬಿತ್ತನೆ ಹಾಗೂ ಕಟಾವು ಸಂದರ್ಭದಲ್ಲಿ ದಾರಿ ಮಾಡಿಕೊಡಲು ಅವಕಾಶವಿದೆ. ಉಳಿದಂತೆ ಶಾಶ್ವತವಾಗಿ ದಾರಿ ಮಾಡಿಕೊಡಲು ಸರ್ಕಾರದ ಅಧಿಕಾರಿಗಳಿಗೆ ಅವಕಾಶವಿಲ್ಲ. ಈ ಕುರಿತಂತೆ ರೈತರು ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು ಅಥವಾ ಸಿವಿಲ್ ನ್ಯಾಯಾಲದ ಮೊರೆಹೋಗಬೇಕು ಎಂದರು.
ಸರ್ಕಾರಿ ದಾರಿ ಒತ್ತುವರಿ, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬದಲಾವಣೆ ವಿಳಂಬ, ಕೃಷಿ ಪಂಪ್‌ಸೆಟ್‌ಗಳಿಗೆ ವೋಲ್ಟೇಜ್ ತೊಂದರೆ, ರೈತರ ಅವಶ್ಯಕತೆಗೆ ಅನುಗುಣವಾಗಿ ಚೆಕ್ ಡ್ಯಾಂ ನಿರ್ಮಾಣ, ಸರ್ಕಾರಿ ರಸ್ತೆ ಒತ್ತುವರಿ, ಬರ ಪರಿಹಾರ, ಕಾಡು ಪ್ರಾಣಿಗಳ ಹಾವಳಿ ತಡೆ, ಮನೆ ಮಂಜೂರಾತಿ, ಮನೆ ಬಿದ್ದ ಪ್ರಕರಣ, ದಾರಿ ಸಮಸ್ಯೆ, ರೇಷನ್ ಕಾರ್ಡ್ ಸಮಸ್ಯೆ, ಸ್ಮಶಾನ ಭೂಮಿ ಸೇರಿದಂತೆ ಸಾರ್ವಜನಿಕರಿಂದ ೧೬೩ ಅರ್ಜಿಗಳನ್ನು ಸ್ವೀಕರಿಸಲಾಯಿತು.
ಸ್ಥಳ ಪರಿಶೀಲನೆಗೆ ಸೂಚನೆ:
ಬೇಸಿಗೆ ಅವಧಿಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನಿರ್ಮಾಣ ಮಾಡಿರುವ ಸಿಮೆಂಟ್ ತೊಟ್ಟಿಗಳಲ್ಲಿ ಕಸ ತುಂಬಿದವರ ಮೇಲೆ ಕ್ರಮಕೈಗೊಳ್ಳಬೇಕು ಎಂಬ ಸಾರ್ವಜನಿಕರ ದೂರು ಆಲಿಸಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಪಂಚಾಯಿತಿವಾರು ಜಾನುವಾರು ನೀರಿನ ತೊಟ್ಟಿಯಲ್ಲಿ ಕಸ ತುಂಬಿದೆ ಎಂಬುದನ್ನು ಪರಿಶೀಲಿಸಿ ಸ್ವಚ್ಛಗೊಳಿಸಿ ನೀರು ತುಂಬಿಸಲಾಗುವುದು ಎಂದರು.
ಈ ಕುರಿತಂತೆ ಜಿಲ್ಲಾ ಅರಣ್ಯ ಅಧಿಕಾರಿ ಬಾಲಕೃಷ್ಣ ಮಾತನಾಡಿ, ಕಾಡು ಪ್ರಾಣಿ ಹಾವಳಿಯಿಂದ ಬೆಳೆಹಾನಿ ಉಂಟಾದರೆ ಅರಣ್ಯ ಇಲಾಖೆಯಿಂದ ರೈತರಿಗೆ ಪರಿಹಾರ ನೀಡಲಾಗುವುದು. ರೈತರ ಜಮೀನುಗಳಿಗೆ ಕಾಡು ಪ್ರಾಣಿ ಹಾವಳಿ ತಡೆಗೆ ತಡೆಬೇಲಿ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಕುರಿತಂತೆ ನಿರ್ದೇಶನ ನೀಡಿ, ಸ್ಥಳೀಯ ರೈತರೊಂದಿಗೆ ಚರ್ಚಿಸಿ ಎಲ್ಲೆಲ್ಲಿ ಬೇಲಿಯ ಅವಶ್ಯವಿದೆ ಎಂಬ ಮಾಹಿತಿಯನ್ನು ಪಡೆಯಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಪಂ ಉಪಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಉಪವಿಭಾಗಾಧಿಕಾರಿ ಮಹ್ಮದ್ ಖಿಜರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ, ತಹಸೀಲ್ದಾರ ಸಂತೋಷ ಹಿರೇಮಠ, ತಾಪಂ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಇತರರು ಉಪಸ್ಥಿತರಿದ್ದರು.