ಕನ್ನಡಪ್ರಭ ವಾರ್ತೆ ಕನಕಪುರ
ನಮ್ಮ ಜಿಲ್ಲೆಯ ನಾಲ್ಕು ತಾಲೂಕಿನ ಜನರು ನನ್ನನ್ನು ಭೇಟಿ ಮಾಡಲು ಕನಕಪುರಕ್ಕೆ ಬರಲು ಮನವಿ ಮಾಡಿದ್ದು ಇದೇ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳದಲ್ಲಿದ್ದು ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಹರಿಸುವಂತೆ ಸೂಚಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು. ನಗರದ ತಮ್ಮ ಸ್ವಗೃಹದಲ್ಲಿ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿ, ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿದ ಅವರು ನಮ್ಮ ಕ್ಷೇತ್ರದ ಸಾರ್ವಜನಿಕರ ಕುಂದುಕೊರತೆ ಆಲಿಸಲು ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಕನಕಪುರಕ್ಕೆ ಬರುವುದಾಗಿ ಹೇಳಿದ್ದು, ಕೋರ್ಟ್ ಕಲಾಪಗಳು ಅಥವಾ ಹೊರ ರಾಜ್ಯದಲ್ಲಿ ಇದ್ದಲ್ಲಿ ಶನಿವಾರದ ಬದಲು ಭಾನುವಾರ ಸಭೆ ನಡೆಸಲಿದ್ದು ಸಾರ್ವಜನಿಕರು ನೀಡಿದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಅರ್ಜಿಗಳನ್ನು ಪರಿಶೀಲಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ತಿಳಿಸಿದರು.ನಲ್ಲಹಳ್ಳಿ ಗ್ರಾಮದ ರಸ್ತೆ ವಿಚಾರವಾಗಿ ಗ್ರಾಮದ ಎರಡು ಗುಂಪುಗಳೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿ ರಸ್ತೆ ವಿಚಾರವಾಗಿ ಗ್ರಾಮದ ಭಿನ್ನಾಭಿಪ್ರಾಯವಿದ್ದು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ಸಮಸ್ಯೆ ಬಗೆಹರಿಸುವಂತೆ ಈಗಾಗಲೇ ಸೂಚಿಸಿದ್ದೇನೆ. ಸಾರ್ವಜನಿಕರಿಗೆ ರಸ್ತೆ ಸಂಪರ್ಕವನ್ನು ಕಲ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಅದನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಬಗ್ಗೆ ಮಾತನಾಡಿದ ಅವರು ಅಭ್ಯರ್ಥಿ ನಾನೇ ಆಗಬಹುದು, ಅಥವಾ ಯಾರೇ ಕಣಕ್ಕಿಳಿದರೂ ನಾನೇ ಅಭ್ಯರ್ಥಿ ಎಂದು ತಿಳಿದು ಮತ ಚಲಾಯಿಸುವಂತೆ ಮತದಾರರಲ್ಲಿ ಮನವಿಯನ್ನು ಮಾಡಲಾಗುವುದು. ಜೊತೆಗೆ ಶಾಸಕರಾದ ಇಕ್ಬಾಲ್ ಹುಸೇನ್, ಬಾಲಕೃಷ್ಣ, ಎಸ್ ರವಿ ಸೇರಿದಂತೆ ಹಲವು ನಾಯಕರೆಲ್ಲಾ ಒಂದೊಂದು ಹೋಬಳಿಗಳಲ್ಲಿ ಮತಯಾಚನೆ ಮಾಡುವ ಮೂಲಕ ನಮ್ಮ ಪಕ್ಷದ ಅಭ್ಯರ್ಥಿಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.ಚನ್ನಪಟ್ಟಣದಲ್ಲಿ ಉದ್ಯೋಗಮೇಳ ಮಾಡಲಾಗಿದ್ದು, ಇದರಿಂದ ರಾಮನಗರ ಜಿಲ್ಲೆಯ ಜನತೆಗೆ ವಿಶೇಷವಾಗಿ ಚನ್ನಪಟ್ಟಣದ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿ ಕೊಟ್ಟಂತಾಗಿದೆ. ಈಗಾಗಲೇ ಚನ್ನಪಟ್ಟಣ ತಾಲೂಕಿಗೆ 150 ಕೋಟಿ ರು. ಹಣವನ್ನು ಬಿಡುಗಡೆ ಮಾಡಿದ್ದು ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದು ಬಡವರಿಗೆ ನಿವೇಶನ ನೀಡಲಾಗುವುದು ಎಂದರು.
ಅಂದು ಗಾಂಧೀಜಿಯವರು ಕನಕಪುರಕ್ಕೆ ಬಂದಿದ್ದು ಅವರ ನೆನಪಿಗಾಗಿ ಕನಕಪುರ ಮತ್ತು ಚನ್ನಪಟ್ಟಣದಲ್ಲಿ ಕಾರ್ಯಕ್ರಮವನ್ನು ಮಾಡಲಾಗುವುದು, ಕಾಡಾನೆಯ ದಾಳಿಯಿಂದ ನಮ್ಮ ಜಿಲ್ಲೆಯಲ್ಲಿ ಸುಮಾರು 8-10 ಜನ ಮೃತಪಟ್ಟಿದ್ದು,ಈ ವಿಚಾರವಾಗಿ ರೈತರು ನನ್ನ ಗಮನಕ್ಕೆ ತಂದಿದ್ದಾರೆ. ಹಂತ ಹಂತವಾಗಿ ತಡೆಗೋಡೆ ನಿರ್ಮಿಸಲು ಅರಣ್ಯ ಇಲಾಖೆಗೆ ಈಗಾಗಲೇ ಸೂಚಿಸಲಾಗಿದೆ, ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಸರ್ಕಾರದ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಕೆರೆಗಳಲ್ಲಿ ನೀರು ಬರಿದಾಗಿರುವುದು ನಿಜ, ಮಳೆಗಾಲ ಮುಗಿದ ನಂತರ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುವುದು, ಕೆಪಿಎಸ್ಸಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆ ಯೊಂದಕ್ಕೆ ನನಗೆ ಪತ್ರಿಕೆಯಿಂದ ಮಾಹಿತಿ ತಿಳಿದು ಬಂದಿದೆ ಸಂಬಂಧಪಟ್ಟವರು ಇದಕ್ಕೆ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಆರ್ ವಿ ದೇಶಪಾಂಡೆ ಮುಖ್ಯಮಂತ್ರಿ ಆಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮಪಕ್ಷದ ಹಿರಿಯರು ಮುಖ್ಯಮಂತ್ರಿ ಆಗುವುದರಲ್ಲಿ ತಪ್ಪೇನಿಲ್ಲ ಎಂದು ಮುಗುಳ್ನಕ್ಕು ಕಾಲವೇ ಇದಕ್ಕೆ ಉತ್ತರಿಸಲಿದೆ ಎಂದರು.ವಿಧಾನ ಪರಿಷತ್ ಸದಸ್ಯ ಎಸ್ ರವಿ, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಡಿವೈಎಸ್ಪಿ ಕೆ ಸಿ ಗಿರಿ, ತಹಸೀಲ್ದಾರ್ ಡಾ.ಸ್ಮಿತಾ ರಾಮು, ತಾಲೂಕು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಭೈರಪ್ಪ, ನಗರಸಭೆ ಆಯುಕ್ತ ಎಂಮಹಾದೇವ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್ ಕೃಷ್ಣಮೂರ್ತಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ. ಡಿ. ವಿಜಯ್ ದೇವ್, ಮಾಜಿ ತಾ.ಪಂಚಾಯ್ತಿ ಅಧ್ಯಕ್ಷ ಪುರುಷೋತ್ತಮ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ ಎನ್ ದಿಲೀಪ್, ಪಿಐ ಗಳಾದ ಕೆ ಎಲ್ ಕೃಷ್ಣ, ಮಿಥುನ್ ಶಿಲ್ಪಿ, ಎಸ್ ಐ ಗಳಾದ ಉಷಾನಂದಿನಿ, ಬಿ ಮನೋಹರ್,ಸಿ ರವಿಕುಮಾರ್, ಹರೀಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಜನಸ್ಪಂದನ ಸಭೆಯಲ್ಲಿ ಉಪಸ್ಥಿತರಿದ್ದರು.