ಕೊಪ್ಪಳ: ಉದ್ಯೋಗ ಸೃಷ್ಟಿ ಮಾಡಲು ಕಾರ್ಖಾನೆ ಬೇಕು ಅಂತೇನಿಲ್ಲ, ಅವುಗಳಿಂದ ಎಲ್ಲ ಸಮಸ್ಯೆ ಪರಿಹಾರ ಆಗಿದೆ ಎಂಬುದು ಕೇವಲ ಭ್ರಮೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
ಇಲ್ಲಿ ಹಣ ಹೂಡಿಕೆ ಮಾಡುವುದು ದೊಡ್ಡ ಸಂಗತಿ ಎಂದು ಭಾವಿಸಿರುವುದೇ ಬಹುದೊಡ್ಡ ತಪ್ಪು, ಹಣದ ಲೆಕ್ಕದಲ್ಲಿ ಜನರಿಗೆ ಬದುಕು ಸಿಗಲ್ಲ. ಜಿಂದಾಲ್ ನಂತಹ ಬೃಹತ್ ಕಾರ್ಖಾನೆ ಏನು ಹೇಳಿ ಬಳ್ಳಾರಿಯಲ್ಲಿ ಬಂದಿತ್ತು ಅದ್ಯಾವುದೂ ಆಗದೇ ಅಲ್ಲಿ ಜನ ಕಂಗಾಲಾಗಿದ್ದಾರೆ, ಬಹುತೇಕ ಕಂಪನಿಗಳು ಈಗ ಉದ್ಯೋಗ ಕಡಿತ ಆರಂಭಿಸಿವೆ. ಈಗ ಉದ್ಯೋಗ ಕೊಡ್ತಿವಿ ಅಂದವರು ಮುಂದೆ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ. ಅದು ಏನೇ ಇದ್ದರೂ ಉದ್ಯೋಗಕ್ಕಿಂತ ಮೊದಲು ಆರೋಗ್ಯ ಹಾಗೂ ಬದುಕು ಮುಖ್ಯ ಎಂದರು.
ರೈತ ಚಳವಳಿಯ ಮುಂಚೂಣಿ ನಾಯಕ ಚಾಮರಸ ಮಾಲಿಪಾಟೀಲ್ ಮಾತನಾಡಿ, ಕಾರ್ಖಾನೆಗಳಿಂದ ಬರುತ್ತಿರುವ ಧೂಳು ಮತ್ತು ಹೊಗೆಯಿಂದ ಪರಿಸರ ವಿನಾಶವಾಗಿದೆ, ಬೆಳೆ ಹೋಗಿದೆ, ಬೆಳೆ ವಿಷಕಾರಿಯಾಗಿವೆ ಜತೆಗೆ ಇಲ್ಲಿನ ನದಿಯಿಂದ ನೀರನ್ನು ಹೇರಳವಾಗಿ ಬಳಸಿಕೊಂಡು ರೈತರಿಗೆ ಎರಡನೆ ಬೆಳೆಗೆ ನೀರಿಲ್ಲ, ಕುಡಿಯುವ ನೀರು ಮಲೀನವಾಗಿವೆ ಎಂಬ ಸಾಮಾನ್ಯ ಪ್ರಜ್ಞೆ ಇಟ್ಟುಕೊಳ್ಳದಿರುವದು ವಿಷಾಧಕರ ಸಂಗತಿ ಎಂದರು.ಇಲ್ಲಿನ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೋರಾಟಕ್ಕೆ ಕೊಟ್ಟ ಚಾಲನೆ ನಿಲ್ಲಿಸಬಾರದು, ಹೋರಾಟದ ಮೂಲಕ ಬದುಕು, ಉಸಿರು ಮರಳಿ ಕೊಟ್ಟರೆ ಶ್ರೀಗಳು ಇಲ್ಲಿನ ಜನರಿಗೆ ಮಾಡುವ ಬಹುದೊಡ್ಡ ಉಪಕಾರವಾದೀತು, ನಾವು ನಿಮ್ಮನ್ನು ದೇವರಂತೆ ಪೂಜಿಸುತ್ತೇವೆ ಎಂದು ಮನವಿ ಮಾಡಿದರು. ಅಲ್ಲದೇ ರಾಜ್ಯ ರೈತ ಸಂಘ ಮತ್ತು ಸಂಯುಕ್ತ ಹೋರಾಟ ಸಮಿತಿ ಮೂಲಕ ರಾಜ್ಯಮಟ್ಟದ ಬೃಹತ್ ಆಂದೋಲನ ಮಾಡಲು ಸಜ್ಜಾಗೋಣ ಎಂದರು.
ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿದರು.
ಇದಕ್ಕೂ ಮೊದಲು ಅಶೋಕ ವೃತ್ತದಲ್ಲಿ ಪ್ರತಿಭಟನಾರ್ಥವಾಗಿ ಘೋಷಣೆ ಕೂಗಿ ಅಲ್ಲಿಂದ ಮೆರವಣಿಗೆ ಮೂಲಕ ನಗರಸಭೆ ಮುಂದೆ ಬಂದು ಧರಣಿ ನಡೆಸಿದರು. ನ.೧ ರಂದು ಕೊಪ್ಪಳದ ಕಲ್ಯಾಣ ನಗರ ನಿವಾಸಿಗಳು ಪ್ರತಿಭಟನೆ ಮಾಡುವರು.