ಕನ್ನಡಪ್ರಭ ವಾರ್ತೆ ಮಂಡ್ಯ
ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಮಸ್ಯೆಗಳ ನಿವಾರಣೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೃಷಿ ಕೂಲಿ ಮತ್ತು ಗ್ರಾಮೀಣ ಕಾರ್ಮಿಕರು, ಕೃಷಿ ಕೂಲಿಕಾರರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಪ್ರತಿಭಟನಾಕಾರರು, ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು.
ತಾಲೂಕಿನ ಸೂನಗಹಳ್ಳಿ, ಮಂಗಲ, ಬಸರಾಳು, ಹೊಸೂರು, ಹಳೇಬೂದನೂರು, ಇಂಡುವಾಳು, ಬೇವಿನಹಳ್ಳಿ, ಮಾರಗೌಡನಹಳ್ಳಿ ಗ್ರಾಮ ಪಂಚಾಯ್ತಿಗಳಲ್ಲಿ ಕೂಲಿಕಾರರಿಗೆ 100 ದಿನ ತುಂಬುವವರೆಗೂ ಕೆಲಸ ನೀಡಬೇಕು ಮತ್ತು ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನ ಮತ್ತು ನಾಮಫಲಕದ ಹಣವನ್ನು ಇಂದೇ ಬಿಡುಗಡೆ ಮಾಡಿ ಅವರ ಖಾತೆಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಪಂ ವ್ಯಾಪ್ತಿಗೆ ಬರುವ ಸಂಪಳ್ಳಿ ಗ್ರಾಮ ಸರ್ವೇ ನಂ.129ರಲ್ಲಿ 23 ಕುಟುಂಬಗಳು ಹಾಗೂ ಎಚ್.ಕೋಡಹಳ್ಳಿ ಸರ್ವೇ ನಂ.227ರಲ್ಲಿ 39ಕುಟುಂಬಗಳು ವಾಸಿಸುತ್ತಿದ್ದು, ಇವರಿಗೆ ಹಕ್ಕುಪತ್ರ ಕೊಡಲು ಸ್ಥಳ ಪರಿಶೀಲಿಸಿ ಸರ್ವೇ ಮಾಡಿಸಿ ತಕ್ಷಣದಲ್ಲಿ ಕ್ರಮ ವಹಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಿದ್ದರು. ಆದರೆ, ಈವರೆವಿಗೂ ಕ್ರಮ ಆಗಿಲ್ಲ. ಇಂದೇ ಇತ್ಯರ್ಥ ಮಾಡಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಸಂತೆಕಸಲಗೆರೆ ಸರ್ವೇ ನಂ.569ರಲ್ಲಿ 20 ವರ್ಷಗಳ ಹಿಂದೆ ಹಕ್ಕುಪತ್ರ ನೀಡಿದ್ದು, ಇವರ್‍ಯಾರಿಗೂ ನಿವೇಶನ ಗುರುತಿಸಿ ಕೊಟ್ಟಿಲ್ಲ. ಈ ಬಗ್ಗೆ ತಕ್ಷಣ ಕ್ರಮ ವಹಿಸಿ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು.ಇಂಡುವಾಳು ಗ್ರಾಪಂ ವ್ಯಾಪ್ತಿಯ ಮೊಳೆಕೊಪ್ಪಲು ಗ್ರಾಮದ ಬಡವರಿಗೂ 1987ರಲ್ಲಿ ಹಕ್ಕುಪತ್ರ ನೀಡಿದ್ದು, ಇದುವರೆಗೂ ಫಲಾನುಭವಿಗಳು ಮನೆ ಕಟ್ಟಿಕೊಳ್ಳಲು ಯಾವುದೇ ಸರ್ಕಾರದ ಅನುದಾನ ನೀಡದಿರುವ ಕಾರಣ ತಕ್ಷಣ ಬಿಡುಗಡೆ ಮಾಡಿಸಿ ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸಾಲ ಕೇಳಿ ಅರ್ಜಿ ಸಲ್ಲಿಸಿರುವ ಎಲ್ಲಾ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರಿಗೂ ಆರ್‌ಬಿಐ ನಿರ್ದೇಶನದಂತೆ ಬಡ್ಡಿ ರಹಿತ 2ಲಕ್ಷದವರೆಗೆ ಸಾಲ ನೀಡುವುದುರ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಾಯ ಮಾಡಬೇಕು. ತಾಲೂಕಿನಾದ್ಯಂತ ಹದಗೆಟ್ಟಿರುವ ರಸ್ತೆಗಳನ್ನು ದುರಸ್ಥಿಗೊಳಿಸಬೇಕು. ಒತ್ತುವರಿಯಾಗಿರುವ ಕೆರೆ ಕಟ್ಟೆಗಳನ್ನು ತೆರವು ಮಾಡಿಸಿ ಕೂಲಿಕಾರರಿಗೆ ಉದ್ಯೋಗ ಖಾತ್ರಿಯಿಡಿ ಕೆಲಸ ನೀಡಿ ಹೊಳೆತ್ತಿಸಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.ತಾಲೂಕಿನ ಎಲ್ಲಾ ಹಳ್ಳಿಗಳಿಗೂ ಸುಸಜ್ಜಿತವಾದಿ ಸ್ಮಶಾನ ನೀಡಬೇಕು. ಇರುವ ಸ್ಮಶಾನಗಳನ್ನು ಅಭಿವೃದ್ಧಿ ಪಡಿಸಬೇಕು. ಒತ್ತುವರಿಯಾಗಿರುವ ಸ್ಮಶಾನ ಜಾಗ ತೆರವುಗೊಳಿಸಬೇಕು. ತಾಲೂಕಿನ ಹೆಚ್.ಕೋಡಹಳ್ಳಿ ಫಾರಂನಲ್ಲಿ ವಾಸಿಸುತ್ತಿರುವ ಬಡ ಕೂಲಿಕಾರರ ಕುಟುಂಬಗಳಿಗೆ ಶೌಚಾಲಯವಿಲ್ಲದೆ ಮಹಿಳೆಯರು ಮತ್ತು ಮಕ್ಕಳನ್ನೊಳಗೊಂಡಂತೆ ರಾತ್ರಿ ಹೊತ್ತು ಬಹಿರ್ದೆಸೆಗೆ ಹೋಗುವ ಪರಿಸ್ಥಿತಿ ಎದುರಾಗಿದೆ. ತಕ್ಷಣ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಿಕೊಡುವ ಮೂಲಕ ಆಗುವ ಅನಾಹುತಗಳನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಅಮಾಸಯ್ಯ, ಎಂ.ಎಸ್. ಸಂತೋಷ್, ನಾಗರಾಜು, ಅಬ್ದುಲ್ಲಾ, ಸಿದ್ದಪ್ಪ, ಸಂತೋಷ, ರಾಜೇಶ್ವರಿ, ರೇಣುಕಾ ಇತರರು ಪಾಲ್ಗೊಂಡಿದ್ದರು.