)
ಸೋಮವಾರಪೇಟೆ: ಪಟ್ಟಣ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಪಟ್ಟಣ ಪಂಚಾಯಿತಿ ಒದಗಿಸದಿದ್ದರೆ, ಪಂಚಾಯಿತಿ ಎದುರು ಧರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ) ಬಣ ಎಚ್ಚರಿಸಿದೆ.
ಕಕ್ಕೆಹೊಳೆ ಜಂಕ್ಷನ್ ಸಮೀಪ ಸುಸಜ್ಜಿತ ಶೌಚಗೃಹ ನಿರ್ಮಾಣವಾಗಬೇಕು. ಶಾಲಾ ಮಕ್ಕಳು ಹಾಗು ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ತಾಲೂಕು ಪಂಚಾಯಿತಿ ಕರ್ತವ್ಯವಾಗಿದೆ. ಕೂಡಲೆ ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು ಹಾಗು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಟ್ಟಣ ವ್ಯಾಪ್ತಿಯಲ್ಲಿರುವ ಶೌಚಗೃಹಗಳನ್ನು ವೈಜ್ಞಾನಿಕವಾಗಿ ದುರಸ್ತಿಪಡಿಸಬೇಕು ಎಂದು ಆಗ್ರಹಿಸಿದರು.
ಕರವೇ ನಗರ ಘಟಕದ ಅಧ್ಯಕ್ಷ ಬಿ.ಎಸ್.ಮಂಜುನಾಥ್ ಮಾತನಾಡಿ, ಪಟ್ಟಣದಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಅಮೃತ್ ಯೋಜನೆಯಲ್ಲಿ ಕಾಮಗಾರಿ ಪ್ರಾರಂಭಿಸಿ ವರ್ಷಗಳೇ ಕಳೆದಿವೆ. ಬರಗಾಲ ಬಂದರು ಕುಡಿಯುವ ನೀರಿನ ಸೌಲಭ್ಯ ಒದಗಿಸಿಲ್ಲ. ಇಡೀ ಪಟ್ಟಣದ ರಸ್ತೆ ಅಗೆದು ಹಾಳುಮಾಡಿದ್ದಾರೆ. ಸಮರ್ಪಕವಾಗಿ ದುರಸ್ತಿ ನಡೆಸಿಲ್ಲ. ಪಂಚಾಯಿತಿ ಅಧಿಕಾರಿಗಳು ಅಸಡ್ಡೆಯಿಂದ ವರ್ತಿಸಿದರೆ, ಪಂಚಾಯಿತಿ ಎದುರು ನಿರಂತರ ಧರಣಿ ಪ್ರತಿಭಟನೆ ಮೂಲಕ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು.ವರ್ಕಶಾಪ್ ಏರಿಯಾದಲ್ಲಿ ನಿರ್ಮಾಣವಾಗುತ್ತಿರುವ ಪೇ ಪಾರ್ಕಿಂಗ್ ಕಾಮಗಾರಿಗೂ ಗ್ರಹಣ ಹಿಡಿದಿದೆ. ಕೆಎಸ್‌ಆರ್‌ಟಿಸಿ ಗೇಟ್ ಸಮೀಪ ನಿರ್ಮಾಣ ಮಾಡಿರುವ ಹೈಮಾಸ್ಟ್ ದೀಪ ಕೆಟ್ಟು 6 ತಿಂಗಳು ಕಳೆದಿದೆ. ಪುಟ್ಟಪ್ಪ ವೃತ್ತದ ಬಳಿ ಚರಂಡಿಯ ಸ್ಲಾಬ್ಯ್ ಹಾಳಾಗಿದೆ. ಕೂಡಲೇ ಸರಿಪಡಿಸಬೇಕು ಎಂದು ಹೇಳಿದರು.