ಸಾಧಕರಾಗಬೇಕಾದರೆ ಕೆಲವು ತ್ಯಾಗ ಅಗತ್ಯ: ಡಾ.ಸುಬ್ರಾಯ

KannadaprabhaNewsNetwork | Published : Feb 24, 2024 2:31 AM

ಸಾರಾಂಶ

ಚಿಕ್ಕಮಗಳೂರು ನಗರದ ಎಐಟಿ ಕಾಲೇಜಿನ ಬಿಜಿಎಸ್ ಸೆಮಿನಾರ್ ಹಾಲ್‌ನಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ಮೂರು ದಿನದ ದೃಷ್ಠಿಕೋನ ಕಾರ್ಯಾಗಾರ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಿದ್ಯಾರ್ಥಿಗಳು ಸಾಧಕರಾಗಬೇಕಾದರೆ ಕೆಲವನ್ನು ತ್ಯಾಗ ಮಾಡಬೇಕು ಎಂದು ಆದಿಚುಂಚನಗಿರಿ ವಿ.ವಿ.ಯ ರಿಜಿಸ್ಟ್ರಾರ್‌ ಡಾ.ಸಿ.ಕೆ.ಸುಬ್ರಾಯ ಅವರು ಹೇಳಿದರು.ನಗರದ ಎಐಟಿ ಕಾಲೇಜಿನ ಬಿಜಿಎಸ್ ಸೆಮಿನಾರ್ ಹಾಲ್‌ನಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ಮೂರು ದಿನದ ದೃಷ್ಠಿಕೋನ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿ ದಿನ ಮದುವೆ, ಇತರೆ ಸಮಾರಂಭಗಳಲ್ಲಿ ಭಾಗವಹಿಸುತ್ತೇನೆ ಎಂದರೆ ಸಾಧನೆ ಆಗುವುದಿಲ್ಲ. ಪೂರ್ತಿ ಸಮಯ ಟಿ.ವಿ., ಮೊಬೈಲ್‌ಗಳಲ್ಲಿ ಕಾಲ ಕಳೆಯುವುದರಲ್ಲಿ ಖುಷಿ ಇದೆ ಎಂದರೆ ಅದರಿಂದಲೂ ಸಾಧಕರಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಒಬ್ಬ ವ್ಯಕ್ತಿ ಈ ದೇಶಕ್ಕೆ ಆ ರೀತಿಯ ಕೊಡುಗೆ ನೀಡಿದ್ದಾರೆ ಎನ್ನುವುದಾರೆ ನಮ್ಮಿಂದ ಏಕೆ ಸಾಧ್ಯವಾಗಬಾರದು. ನಮ್ಮಲ್ಲಿ ಭಗವಂತ ಎಲ್ಲಾ ರೀತಿಯ ಶಕ್ತಿಯನ್ನು ಕೊಟ್ಟಿದ್ದಾನೆ. ಆದರೆ ನಾವು ಸಣ್ಣ ಮಟ್ಟಕ್ಕೆ ಮಾತ್ರ ಸೀಮಿತವಾಗುತ್ತಿದ್ದೇವೆ. ಅದರಿಂದ ಹೊರ ಬರಬೇಕು. ಈಗಿನ ವಿದ್ಯಾರ್ಥಿಗಳಿಗೆ ಅವಕಾಶಗಳು ಸಾಕಷ್ಟಿವೆ. ಗೂಗಲ್‌ನಲ್ಲಿ ಹೋದರೆ ಎಲ್ಲ ರೀತಿಯ ಮಾಹಿತಿಗಳೂ ಇಂದು ಲಭ್ಯವಿದೆ ಅದನ್ನು ಬಳಸಿಕೊಳ್ಳಬೇಕು ಎಂದರು.ಎಂಬಿಎ ಕೋರ್ಸ್‌ಗೆ ಎಲ್ಲಾ ಕಡೆಗಳಲ್ಲಿ ಅವಕಾಶಗಳಿವೆ, ಕಲಿಕೆ ಸಂದರ್ಭದಲ್ಲಿ ಮೌಲ್ಯವರ್ಧನೆ ಮಾಡಿಕೊಳ್ಳುವುದರಿಂದ ವೃತ್ತಿಯಲ್ಲಿ ಹೆಸರು, ಖ್ಯಾತಿ ಎಲ್ಲವನ್ನೂ ಗಳಿಸಲು ಸಾಧ್ಯವಿದೆ ಎಂದು ತಿಳಿಸಿದರು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಫಾರ್ಮ್‌ ಲ್ಯಾಂಡ್‌ ರೈನ್ ವಾಟರ್ ಹಾರ್‍ವೆಸ್ಟಿಂಗ್ ಸಿಸ್ಟಂನ ಸಂಸ್ಥಾಪಕ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್, ಇಂದು ಅಂತರ್ಜಲ ಮಟ್ಟ ಕುಸಿದಿರುವುದರಿಂದ ಸಾವಿರ ಅಡಿವರೆಗೆ ಬೋರ್‌ವೆಲ್‌ ಕೊರೆದರೂ ನೀರು ಬರುತ್ತಿಲ್ಲ. ಬೋರ್‌ವೆಲ್‌ ಕೊರೆಸಲು ರೈತರು ಹಣ ಕೊಟ್ಟರೂ ನೀರು ಇಲ್ಲ, ಹಣವು ಇಲ್ಲ ಎಂಬಂತಾಗಿದೆ ಎಂದು ವಿಷಾದಿಸಿದರು. ಕೇವಲ 400 ರು. ವೇತನದಿಂದ ನನ್ನ ವೃತ್ತಿ ಜೀವನ ಆರಂಭವಾಯಿತು. ಸೇಲ್ಸ್ ಸೂಪರ್‌ವೈಸರ್ ಆಗಿ ಕೆಲಸ ಮಾಡುವಾಗ ಹಿರಿಯ ಸಹೋದ್ಯೋಗಿಯೊಬ್ಬರ ಸಹಕಾರದಿಂದ ಕಾಫಿ ತೋಟಗಳಲ್ಲಿ ಹನಿ ನೀರಾವರಿ ಕಲ್ಪಿಸುವ ಅವಕಾಶ ಸಿಕ್ಕಿತು. ಅಲ್ಲಿ ನನಗೆ ಗ್ರಾಹಕರುಗಳಿಂದ ಅತ್ಯುತ್ತಮವಾದ ಪ್ರತಿಕ್ರಿಯೆಗಳು ಬರಲಾರಂಭಿಸಿತು. ಅದರಿಂದಾಗಿ ಮನೆಗಳು, ವಾಣಿಜ್ಯ ಕಟ್ಟಡಗಳು, ಕೃಷಿ ಭೂಮಿಯಲ್ಲೂ ಮಳೆ ನೀರುಕೊಯ್ಲು ಘಟಕಗಳನ್ನು ಸ್ಥಾಪಿಸುವ ಉದ್ದಿಮೆ ಆರಂಭಿಸಲು ಕಾರಣವಾಯಿತು ಎಂದು ತಿಳಿಸಿದರು.ಇದೇ ವೇಳೆ ತಮ್ಮ ವೃತ್ತಿ ಬದುಕಿನ ಯಶಸ್ಸಿಗೆ ಸಹಕರಿಸಿದ ಹಲವರನ್ನು ನೆನಪಿಸಿಕೊಂಡ ಅವರು, ಶ್ರದ್ಧೆ ಮತ್ತು ಛಲ ತಮ್ಮನ್ನು ಈ ಹಂತಕ್ಕೆ ಬೆಳೆಸಿದೆ, ಯುವಕರು, ವಿದ್ಯಾರ್ಥಿಗಳು ಇದನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದು.ಕಾರ್ಯಕ್ರಮದಲ್ಲಿ ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ, ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ್‌ರಾವ್, ಮನೋಜ್‌ ಉಪಸ್ಥಿತರಿದ್ದರು.

Share this article