ಕನ್ನಡಪ್ರಭ ವಾರ್ತೆ ಉಳ್ಳಾಲ ಸೋಮೇಶ್ವರ- ಉಚ್ಚಿಲ ಸಮುದ್ರ ತೀರ ಪ್ರಕ್ಷುಬ್ಧಗೊಂಡಿದ್ದು, ಸೋಮೇಶ್ವರ ಸಂಪರ್ಕಿಸುವ ರಸ್ತೆಯ ಮತ್ತೊಂದು ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ರಸ್ತೆ ಕಳೆದುಕೊಳ್ಳುವ ಆತಂಕದಲ್ಲಿ ಸ್ಥಳೀಯರಿದ್ದಾರೆ.ಸೋಮೇಶ್ವರ, ಬಟ್ಟಪ್ಪಾಡಿ, ಉಚ್ಚಿಲ ಸಮುದ್ರ ತೀರದಲ್ಲಿ ಅಲೆಗಳು ಬಿರುಸುಗೊಂಡಿವೆ. ಬಟ್ಟಪ್ಪಾಡಿ ಸಮೀಪದ ಹಾನಿಗೊಂಡ ಮನೆಯ ಗೋಡೆಗಳು ಸಮುದ್ರಪಾಲಾಗಿವೆ. ಇದೀಗ ಎರಡನೇ ಭಾಗದಲ್ಲಿ ರಸ್ತೆ ಸಮುದ್ರಪಾಳಾಗುವ ಭೀತಿಯಲ್ಲಿ ಜನ ಇದ್ದಾರೆ. ಅವೈಜ್ಞಾನಿಕವಾಗಿ ಕಲ್ಲು ಬಂಡೆಗಳನ್ನು ಹಾಕುತ್ತಿರುವ ಪರಿಣಾಮ ಜನರ ತೆರಿಗೆ ಹಣದೊಂದಿಗೆ ಕಲ್ಲುಗಳು ಸಮುದ್ರ ಪಾಲಾಗುತ್ತಿವೆ. ಟಿಪ್ಪರ್ ಲಾರಿಗಳ ಮುಖೇನ ಕಲ್ಲುಗಳನ್ನು ತಂದು ಸಮುದ್ರಕ್ಕೆ ಸುರಿಯಲಾಗುತ್ತಿದೆ. ಅದನ್ನು ಜೋಡಿಸಿಡುವ ಯಾವುದೇ ಪ್ರಕ್ರಿಯೆಗಳು ನಡೆಯದ ಪರಿಣಾಮ ಕಲ್ಲುಗಳು ಸಮುದ್ರಪಾಲಾಗಿ, ಸಮುದ್ರ ಎದುರು ಬರುತ್ತಲೇ ಇದೆ.