ಮಡಿಕೇರಿ/ಸೋಮವಾರಪೇಟೆ : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿ ಆಕೆಯ ರುಂಡವನ್ನು ಹಿಡಿದುಕೊಂಡು ಪರಾರಿಯಾದ ಆರೋಪಿಯ ಪತ್ತೆಗೆ ಕೊಡಗು ಪೊಲೀಸ್ ಇಲಾಖೆಯಿಂದ ತನಿಖಾ ತಂಡವನ್ನು ರಚಿಸಲಾಗಿದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಸಮೀಪದ ಕುಂಬಾರಗುಂಡಿಯಲ್ಲಿ ಗುರುವಾರ ಸಂಜೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದ ಬಾಲಕಿಯೊಬ್ಬಳನ್ನು ಹಮ್ಮಿಯಾಲ ಗ್ರಾಮದ ಆರೋಪಿ ಪ್ರಕಾಶ್ ಎಂಬಾತ ಬರ್ಬರವಾಗಿ ಹತ್ಯೆ ಮಾಡಿ, ರುಂಡದೊಂದಿಗೆ ಪರಾರಿಯಾಗಿದ್ದ.
ಆರೋಪಿ ಪ್ರಕಾಶ್ ಪತ್ತೆಗೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಶುಕ್ರವಾರ ಶೋಧ ಕಾರ್ಯದಲ್ಲಿ ತೊಡಗಿದ್ದರು. ಶ್ವಾನ ದಳದಿಂದ ಬೆಳಗ್ಗೆ ಹುಡುಕಾಟ ನಡೆದಿದ್ದು, ಘಟನೆ ನಡೆದ ಸ್ವಲ್ಪ ದೂರದಲ್ಲಿ ಆರೋಪಿ ಕೃತ್ಯಕ್ಕೆ ಬಳಸಿದ್ದ ಕತ್ತಿ ಪತ್ತೆಯಾಯಿತು. ನಂತರ ಕಾರ್ಯಾಚರಣೆ ನಡೆಸಲಾದರೂ ಆರೋಪಿಯ ಸುಳಿವು ಸಿಕ್ಕಿಲ್ಲ.
ಹತ್ಯೆಯ ಬಗ್ಗೆ ಮೃತೆಯ ಸಹೋದರ ದಿಲೀಪ್ ಸೋಮವಾರಪೇಟೆ ಪೋಲಿಸರಿಗೆ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೊಲೆ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್‍ಪಿ ಕೆ.ರಾಮರಾಜನ್, ಎಎಸ್‍ಪಿ ಸುಂದರ್‍ರಾಜ್, ಡಿವೈಎಸ್‍ಪಿ ಗಂಗಾಧರಪ್ಪ, ಇನ್‌ಸ್ಪೆಕ್ಟರ್ ವಸಂತ್ ಭೇಟಿ ನೀಡಿ ಕ್ರಮ ತೆಗೆದುಕೊಂಡಿದ್ದಾರೆ. ಬಾಲಕಿಯ ಶವವನ್ನು ಮಡಿಕೇರಿ ಮೆಡಿಕಲ್ ಕಾಲೇಜಿನ ಶವಗಾರದಲ್ಲಿ ಇಡಲಾಗಿದೆ. ತಲೆಯನ್ನು ಪತ್ತೆಹಚ್ಚಲೇ ಬೇಕಾದ ಅನಿವಾರ್ಯತೆಯಿಂದ ಪಕ್ಕದ ಕಾಡಿನಲ್ಲಿ ಹುಡುಕಾಟ ಮುಂದುವರಿದಿದೆ. ಹತ್ಯೆ ಆರೋಪಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಗ್ರಾಮಸ್ಥರೂ ಹುಡುಕಾಟ ನಡೆಸುತ್ತಿದ್ದಾರೆ.
* ನಿಶ್ಚಿತಾರ್ಥ
ಆರೋಪಿ ಪ್ರಕಾಶ್ ಎಂಬಾತ ಹತ್ಯೆಗೊಳಗಾದ ಬಾಲಕಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಗುರುವಾರ ಅವರ ಮದುವೆ ನಿಶ್ಚಿತಾರ್ಥಕ್ಕೆ ಪೋಷಕರು ಮುಂದಾಗಿದ್ದರು. 16 ವರ್ಷದ ಬಾಲಕಿ ಜೊತೆ 32 ವರ್ಷದ ಪ್ರಕಾಶ್‌ನನ್ನು ಮದುವೆ ಮಾಡಲು ನಿಶ್ಚಿತಾರ್ಥ ನಡೆದಿತ್ತು. ಆದರೆ ಈ ವಿಷಯ ಮಕ್ಕಳ ಸಹಾಯವಾಣಿಗೆ ಯಾರೋ ತಿಳಿಸಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಮುಚ್ಚಳಿಕೆ ಬರೆಸಿಕೊಂಡಿದ್ದರು. ಎರಡು ಕಡೆಯವರಿಗೆ ತಿಳುವಳಿಕೆ ನೀಡಿ 18 ವರ್ಷ ಆದ ನಂತರವೇ ಮದುವೆ ಕಾರ್ಯಕ್ರಮ ಇಟ್ಟುಕೊಳ್ಳುವಂತೆ ಸೂಚಿಸಿದ್ದರು. ಇದಕ್ಕೆ ಉಭಯ ಕಡೆಯವರು ಒಪ್ಪಿಕೊಂಡಿದ್ದರು.
* ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಹತ್ಯೆ
ಗುರುವಾರ ಸಂಜೆ 5.30ರ ವೇಳೆಗೆ ಪ್ರಕಾಶ್ ಮತ್ತೆ ಬಾಲಕಿಯ ಮನೆಗೆ ತೆರಳಿ ಆಕೆಯ ತಂದೆ ಹಾಗೂ ತಾಯಿಗೆ ಹಲ್ಲೆ ಮಾಡಿ ಮನೆಯಿಂದ ಬಾಲಕಿಯನ್ನು ಸುಮಾರು 100 ಮೀಟರ್ ಹೊರಕ್ಕೆ ಎಳೆದುಕೊಂಡು ಹೋಗಿ ಅಲ್ಲಿಯೇ ಬಾಲಕಿಯ ದೇಹವನ್ನು ಕತ್ತರಿಸಿದ್ದ. ತಲೆಯನ್ನು ತುಂಡು ಮಾಡಿ ನಂತರ ದುಷ್ಕರ್ಮಿ ಪ್ರಕಾಶ್ ಆಕೆಯ ರುಂಡದೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಶುಕ್ರವಾರ ಬೆಳಗ್ಗಿನಿಂದಲೂ ಪೊಲೀಸರು, ಶ್ವಾನ ದಳದಿಂದ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತಾದರೂ ಆರೋಪಿಯ ಸುಳಿವು ಸಿಗಲಿಲ್ಲ.