ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸಮೀಪದ ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶನಿವಾರ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿತ್ತು. ಅರಣ್ಯ ಇಲಾಖೆಗಳ ತಂಡ, ಸೋಮವಾರಪೇಟೆ ಪೊಲೀಸ್ ತಂಡ, ಪಿಡಿಒ ತಂಡ, ಅರಣ್ಯ ವ್ಯಾಪ್ತಿಯ ಸಾರ್ವಜನಿಕರ ತಂಡ ಸೇರಿದಂತೆ ಒಟ್ಟು 10 ತಂಡಗಳು ಪಾಲ್ಗೊಂಡಿದ್ದವು. ಎರಡು ಗುಂಪುಗಳಲ್ಲಿ ತಲಾ 5 ತಂಡಗಳು ಲೀಗ್ ಹಂತದಲ್ಲಿ ಸೆಣಸಾಟ ನಡೆಸಿದವು. ಎರಡು ಗುಂಪುಗಳಿಂದ ಅಗ್ರ ಸ್ಥಾನ ಪಡೆದ ತಲಾ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದವು. ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಶನಿವಾರಸಂತೆ ಆರ್ ಆರ್ ಟಿ ತಂಡ ಮತ್ತು ಪಿಡಿಒ ತಂಡ ಸೆಣೆಸಿ ಪಿಡಿಒ ತಂಡ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸೋಮವಾರಪೇಟೆ ಪ್ರೆಸ್ ತಂಡ ಮತ್ತು ಆಲೂರು ಸಿದ್ದಾಪುರದ ಸಾರ್ವಜನಿಕರ ತಂಡ ಸೆಣಸಾಟ ನಡೆಸಿತು. ಸೋಮವಾರಪೇಟೆ ಪ್ರೆಸ್ ತಂಡ ಎರಡನೇ ತಂಡವಾಗಿ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯಾಟದಲ್ಲಿ 5 ಓವರ್ ಗಳಲ್ಲಿ ಪಿಡಿಒ ತಂಡ 46 ರನ್‌ಗಳನ್ನು ಗಳಿಸಿತು. ಮೊದಲ ಓವರ್ ಮೆಡ್‌ಇನ್ ಆದಾಗ ಪಂದ್ಯವನ್ನು ಸೋಮವಾರಪೇಟೆ ಪ್ರೆಸ್ ತಂಡ ಸೋಲುವ ಭೀತಿಯಲ್ಲಿತ್ತು. ನಂತರ 4 ಓವರ್ ಗಳಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಸೋಮವಾರಪೇಟೆ ಪ್ರೆಸ್ ತಂಡ ಜಯಭೇರಿ ಬಾರಿಸುವ ಮೂಲಕ ಹುಲಿಮಿತ್ರ ಕಪ್ ಅನ್ನು ತನ್ನದಾಗಿಸಿಕೊಂಡಿತು. ಸರಣಿ ಶ್ರೇಷ್ಠ ಪ್ರಶಸ್ತಿ ಮತ್ತು ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಸೋಮವಾರಪೇಟೆ ಪ್ರೆಸ್ ತಂಡದ ಆಟಗಾರ ನಿಖಿಲ್ ಪಡೆದುಕೊಂಡರು. ಉತ್ತಮ ಬೌಲರ್ ಪ್ರಶಸ್ತಿಯನ್ನು ಸೋಮವಾರಪೇಟೆ ಪ್ರೆಸ್ ತಂಡದ ಆಟಗಾರ ಕಮರುದ್ದೀನ್ ಪಡೆದುಕೊಂಡರು. ಪ್ರೆಸ್ ತಂಡದ ನಾಯಕ ದುಷ್ಯಂತ್ ಕುಮಾರ್ ವಿನ್ನರ್ಸ್ ಟ್ರೋಫಿಯನ್ನು ಅತಿಥಿಗಳಿಂದ ಸ್ವೀಕರಿಸಿದರು. ನಂತರ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕು ತಹಸೀಲ್ದಾರ್ ಮತ್ತು ದಂಡಾಧಿಕಾರಿ ಕೃಷ್ಣಮೂರ್ತಿ, ಎಸಿಎಫ್ ಗೋಪಾಲ್, ಆರ್ ಎಫ್ ಒ ಶೈಲೇಂದ್ರಕುಮಾರ್, ಪಟ್ಟಣ ಪಂಚಾಯಿತಿ ಕೃಷ್ಣಪ್ರಸಾದ್, ಆರೋಗ್ಯ ನಿರೀಕ್ಷಕ ಜಾಸಿಂ ಖಾನ್ ಈ ಸಂದರ್ಭ ಉಪಸ್ಥಿತರಿದ್ದರು.