ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸಿ ಆ್ಯಂಡ್ ಡಿ ಕೃಷಿ ಭೂಮಿಗೆ ಹಕ್ಕುಪತ್ರ ನೀಡಬೇಕು, ಆಸ್ತಿ ದುರಸ್ತಿ ವಿಳಂಬವನ್ನು ಖಂಡಿಸಿ ತಾಲೂಕು ರೈತ ಹೋರಾಟ ಸಮಿತಿ ಹಾಗು ಕೊಡಗು ರೈತ ಸಂಘ , ಚೇಂಬರ್ ಆಫ್ ಕಾಮರ್ಸ್ ಸೇರಿದಂತೆ ವಿವಿಧ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಸೋಮವಾರಪೇಟೆ ತಾಲೂಕು ಬಂದ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.ವಿಧಾನ ಸಭೆಯ ಅಧಿವೇಶನದಲ್ಲಿ ವಿಚಾರ ಪ್ರಸ್ತಾಪವಾಗಿ ಸಮಸ್ಯೆ ಇತ್ಯರ್ಥವಾಗದಿದ್ದಲ್ಲಿ ಜಿಲ್ಲಾಧಿಕಾರಿಯ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುವುದಾಗಿ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಮತ್ತು ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.ಗ್ರಾಮೀಣ ಭಾಗದ ರೈತರು ಬೆಳಗ್ಗೆಯೇ ಸೋಮವಾರಪೇಟೆ ಪಟ್ಟಣಕ್ಕೆ ಆಗಮಿಸಿ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ.ಸುರೇಶ್, ಸಂಚಾಲಕ ಬಿ.ಜೆ.ದೀಪಕ್, ಪ್ರಮುಖರಾದ ಎಸ್.ಜಿ.ಮೇದಪ್ಪ, ಕೆ.ಎಂ.ಲೋಕೇಶ್ ಕುಮಾರ್, ಬಿ.ಪಿ.ಅನಿಲ್, ಹರಗ ಮಿಥುನ್, ಕೂತಿ ದಿವಾಕರ್, ಕೆ.ಎಂ.ದಿನೇಶ್ ಅವರ ನೇತೃತ್ವದಲ್ಲಿ ವಿವೇಕಾನಂದ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿದರು. ಬೀಟಿಕಟ್ಟೆ ಜಂಕ್ಷನ್‌ನಲ್ಲಿ ರೈತ ಹೋರಾಟ ಸಮಿತಿ ಹಾಗು ರೈತ ಸಂಘದ ಎಸ್.ಬಿ.ಭರತ್‌ಕುಮಾರ್, ಜಿ.ಎಂ.ಹೂವಯ್ಯ, ಬಿ.ಪಿ.ಮೊಗಪ್ಪ, ಗೋಪಾಲ್‌ಕೃಷ್ಣ ಅವರ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿದರು. ಗೌಡಳ್ಳಿ, ಚೌಡ್ಲು, ತೋಳೂರುಶೆಟ್ಟಳ್ಳಿ, ಕಲ್ಕಂದೂರು-ಕೂಡುರಸ್ತೆ, ಮಾದಾಪುರ, ಕುಂಬೂರು, ಅಬ್ಬೂರುಕಟ್ಟೆ ಜಂಕ್ಷನ್‌ನಲ್ಲಿ ರಸ್ತೆ ತಡೆ ನಡೆಸಿದರು.ಸೋಮವಾರಪೇಟೆ ಪಟ್ಟಣದಲ್ಲಿ ವರ್ತಕರು ಅಂಗಡಿ ಮುಂಗಟ್ಟು ಮುಚ್ಚಿದ್ದರು. ಖಾಸಗಿ ಬಸ್‌ಗಳು, ಆಟೋ, ಬಾಡಿಗೆ ವಾಹನಗಳು ರಸ್ತೆಗಿಳಿಯದೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದಲ್ಲೂ ಅಂಗಡಿಗಳನ್ನು ಮುಚ್ಚಿ ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಪರದಾಟ, ಬಸ್ ಸಂಚಾರವೂ ಇಲ್ಲ:ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಪರದಾಡಿದರು. ಸರ್ಕಾರಿ ಕಚೇರಿಗಳು ಸಿಬ್ಬಂದಿಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವೂ ಇರಲಿಲ್ಲ. ಪಟ್ಟಣದ ವಿವೇಕಾನಂದ ಸರ್ಕಲ್ ಬಳಿ ಪ್ರತಿಭಟನಕಾರರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ಭೂಮಿಯನ್ನು ಸಿ ಆ್ಯಂಡ್ ಡಿ ಎಂದು ಸರ್ವೆ ಮಾಡುತ್ತಿದ್ದಾರೆ. ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಜಿಲ್ಲಾಧಿಕಾರಿ ವೆಂಕಟರಾಜ, ಎಎಸ್‌ಪಿ ಬಿ.ಪಿ.ದಿನೇಶ್ ಕುಮಾರ್, ಎಸಿಎಫ್ ಗೋಪಾಲ್ ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಬೇಡಿಕೆ ಆಲಿಸಿದರು. ಈ ಸಂದರ್ಭ ಮಾಜಿ ಸಚಿವ ಅಪ್ಪಚ್ಚುರಂಜನ್ ಅವರು ಜಿಲ್ಲಾಧಿಕಾರಿಗಳೊಂದಿಗೆ ಸಮಸ್ಯೆಯ ಕುರಿತು ಚರ್ಚಿಸಿದರು. ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ.ಸುರೇಶ್ ಮಾತನಾಡಿ, ತಾಲೂಕಿನಲ್ಲಿ ರೈತರು ಹಲವು ದಶಕಗಳಿಂದ ಕೃಷಿ ಮಾಡಿಕೊಂಡಿರುವ ಸಿ ಆ್ಯಂಡ್ ಡಿ ಜಾಗವನ್ನು ಕಳೆದು ಕೊಳ್ಳುವ ಭೀತಿಯಲ್ಲಿದ್ದಾರೆ. ಅರಣ್ಯ ಇಲಾಖೆಯವರು ಕೃಷಿ ಭೂಮಿಯನ್ನೇ ಸಿ ಆ್ಯಂಡ್ ಡಿ ಎಂದು ಸೆಕ್ಷನ್ -4 ಸರ್ವೆಗೆ ಮುಂದಾಗಿದ್ದಾರೆ. ಕೃಷಿ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರಿಸಿದರೆ, ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದರು. ಜಿಲ್ಲಾಧಿಕಾರಿ ವೆಂಕಟರಾಜು ಮಾತನಾಡಿ, ಸಿ ಆ್ಯಂಡ್ ಡಿ ಭೂಮಿ ವಿಷಯದಲ್ಲಿ ಎಲ್ಲಾ ಮಾಹಿತಿ ಸಂಗ್ರಹಿಸಲಾಗಿದೆ. ಸಿ ಆ್ಯಂಡ್ ಡಿ ಭೂಮಿಯಲ್ಲಿ ಕೃಷಿ ಮಾಡಿರುವುದು, ವಾಸದ ಮನೆಗಳಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ರೈತಾಪಿ ವರ್ಗಕ್ಕೆ ತೊಂದರೆಯಾಗಬಾರದೆಂಬುದು ಜಿಲ್ಲಾಡಳಿತದ ಆಶಯವೂ ಆಗಿದೆ. ಜಂಟಿ ಸರ್ವೆಯ ಸಂದರ್ಭ ಗ್ರಾಮಸ್ಥರಿಗೆ ಮಾಹಿತಿ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.