ಕನ್ನಡಪ್ರಭ ವಾರ್ತೆ ಕೊರಟಗೆರೆ
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿ ಬಳಿ ಬೆಳ್ಳಾವಿಯ ಲಕ್ಷ್ಮಿದೇವಮ್ಮ (42) ಎಂಬುವರನ್ನು ಕೊಲೆ ಮಾಡಿ, ದೇಹವನ್ನು ತುಂಡು, ತುಂಡುಗಳಾಗಿ ಕತ್ತರಿಸಿ, ದೇಹದ ಅಂಗಾಂಗಗಳನ್ನು ವಿವಿಧ ಕಡೆ ಬಿಸಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಲಕ್ಷ್ಮಿದೇವಮ್ಮ ಅವರ ಕಿರಿಯ ಮಗಳನ್ನು ವಿವಾಹವಾಗಿದ್ದ ದಂತ ವೈದ್ಯ ಡಾ.ರಾಮಚಂದ್ರ (47)ನೇ ಪ್ರಮುಖ ಆರೋಪಿಯಾಗಿದ್ದಾನೆ. ಈತ 2ನೇ ವಿವಾಹವಾಗಿದ್ದ.
ಕೊಲೆಗೆ ಸಹಕರಿಸಿದ ಆರೋಪದ ಮೇಲೆ ಆತನ ಇಬ್ಬರು ಸ್ನೇಹಿತರಾದ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸತೀಶ್ (38), ಕಿರಣ್ (32) ಸೇರಿ ಒಟ್ಟು ಮೂವರನ್ನು ಬಂಧಿಸಲಾಗಿದೆ.ತಾನೇ ಅತ್ತೆಯನ್ನು ಕೊಂದು, ಮೃತದೇಹವನ್ನು 18 ತುಂಡುಗಳಾಗಿ ಕತ್ತರಿಸಿ, ಸಿದ್ಧರಬೆಟ್ಟ ಹಾಗೂ ಚಿಂಪುಗಾನಹಳ್ಳಿ ಬಳಿ ವಿವಿಧ ಕಡೆ ಎಸೆದಿದ್ದಾಗಿ ಆರೋಪಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಅತ್ತೆಯ ಕಿರುಕುಳ ತಾಳಲಾರದೆ ಕೊಲೆ ಮಾಡಿದ್ದಾನೆ ಎಂಬ ವಿಚಾರ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಆರೋಪಿ ಪತ್ತೆಯಾಗಿದ್ದು ಹೇಗೆ?:ಆ.3ರಂದು ಲಕ್ಷ್ಮಿದೇವಮ್ಮ, ತುಮಕೂರಿನಲ್ಲಿರುವ ಮಗಳ ಮನೆಗೆ ಬಂದಿದ್ದಳು. ಆ.6ರಂದು ತುಮಕೂರಿನ ಕುವೆಂಪು ನಗರದ ಮನೆಯಿಂದ ಬೆಳ್ಳಾವಿಗೆ ಡ್ರಾಪ್ ಮಾಡುವುದಾಗಿ ಅಳಿಯನೇ ಕರೆದುಕೊಂಡು ಹೋಗಿದ್ದ. ಆದರೆ, ಲಕ್ಷ್ಮೀದೇವಮ್ಮ ಮನೆ ತಲುಪಿರಲಿಲ್ಲ. ಹೀಗಾಗಿ, ಆಕೆ ಕಾಣೆಯಾದ ಬಗ್ಗೆ ಬೆಳ್ಳಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಮಧ್ಯೆ, ಆ.7ರಂದು ಕೊರಟಗೆರೆಯ ಚಿಂಪುಗಾನಹಳ್ಳಿಯ ಮುತ್ಯಾಲಮ್ಮ ದೇವಸ್ಥಾನದ ಬಳಿಯಿಂದ ಸಿದ್ದರಬೆಟ್ಟದ ರಸ್ತೆವರೆಗೂ ಸರಿಸುಮಾರು 30 ಕಿ.ಮೀ.ವ್ಯಾಪ್ತಿಯಲ್ಲಿ 18 ಸ್ಥಳಗಳಲ್ಲಿ ಕಪ್ಪು, ಹಳದಿ ಕವರ್‌ಗಳಲ್ಲಿ ಮಹಿಳೆಯ ದೇಹದ ಅಂಗಾಂಗಗಳು ದೊರಕಿದ್ದವು. ಅದೇ ದಿನ ರಾತ್ರಿ ಸಿದ್ಧರಬೆಟ್ಟದ ಸಮೀಪದಲ್ಲಿ ಕೊಳೆತ ಸ್ಥಿತಿಯಲ್ಲಿ ತಲೆ ಹಾಗೂ ಬಟ್ಟೆ ಸಿಕ್ಕಿತ್ತು. ಅವರ ಕುಟುಂಬಸ್ಥರನ್ನು ಕರೆದು ವಿಚಾರಿಸಿದ್ದು, ಕೈ ಮೇಲಿನ ಹಚ್ಚೆ, ಮುಖದ ಮೇಲಿನ ಕೆಲವು ಗುರುತು, ಉಡುಪುಗಳ ಆಧಾರದ ಮೇಲೆ ಕೊಲೆಯಾಗಿರುವುದು ಲಕ್ಷ್ಮಿದೇವಮ್ಮ ಎಂಬುದು ದೃಢಪಟ್ಟಿತ್ತು.ಆದರೆ, ಮೃತರ ಗುರುತು ಪತ್ತೆ ಸಮಯದಲ್ಲಿ ರಾಮಚಂದ್ರ ಕಾಣಿಸಿರಲಿಲ್ಲ. ಅಲ್ಲದೆ, ಅತ್ತೆಯನ್ನು ಬಿಟ್ಟು ಬರಲು ಹೋಗಿದ್ದವನು, ಮರುದಿನವೇ ಧರ್ಮಸ್ಥಳ ಪ್ರವಾಸಕ್ಕೆ ಹೋಗಿದ್ದ. ಅತ್ತೆ ಕಾಣೆಯಾಗಿದ್ದರ ಬಗ್ಗೆಯೂ ಸಮರ್ಪಕ ಉತ್ತರ ನೀಡಲಿಲ್ಲ. ಇದು ಅನುಮಾನಕ್ಕೆ ಕಾರಣವಾಗಿತ್ತು. ಹೀಗಾಗಿ, ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ವೇಳೆ, ಆತ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.
ಕಾರಿನಲ್ಲೇ ಕೊಲೆ ಮಾಡಿದ್ದ:ಮನೆಯಿಂದ ಹೊರಟ ಬಳಿಕ ಸ್ಪಲ್ಪ ದೂರದಲ್ಲೇ ಕಾರಿನಲ್ಲೇ ವೇಲ್‌ನಿಂದ ಕುತ್ತಿಗೆ ಬಿಗಿದು, ಲಕ್ಷ್ಮಿದೇವಮ್ಮನನ್ನು ಕೊಲೆ ಮಾಡಿದ್ದ. ಬಳಿಕ, ಕೊರಟಗೆರೆ ತಾಲೂಕಿನ ಕೋಳಾಲ ಬಳಿ ತೋಟಕ್ಕೆ ಶವ ತೆಗೆದುಕೊಂಡು ಹೋಗಿದ್ದ. ಶವವನ್ನು ಎಲ್ಲಿಯಾದರೂ ಎಸೆದರೆ ಪತ್ತೆಯಾಗುತ್ತೆ ಎಂಬ ಭಯದಿಂದ ದೇಹವನ್ನು 18 ತುಂಡುಗಳಾಗಿ ಕತ್ತರಿಸಿ, ಅಲ್ಲಲ್ಲಿ ಬಿಸಾಡಿದ್ದ. ಇದಕ್ಕಾಗಿ ಮಧ್ಯಾಹ್ನದಿಂದ ರಾತ್ರಿ ತನಕ ಆತ ಕಾರಿನಲ್ಲಿ ಸುತ್ತಾಡಿದ್ದ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ. ಈ ಕೃತ್ಯಕ್ಕೆ ಆತನಿಗೆ ಸ್ನೇಹಿತರಾದ ಕೊಳಾಲ ಬಳಿಯ ತೋಟದ ಸತೀಶ್ ಹಾಗೂ ಆತನ ಸೋದರ ಕಿರಣ್ ಸಹಕರಿಸಿದ್ದರು.ಅತ್ತೆ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಅಸಮಾಧಾನದಿಂದ ಆರೋಪಿ ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ ಎಂದು ಎಸ್ಪಿ ಅಶೋಕ್ ಕುಮಾರ್ ಹೇಳಿದ್ದಾರೆ.