ಮಗನ ಸಾಲ ಬಾಕಿ : ಖಾತೆಗೆ ಜಮಾ ಆಗಿರುವ ಗೃಹಲಕ್ಷ್ಮಿ ಹಣ ಕೊಡಲು ಸತಾಯಿಸಿದ ಬ್ಯಾಂಕ್ ಮ್ಯಾನೇಜರ್

KannadaprabhaNewsNetwork |  
Published : Mar 22, 2025, 02:06 AM ISTUpdated : Mar 22, 2025, 12:26 PM IST
ಮಗನ ಸಾಲ ಬಾಕಿ..ತಾಯಿಯ ಗೃಹಲಕ್ಷ್ಮಿ ಹಣ ಕೊಡಲು ಸತಾಯಿಸಿದ ಬ್ಯಾಂಕ್ ಮ್ಯಾನೇಜರ್.ಕೊಳ್ನಾಡು ಗ್ರಾಮಸಭೆಯಲ್ಲಿ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಭಾರಿ ಆಕ್ರೋಶ..ಕೊಳ್ನಾಡು ಗ್ರಾಮ ಪಂಚಾಯತ್ 24-25ನೇ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ. | Kannada Prabha

ಸಾರಾಂಶ

ಸಾಲಗಾರ ಪುತ್ರನ ತಾಯಿಯ ಗೃಹಲಕ್ಷ್ಮಿ ಹಣವನ್ನು ಖಾತೆಯಿಂದ ತೆಗೆಯಲು ಬಿಡದೆ ಸಾಲೆತ್ತೂರಿನ ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್ ಹಿಡಿದಿಟ್ಟ ವಿಚಾರ ಕೊಳ್ನಾಡು ಗ್ರಾಮಸಭೆಯಲ್ಲಿ ಕೋಲಾಹಲ ಎಬ್ಬಿಸಿದೆ.‌

 ಬಂಟ್ವಾಳ : ಸಾಲಗಾರ ಪುತ್ರನ ತಾಯಿಯ ಗೃಹಲಕ್ಷ್ಮಿ ಹಣವನ್ನು ಖಾತೆಯಿಂದ ತೆಗೆಯಲು ಬಿಡದೆ ಸಾಲೆತ್ತೂರಿನ ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್ ಹಿಡಿದಿಟ್ಟ ವಿಚಾರ ಕೊಳ್ನಾಡು ಗ್ರಾಮಸಭೆಯಲ್ಲಿ ಕೋಲಾಹಲ ಎಬ್ಬಿಸಿದೆ.‌

ಕೊಳ್ನಾಡು ಗ್ರಾಮಸಭೆ ಆರಂಭವಾದ ಕೆಲಹೊತ್ತಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಸಾಲೆತ್ತೂರು ಶಾಖೆಯ ಮ್ಯಾನೇಜರ್ ಬ್ಯಾಂಕ್ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ಗ್ರಾಮಸ್ಥರಿಗೆ ಮಾತನಾಡಲು ಅವಕಾಶ ಕೊಟ್ಟರು.

ಕೊಳ್ನಾಡು ಗ್ರಾಮದ ಕಲ್ಲಮಜಲು ನಿವಾಸಿ ದೃಷ್ಟಿ ಹೀನ ಮಹಿಳೆ ನೆಬಿಸ ಮಹಮ್ಮದ್ ಅವರ ಪುತ್ರ ಈ ಶಾಖೆಯಿಂದ ವೈಯಕ್ತಿಕ ಸಾಲ ಪಡೆದಿದ್ದರು. ಆರ್ಥಿಕ ಸಂಕಷ್ಟದಿಂದಾಗಿ ಸಾಲದ ಕಂತು ವಿಳಂಬವಾಗಿತ್ತು. ತಾಯಿ ನೆಬಿಸ ತನ್ನ ಖಾತೆಗೆ ಜಮಾ ಆಗಿರುವ ಗೃಹಲಕ್ಷ್ಮಿ ಹಣ ಮತ್ತು ದೃಷ್ಟಿ ಹೀನ ಬಗ್ಗೆ ಸರ್ಕಾರದಿಂದ ಸಿಗುವ ಪಿಂಚಣಿ ಹಣ ನಗದೀಕರಿಸಲು ಮೂರು ಬಾರಿ ಹೋಗಿದ್ದಾರೆ. ಪುತ್ರನ ಸಾಲ ಬಾಕಿ ಇರುವ ಕಾರಣ ನಿಮ್ಮ ಖಾತೆಯಿಂದ ಹಣ ನಗದೀಕರಿಸಲು ಆಗುವುದಿಲ್ಲ ಎಂಬ ಕಾರಣ ಹೇಳಿದ ಮ್ಯಾನೇಜರ್ ಮಹಿಳೆಯನ್ನು ಹಿಂದಕ್ಕೆ ಕಳಿಸಿದ್ದಾರೆ.

ಗ್ರಾಮ ಸಭೆಯಲ್ಲಿ ಹಾಜರಿದ್ದ ನೆಬಿಸ ಈ ವಿಚಾರವನ್ನು ಗ್ರಾಮಸ್ಥರ ಮೂಲಕ ಸಭೆಯಲ್ಲಿ ತಿಳಿಸಿದರು. ಅಲ್ಲಿವರೆಗೆ ಹಾರಿಕೆಯ ಉತ್ತರ ನೀಡುತ್ತಿದ್ದ ಬ್ಯಾಂಕ್ ಅಧಿಕಾರಿ ಸ್ವತಃ ನೊಂದ ಮಹಿಳೆಯೇ ಎದ್ದು ನಿಂತು ಕಣ್ಣೀರಿಟ್ಟಾಗ ಸಿಕ್ಕಿಬಿದ್ದಂತಾಗಿದೆ. ಅರ್ಧ ಗಂಟೆ ಕಾಲ ಬ್ಯಾಂಕ್ ಅಧಿಕಾರಿಯನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದು ತರಾಟೆಗೆ ತೆಗೆದುಕೊಂಡರು. ಕೊನೆಗೆ ವಿಧಿಯಿಲ್ಲದೇ ತನ್ನ ತಪ್ಪನ್ನು ಒಪ್ಪಿಕೊಂಡ ಮ್ಯಾನೇಜರ್ ಸಭೆಯಿಂದಲೇ ಹೊರನಡೆದು ಮಹಿಳೆಯನ್ನು ಬ್ಯಾಂಕಿಗೆ ಬರಮಾಡಿ ಖಾತೆಯಲ್ಲಿದ್ದ 8,500 ರು. ನಗದು ಗೃಹಲಕ್ಷ್ಮಿ ಹಣ ನೀಡಿದ್ದಾರೆ. ಹಣ ಪಡೆದು ಬಂದ ಖಾತೆದಾರ ನೆಬಿಸ ಅವರು ಗ್ರಾಮಸಭೆಗೆ ಅಭಿನಂದನೆ ಸಲ್ಲಿಸಿದರು.

ಸಾಲೆತ್ತೂರು ಮೂಲಕ ಬಾಕ್ಸೈಟ್ ಸಾಗಾಟದ ಭಾರಿ ಸರಕು ವಾಹನಗಳು ನಿರ್ಲಕ್ಷ್ಯದಿಂದ ಸಂಚರಿಸುತ್ತಾ ಇತರ ವಾಹನಗಳ ಸಂಚಾರಕ್ಕೆ ತಡೆಯುಂಟಾಗಿದೆ. ಗ್ರಾಮೀಣ ರಸ್ತೆಯಲ್ಲಿ 12,14,16 ಚಕ್ರಗಳ ಭಾರಿ ಸರಕು ಲಾರಿಗಳ ಸಂಚಾರವನ್ನು ನಿಷೇಧಿಸಿದ್ದರೂ ಲಾರಿಗಳ ಅಟ್ಟಹಾಸ ಮಿತಿ ಮೀರಿದೆ. 

ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪಂಚಾಯಿತಿ ನಿರ್ಣಯದ ಮೂಲಕ ಜಿಲ್ಲಾಧಿಕಾರಿ, ಗಣಿ ನಿರ್ದೇಶಕರಿಗೆ ಹಾಗೂ ಸಾರಿಗೆ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡುತ್ತೇವೆ ಎಂದು ಪಂಚಾಯಿತಿ ಅಧ್ಯಕ್ಷ ಅಶ್ರಫ್ ಸಾಲೆತ್ತೂರು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರೇಣುಕಾ ಗ್ರಾಮಸಭೆಯ ನೋಡಲ್ ಅಧಿಕಾರಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ