ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕೊನೆಗೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಅವರು ಕಾಂಗ್ರೆಸ್ ನಿಂದ ಮೊದಲ ಯತ್ನದಲ್ಲೇ ಜಯ ಸಾಧಿಸುವ ಮೂಲಕ ಸಂಸತ್ ಪ್ರವೇಶಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕಳೆದ 33 ವರ್ಷಗಳ ಹಿಂದೆ ಅಪ್ಪ ಸೋತಿದ್ದ ಕ್ಷೇತ್ರದಲ್ಲಿ ಮಗ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಪ್ಪ ಕಂಡಿದ್ದ ಸಂಸತ್ ಪ್ರವೇಶಿಸುವ ಕನಸನ್ನು ಮಗ ಭರ್ಜರಿ ಗೆಲುವು ಸಾಧಿಸುವ ಮೂಲಕ ನನಸು ಮಾಡಿದ್ದಾರೆ.ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕೊನೆಗೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಅವರು ಕಾಂಗ್ರೆಸ್ ನಿಂದ ಮೊದಲ ಯತ್ನದಲ್ಲೇ ಜಯ ಸಾಧಿಸುವ ಮೂಲಕ ಸಂಸತ್ ಪ್ರವೇಶಿಸಿದ್ದಾರೆ. ಚಾ.ನಗರ ಮೀಸಲು ಕ್ಷೇತ್ರದಿಂದ ಡಾ.ಮಹದೇವಪ್ಪ ಅವರೇ ಕಣಕ್ಕಿಳಿಯಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಶಯವಾಗಿತ್ತು. ಇಲ್ಲದಿದ್ದರೆ ಮಾಜಿ ಸಂಸದ ದಿ.ಆರ್. ಧ್ರುವನಾರಾಯಣ ಅವರ ಪುತ್ರ, ಹಾಲಿ ನಂಜನಗೂಡು ಶಾಸಕ ದರ್ಶನ್ ಅವರಿಗೆ ಟಿಕೆಟ್ ನೀಡುವ ಉದ್ದೇಶವಿತ್ತು. ಆದರೆ ದರ್ಶನ್ ಸ್ಪರ್ಧೆಗೆ ಆಸಕ್ತಿ ತೋರಲಿಲ್ಲ. ಇದಲ್ಲದೇ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅರ್ಧದಷ್ಟು ಕಡೆ ಕಾಂಗ್ರೆಸ್ ಸಚಿವರು, ಶಾಸಕರ ಸಂಬಂಧಿಕರಿಗೆ ಟಿಕೆಟ್ ನೀಡಿದೆ. ಹೀಗಾಗಿ ಇಲ್ಲಿ ಕೂಡ ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕು ಎಂದು ಮಹದೇವಪ್ಪ ಪಟ್ಟು ಹಿಡಿದಿದ್ದರು. ಕೊನೆಗೂ ಟಿಕೆಟ್ ಕೊಡಿಸಿ ಗೆಲ್ಲಿಸುವಲ್ಲಿ ಸಫಲರಾಗಿದ್ದಾರೆ.
33 ವರ್ಷದ ಹಿಂದೆ ಸೋತಿದ್ದ ಅಪ್ಪ: 1991ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಮಹದೇವಪ್ಪ ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಇದೀಗ 33 ವರ್ಷಗಳ ನಂತರ ಅವರ ಪುತ್ರ ಸುನಿಲ್ ಬೋಸ್ ಅದೃಷ್ಟ ಕೈ ಹಿಡಿದಿದೆ.
ಸುನಿಲ್ ಬೋಸ್ ಪರಿಚಯ:
ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಹಿರಿಯ ಪುತ್ರರಾದ ಸುನಿಲ್ ಬೋಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಅವರ ಪರಮಾಪ್ತ ಸ್ನೇಹಿತರು. ಇಬ್ಬರು ಕ್ರಮವಾಗಿ ಟಿ.ನರಸೀಪುರ ಹಾಗೂ ವರುಣಾ ಕ್ಷೇತ್ರದಲ್ಲಿ ತಂದೆಯವರ ಪರ ಪ್ರಚಾರ ಮಾಡುತ್ತಿದ್ದರಲ್ಲದೇ ಅಭಿವೃದ್ಧಿ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ರಾಕೇಶ್ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಬೇಕು ಎಂದು ಸಿದ್ದರಾಮಯ್ಯ ಕೂಡ ಬಯಸಿದ್ದರು. ಆದರೆ ಅವರು ನಿಧನರಾದರು. ಹೀಗಾಗಿ ಕಿರಿಯ ಪುತ್ರ ಡಾ.ಎಸ್.ಯತೀಂದ್ರ 2018ರಲ್ಲಿ ವರುಣ ಕ್ಷೇತ್ರದ ಶಾಸಕರಾದರು. ಆದರೆ ಸುನಿಲ್ ಬೋಸ್‌ಗೆ ಟಿಕೆಟ್ ಸಿಗಲಿಲ್ಲ. ಸುನಿಲ್ 2017ರ ಏಪ್ರಿಲ್‌ನಲ್ಲಿ ನಡೆದ ನಂಜನಗೂಡು ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ ಯತ್ನಿಸಿದ್ದರು. ಆದರೆ ಟಿಕೆಟ್ ಜೆಡಿಎಸ್‌ನಿಂದ ಬಂದ ಕಳಲೆ ಕೇಶವ ಮೂರ್ತಿ ಅವರ ಪಾಲಾಗಿತ್ತು. 2023ರ ಚುನಾವಣೆಯಲ್ಲಿ ಮಹದೇವಪ್ಪ ಅವರು ನಂಜನಗೂಡಿನಿಂದ, ಸುನಿಲ್ ಬೋಸ್‌ಗೆ ಟಿಕೆಟ್ ಬಯಸಿದ್ದರು. ಆದರೆ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್. ಧ್ರುವನಾರಾಯಣ ನಿಧನರಾಗಿದ್ದರಿಂದ ಅವರ ಪುತ್ರ ದರ್ಶನ್‌ಗೆ ಟಿಕೆಟ್ ನೀಡಲಾಯಿತು. ಇದರಿಂದ ಮಹದೇವಪ್ಪ ಅನಿವಾರ್ಯವಾಗಿ ಟಿ.ನರಸೀಪುರದಿಂದಲೇ ಸ್ಪರ್ಧಿಸಬೇಕಾಯಿತು. ಸುನಿಲ್ ಕ್ಷೇತ್ರವಿಲ್ಲದೇ ನಿರಾಶರಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದನಂತರ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸುನಿಲ್ ಬಯಸಿದ್ದರು. ಅಂತೆಯೇ ಟಿಕೆಟ್ ಪಡೆದು ಗೆಲುವು ಸಾಧಿಸುವ ಮೂಲಕ ಅಪ್ಪನ ಅಸೆಯನ್ನು ಈಡೇರಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.