ಕನ್ನಡಪ್ರಭ ವಾರ್ತೆ ಮಸ್ಕಿ
ಸೆಲೆಬ್ರೆಟಿ ಸೋನುಗೌಡ ಬಾಲಕಿಯನ್ನು ಅಕ್ರಮವಾಗಿ ದತ್ತು ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಸ್ಥಳ ಮಹಜರು ಮಾಡಲು ತಾಲೂಕಿನ ಕಾಚಾಪುರ ಗ್ರಾಮಕ್ಕೆ ಆಗಮಿಸಿದ್ದ ಸಮಯದಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.ವಿಚಾರಣೆ ಭಾಗವಾಗಿ ಸೋನುಗೌಡಗೆ ಬ್ಯಾಡರಹಳ್ಳಿ ಪೊಲೀಸರು ಕಾಚಾಪುರ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದು ಈ ವೇಳೆ ಆಕ್ರೋಶಗೊಂಡ ಗ್ರಾಮಸ್ಥರು ವಾಹನ ಮುತ್ತಿಗೆ ಹಾಕಿ, ಗಲಾಟೆ ಮಾಡಿ ಅಟ್ಟಿಸಿಕೊಂಡು ಹೋಗಿದ್ದಾರೆ.
ಬಾಲಕಿಯ ಪಾಲಕರು ಹೇಳಿದ್ದೇನು?: ತಾಲೂಕಿನ ಕಾಚಾಪುರ ಗ್ರಾಮದ ಮೌನೇಶ ಹಾಗೂ ಪತ್ನಿ ರಾಜೇಶ್ವರಿ ದಂಪತಿ ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ದುಡಿಯಲು (ಗುಳೆ) ಹೋಗಿದ್ದರು. ಇವರು ವಾಸಿಸುವ ಶೆಡ್ ಸಮೀಪ ಸೋನುಗೌಡ ಅವರ ಮನೆ ಇದೆ. ಇವರ ಆವರಣದಲ್ಲಿ ನೀರಿಗೆ ಹೋಗುತ್ತಾ ಸೋನುಗೌಡರ ಪರಿಚಯವಾಗಿದೆ. ಕೂಲಿ ಕೆಲಸ ಮಾಡುವ ಮೌನೇಶ ದಂಪತಿಗೆ ಸಾವಿತ್ರಿ ಎಂಬ ಪುತ್ರಿ ಇದ್ದಾಳೆ. ಸೋನುಗೌಡ ಮನೆಯಲ್ಲಿ ಯಾವ ಮಕ್ಕಳು ಇಲ್ಲದ ಕಾರಣ ಸಾವಿತ್ರಿಯನ್ನು ಸೋನುಗೌಡ ಮನೆಯಲ್ಲಿ ಬಿಟ್ಟಿದ್ದರು. ಇತ್ತೀಚೆಗೆ ಕಾಚಾಪುರದಲ್ಲಿ ಮನೆ ಕಟ್ಟಿಸುತ್ತಿರುವ ಕಾರಣ ಮೌನೇಶ ಕುಟುಂಬ ಸ್ವಗ್ರಾಮಕ್ಕೆ ಆಗಮಿಸಿದ್ದರು. ಆದರೆ ಇವರ ಪುತ್ರಿ ಸೋನುಗೌಡ ಮನೆಯಲ್ಲಿ ಇರುತ್ತೇನೆ ಎಂದು ಹಠ ಹಿಡಿದ ಕಾರಣ ತಂದೆ ಮೌನೇಶ ಸೋನುಗೌಡಗೆ ದೂರವಾಣಿ ಕರೆ ಮಾಡಿ ನನ್ನ ಪುತ್ರಿ ಹಠ ಮಾಡಿ ಅಳುತ್ತಿದ್ದಾಳೆ ಅವಳಿಗೆ ಸ್ವಲ್ಪ ಬುದ್ಧಿ ಹೇಳಿ ಎಂದು ತಿಳಿಸಿದ್ದಾನೆ.ಇನ್ನೂ ಸೋನುಗೌಡ ರಾತ್ರಿ ಕಾಚಾಪುರಕ್ಕೆ ಆಗಮಿಸಿದ್ದಾಳೆ. ಮನೆಯವರು ಸೋನುಗೌಡ ಹತ್ತಿರ ಇರಲಿ ಬಿಡು ಎಂಬ ಅನಿಸಿಕೆ ಜೊತೆಗೆ ಸೋನುಗೌಡ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸಾವಿತ್ರಿಯನ್ನು ಕರೆದುಕೊಂಡು ಹೋಗಿದ್ದಾಳೆ ಎನ್ನಲಾಗುತ್ತಿದೆ. ಆದರೆ ಸೋನುಗೌಡ ಸಾಮಾಜಿಕ ಜಾಲತಾಣದಲ್ಲಿ ಈ ಮಗುವನ್ನು ದತ್ತು ತೆಗೆದುಕೊಂಡಿದ್ದೇನೆ ಎಂಬ ಪೋಸ್ಟ್ ಮಾಡಿದ್ದಳು. ಹೀಗಾಗಿ ಈ ಘಟನೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ನಂತರ ಮಹಿಳಾ ಆಯೋಗವು ಸೋನುಗೌಡರ ಮೇಲೆ ಪ್ರಕರಣ ದಾಖಲಿಸಿದರು. ಈಗ ಪ್ರಕರಣದ ತನಿಖೆ ಮಾಹಿತಿ ಸಂಗ್ರಹ ನಡೆಯುತ್ತಿದ್ದು, ಬಾಲಕಿ ಸಾವಿತ್ರಿಯನ್ನು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಕಾಚಾಪುರ ಗ್ರಾಮಸ್ಥರು ಸೋನುಗೌಡ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಮೇಲೆ ಕೇಸ್ ಹಾಕಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮಸ್ಥರು ಸೋನುಗೌಡರು ಉತ್ತಮ ಕೆಲಸ ಮಾಡಿದ್ದಾರೆ. ಅವರ ಮೇಲೆ ಪ್ರಕರಣ ದಾಖಲೆ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.