ಕನ್ನಡಪ್ರಭ ವಾರ್ತೆ ಇಳಕಲ್ಲ
ಇಳಕಲ್ಲ ಸರ್ಕಾರಿ ನೌಕರರ ಸಂಘಕ್ಕೆ ಶೀಘ್ರ ಉತ್ತಮವಾದ ನಿವೇಶನ ನೀಡಿ, ಸುಸಜ್ಜಿತ ನೌಕರರ ಭವನ ನಿರ್ಮಾಣಕ್ಕೆ ಅನುದಾನ ನೀಡುವೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ವಿಜಯಾನಂದ ಕಾಶಪ್ಪನವರ ಹೇಳಿದರು.ನಗರದ ಡಯಟ್ ಆವರಣದಲ್ಲಿರುವ ತಾಲೂಕು ಪಂಚಾಯಿತಿ ಪಕ್ಕದಲ್ಲಿರುವ ಕಟ್ಟಡದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಇಳಕಲ್ಲ ತಾಲೂಕು ಶಾಖೆಯ ನೂತನ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಪ್ರತಿಯೊಂದು ಕಾರ್ಯಕ್ರಮಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟುವಲ್ಲಿ ಸರ್ಕಾರಿ ನೌಕರರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಸುಭದ್ರವಾದ ಆಡಳಿತ ನೀಡುವುದಕ್ಕೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮ ಚಟುವಟಿಕೆಗಳು ಮಾದರಿಯಾಗಿವೆ. ಇಳಕಲ್ಲ ತಾಲೂಕು ಶಾಖೆ ರಚನೆಯಾದ ನಂತರ ನೂತನ ಕಾರ್ಯ ಹಮ್ಮಿಕೊಂಡಿದ್ದು ಈಗ ಕೇವಲ ಸಂಘದ ಕಚೇರಿ ಅಷ್ಟೇ ಅಲ್ಲದೆ ಸರ್ಕಾರಿ ನೌಕರರ ಕಾರ್ಯದ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ವಾಲಿಬಾಲ್ ಅಂಗಣ, ಶಟಲ್ ಬ್ಯಾಡ್ಮಿಂಟನ್ ಅಂಗಣ, ಕೇರಂ, ಚೆಸ್ ವ್ಯವಸ್ಥೆ ಮಾಡಿದ್ದು ವಿಶೇಷವಾಗಿದೆ ಎಂದರು.ಸಂಘದ ಅಧ್ಯಕ್ಷ ಪರಶುರಾಮ ಪಮ್ಮಾರ ಮಾತನಾಡಿ, ಸಂಘದ ಕಾರ್ಯ ಚಟುವಟಿಗಳಿಗೆ ಸದಾ ಬೆನ್ನೆಲುಬು ಆಗಿರುವ ಶಾಸಕರಿಗೆ ಧನ್ಯವಾದ ತಿಳಿಸಿ, ಶೀಘ್ರ ನಿವೇಶನ ದೊರಕಿಸಿ ನೌಕರ ಭವನ ನಿರ್ಮಿಸಲು ಮನವಿ ಮಾಡಿದರು ಹಾಗೂ ತಾಲೂಕಿನ ಪ್ರತಿಯೊಬ್ಬ ಸರ್ಕಾರಿ ನೌಕರರು ಸಂಘದ ಕಚೇರಿಗೆ ಭೇಟಿ ನೀಡಿ ಇಲ್ಲಿರುವ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಲು ವಿನಂತಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾದ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಶಾಸಕ ಕಾಶಪ್ಪನವರ ವಾಲಿಬಾಲ್ ಸರ್ವ್ ಮಾಡುವುದರ ಮೂಲಕ ಹಾಗೂ ಶಟಲ್ ಬ್ಯಾಡ್ಮಿಂಟನ್ ಆಡುವುದರ ಮೂಲಕ ವಾಲಿಬಾಲ್ ಅಂಗಣ, ಶಟಲ್ ಬ್ಯಾಡ್ಮಿಂಟನ್ ಅಂಗಣ ಉದ್ಘಾಟನೆ ಮಾಡಿದರು.ಇದೇ ಸಂದರ್ಭದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಂಘದ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು. ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ತಹಸೀಲ್ದಾರ್ ಅಮರೇಶ ಪಮ್ಮಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಲಿಂಗಪ್ಪ ಅಂಟರತಾನಿ, ಹಿರಿಯರಾದ ಬಸವರಾಜ ಶಿರೂರ, ಜಿಲ್ಲಾ ಕಾರ್ಯದರ್ಶಿ ವಿಠ್ಠಲ್ ವಾಲಿಕಾರ, ಖಜಾಂಚಿ ಗೋಪಾಲ ನೀಲನಾಯಕ, ರಾಜ್ಯ ಪರಿಷತ್ ಸದಸ್ಯ ಈಶ್ವರ ಗಡ್ಡಿ, ಕಾರ್ಯದರ್ಶಿ ಸಂಗಮೇಶ ಬಂಗಾರಿ, ಖಜಾಂಚಿ ಶರಣು ಕೊಣ್ಣೂರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ನೌಕರರ ಸಂಘ, ವೃಂದ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು, ಸರಕಾರಿ ನೌಕರರು, ಶಿಕ್ಷಕರ ಬಳಗ ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.