ಕನ್ನಡಪ್ರಭ ವಾರ್ತೆ ಮಡಿಕೇರಿ
ವಿರಾಜಪೇಟೆ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಮಹಾಮೃತ್ಯುಂಜಯ ದೇವಾಲಯದಲ್ಲಿ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸಲಾಗುವುದು. ಕೊಡವರೆಲ್ಲರು ಒಗ್ಗೂಡಿ ಸದ್ಯದಲ್ಲಿಯೇ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ‘ಕೊಡವರ ನಡೆ ಕಟ್ಟೆಮಾಡು ಕಡೆ’ ಬೃಹತ್ ಜಾಥಾ ನಡೆಸಲಾಗುವುದು. ರಾಜಕೀಯ ಹಿನ್ನೆಲೆಯುಳ್ಳ ಕೆಲವು ಅನಾಗರಿಕ ವ್ಯಕ್ತಿಗಳು ಕೊಡವ ಜನಾಂಗದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿದ್ದು, ಕೊಡವ ಮಹಿಳೆಯರನ್ನು ಅವಮಾನಿಸಲಾಗಿದೆ, ಕೆಲವರ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಿದರು.
ಕಟ್ಟೆಮಾಡು ಶ್ರೀ ಭದ್ರಕಾಳಿ ದೇವಾಲಯದ ಅಧ್ಯಕ್ಷ ರವಿ ಸುಬ್ಬಯ್ಯ ಮಾತನಾಡಿ, ಸುಮಾರು 20 ಮಂದಿ ಕೊಡವರು ಸಂಪ್ರದಾಯದಂತೆ ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ಮೊದಲು ಶ್ರೀ ಭದ್ರಕಾಳಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಮಹಾ ಮೃತ್ಯುಂಜಯ ದೇವಾಲಯದ ಜಾತ್ರಾ ಮಹೋತ್ಸವಕ್ಕೆ ತೆರಳಿದ್ದೇವೆ. ಈ ಸಂದರ್ಭ ಕುಪ್ಯಚೇಲೆ ತೆಗೆದು ದೇವಾಲಯ ಪ್ರವೇಶಿಸುವಂತೆ ಕೆಲವರು ಒತ್ತಡ ಹೇರಿದ್ದು, ಕೆಲವರ ಮೇಲೆ ಹಲ್ಲೆಯಾಗಿದೆ. ಇದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.ಯಾವುದೇ ದೇವಾಲಯಗಳಲ್ಲಿ ಬೈಲಾಗಳಿಗೆ ಅವಕಾಶವಿಲ್ಲ, ಸಾಂಪ್ರದಾಯಿಕ ಉಡುಪು ಧರಿಸಿ ಬರುವುದನ್ನು ವಿರೋಧಿಸುವುದು ಸರಿಯಲ್ಲ ಎಂದರು.
ನಾವು ಇದೇ ಊರಿನಲ್ಲಿ ಹುಟ್ಟಿ ಬೆಳೆದವರು, ದೇವಾಲಯದ ಜೀರ್ಣೋದ್ಧಾರದ ಸಂದರ್ಭ ಮತ್ತು ಈ ಬಾರಿಯ ಜಾತ್ರೋತ್ಸವಕ್ಕೆ ಸಾಕಷ್ಟು ಧನ ಸಹಾಯ ಮಾಡಿದ್ದೇವೆ. ಆದರೆ ನಮಗೆ ಅವಮಾನ ಮಾಡಲಾಗಿದೆ. ಕೊಡವರ ಸಾಂಪ್ರದಾಯಿಕ ಕುಪ್ಯಚೇಲೆಯನ್ನು ಯಾರಿಂದಲೂ ಬಿಚ್ಚಿಸಲು ಸಾಧ್ಯವಿಲ್ಲ ಎಂದರು.
ಕಟ್ಟೆಮಾಡು ಪ್ರಕರಣದಲ್ಲಿ ಒಂದು ಜನಾಂಗವನ್ನು ಗುರಿ ಮಾಡುವುದಿಲ್ಲ, ಕೆಲವು ಕಿಡಿಗೇಡಿಗಳಿಂದ ಈ ಘಟನೆ ನಡೆದಿದೆ. ಸಂಬಂಧಪಟ್ಟ ಇಲಾಖೆಗಳು ಎಚ್ಚರವಹಿಸುವ ಅಗತ್ಯವಿದ್ದು, ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡರೆ ಮತ್ತೆ ಈ ರೀತಿಯ ಪ್ರಕರಣಗಳುbಎಂದು ಮರುಕಳಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಗ್ರಾಮಸ್ಥರಾದ ಅಚ್ಚಕಾಳೇರ ಸವಿತಾ ನವೀನ್ ಮಾತನಾಡಿ, ದೇವಾಲಯದಲ್ಲಿ ಮಹಿಳೆಯರ ಮೇಲೆ ಕೂಡ ಹಲ್ಲೆಯಾಗಿದೆ. ನಾವು ಹುಟ್ಟಿದ ಊರಲ್ಲಿ ನಮಗೆ ಬೆಲೆ ಇಲ್ಲದಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಕೊಡವರ ಮೇಲೆ ಇನ್ನು ಮುಂದೆ ದೌರ್ಜನ್ಯ ನಡೆಯಬಾರದು ಎಂದು ಆಗ್ರಹಿಸಿದರು.