ಜಗದೀಶ ವಿರಕ್ತಮಠ
ನವಜಾತ ಶಿಶುಗಳು ಸದೃಢವಾಗಿ ಬೆಳವಣಿಯುವ ನಿಟ್ಟಿನಲ್ಲಿ ತಾಯಿ ಎದೆ ಹಾಲಿನ ಕೊರತೆ ಕಾಡದಂತೆ ಬೆಳಗಾವಿ ವೈದ್ಯಕೀಯ ಸಂಶೋಧನಾ ಸಂಸ್ಥೆ (ಬಿಮ್ಸ್) ಮಿಲ್ಕ್ ಬ್ಯಾಂಕ್ ಸ್ಥಾಪನೆಗೆ ಮುಂದಾಗಿದೆ. ಇತ್ತೀಚೆಗೆ ಬಾಣಂತಿಯರಲ್ಲಿ ಹಿಮೋಗ್ಲೊಬಿನ್ ಪ್ರಮಾಣ ಕಡಿಮೆಯಾಗುತ್ತಿದೆ. ಅಲ್ಲದೆ, ಹೆರಿಗೆ ನಂತರ ತಾಯಂದಿರಲ್ಲಿ ಎದೆಹಾಲು ಕೂಡ ಕಡಿಮೆಯಾಗುತ್ತಿರುವುದು ಕಂಡುಬಂದಿದೆ. ಹೀಗಾಗಿ ಶಿಶುಗಳಿಗೆ ಸಮರ್ಪಕ ಎದೆಹಾಲು ಲಭ್ಯವಾಗದ ಹಿನ್ನೆಲೆಯಲ್ಲಿ ಅವು ಆರೋಗ್ಯ ಸಮಸ್ಯೆ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಬಿಮ್ಸ್ ಮಿಲ್ಕ್ ಬ್ಯಾಂಕ್ ಆರಂಭಿಸಲು ಕ್ರಮಕೈಗೊಂಡಿದೆ. ಈಗಾಗಲೇ ಅದಕ್ಕೆ ಪೂರಕವಾದ ಅಗತ್ಯ ಕಾರ್ಯ ಮುಕ್ತಾಯವಾಗಿದ್ದು, ಕೇವಲ ಬಾಟಲಿ ಪ್ಯಾಕಿಂಗ್ ಮಷಿನ್ ಕಾರ್ಯಾರಂಭ ಮಾಡುವುದಷ್ಟೆ ಬಾಕಿ ಇದೆ. ಇನ್ನೇನು ಶೀಘ್ರವೇ ಇದರ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ. ತಾಯಿಯ ಎದೆಹಾಲು ಮಗುವಿಗೆ ಅಮೃತ. ನವಜಾತ ಶಿಶುವಿನ ಎಲ್ಲ ಅಗತ್ಯ ಪೋಷಕಾಂಶ ಮತ್ತು ರಕ್ಷಣಾತ್ಮಕ ಸೋಂಕುನಿವಾರಕವಾಗಿ ಶಿಶುಗಳಿಗೆ ಕಾರ್ಯನಿರ್ವಹಿಸುತ್ತದೆ.
ಯಾರಿಗೆ ಹಾಲು ಕೊಡಲಾಗುತ್ತದೆ?:ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ, ಆಸ್ಪತ್ರೆಗಳಲ್ಲಿ ದಾಖಲಾಗುವ ಅವಧಿಪೂರ್ವ, ಕಡಿಮೆ ತೂಕದ ಮತ್ತು ಅನಾರೋಗ್ಯದ ಶಿಶುಗಳು ತಾಯಿಯ ಎದೆಹಾಲು ಪಡೆಯಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಪೌಡರ್ (ನಾನಾ ಕಂಪನಿಗಳು) ಹಾಲನ್ನೇ ಬಿಸಿನೀರಿನಲ್ಲಿ ಮಿಶ್ರಣ ಮಾಡಿ ನವಜಾತ ಶಿಶುಗಳಿಗೆ ನೀಡಲಾಗುತ್ತದೆ. ಆದರೆ, ಈ ಮಿಲ್ಕ್ ಬ್ಯಾಂಕ್ ಆರಂಭವಾದರೆ, ತಾಯಂದಿರರಿಂದ ನೈಸರ್ಗಿಕ ಹಾಲು ಪಡೆದು ಇಂತಹ ನವಜಾತ ಶಿಶುಗಳಿಗೆ ಹಾಲುಣಿಸಲು ಸಾಧ್ಯವಾಗುತ್ತದೆ. ಎಲ್ಲಾ ಶಿಶುಗಳಿಗೆ ಉಚಿತ, ಪಾಸ್ಟರೈಸ್ ಮಾಡಿದ ಎದೆಹಾಲನ್ನೇ ಒದಗಿಸುವ ಉದ್ದೇಶ ಬಿಮ್ಸ್‌ನದ್ದಾಗಿದೆ.
ಲ್ಯಾಕ್ಟೇರಿಯಮ್ ಎಂದೂ ಕರೆಯಲ್ಪಡುವ ಮಾನವ ಹಾಲಿನ ಬ್ಯಾಂಕ್ ಒಂದು ವಿಶೇಷ ಘಟಕವಾಗಿದೆ. ಈ ಘಟಕದಿಂದ ತಾಯಿ ಎದೆಹಾಲನ್ನು ಸಂಸ್ಕರಿಸಿ, ಸಂಗ್ರಹಿಸಿ ಇಡಲಾಗುತ್ತದೆ. ನಂತರ ಅಗತ್ಯವಿರುವ ಶಿಶುಗಳಿಗೆ ಒದಗಿಸಲಾಗುತ್ತದೆ. ಒಂದು ವೇಳೆ ಹೆಚ್ಚು ಹಾಲು ಸಂಗ್ರಹವಾಗಿದ್ದರೆ, ಹೊರಗಿನ ಶಿಶುಗಳಿಗೆ ಕೊಡಲು ಅವಕಾಶ ಕಲ್ಪಿಸಲಾಗಿದೆ.
ಅಲ್ಲದೇ, ಬಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಾಣಂತಿಯರು ಅಷ್ಟೇ ತಮ್ಮ ಎದೆ ಹಾಲು ಕೊಡುವುದಾಗಲಿ ಅಥವಾ ತೆಗೆದುಕೊಳ್ಳುವುದಾಗಲಿ ಎಂದೆನಿಲ್ಲ. ಹೊರಗಿನವರು ಹೆಚ್ಚಿನ ಹಾಲು ಕೊಡಬಹುದು, ಕಡಿಮೆ ಹಾಲು ಹೊಂದಿರುವವರು ಬಿಮ್ಸ್‌ನಿಂದ ಹಾಲು ತಗೆದುಕೊಂಡು ಹೋಗಬಹುದಾಗಿದೆ. ಎದೆಹಾಲು ಕೊಡುವುದಾಗಲಿ ಅಥವಾ ತಗೆದುಕೊಳ್ಳುವುದಾಗಿಲಿ ಉಚಿತವಾಗಿರಲಿದೆ.ಬಿಮ್ಸ್‌ನಲ್ಲಿ ಬಿಸಿನೀರು ಲಭ್ಯ
ಬಾಕ್ಸ್
----------
ಕಡಿಮೆ ಎದೆಹಾಲು ಹೊಂದಿರುವ ಬಾಣಂತಿಯರ ಮಕ್ಕಳಲ್ಲಿ ಪೋಷಕಾಂಶದ ಕೊರತೆ ಕಾಣದಿರಲಿ ಎಂಬ ಉದ್ದೇಶದಿಂದ ಹೆಚ್ಚು ಹಾಲು ಹೊಂದಿರುವವರು ಕೊಡುವ ಹಾಲನ್ನು ಶೇಖರಿಸಿ ಉಚಿತವಾಗಿ ಕೊಡಲಾಗುವುದು. ಬಿಮ್ಸ್ ಆಸ್ಪತ್ರೆಯಲ್ಲಿನ ಬಾಣಂತಿಯರು ಅಷ್ಟೇ ಅಲ್ಲದೇ, ಹೊರಗಿನವರು ಹಾಲು ಕೊಡಬಹುದು ಅಥವಾ ತೆಗೆದುಕೊಂಡು ಹೋಗಬಹುದು.