ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಅತೀ ಶೀಘ್ರದಲ್ಲಿಯೇ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಸೇರಿ ಸಿಬ್ಬಂದಿ ಕೊರತೆ ನೀಗಿಸುವುದಲ್ಲದೇ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಹಾಗೂ ಆಸ್ಪತ್ರೆಗೆ ಹೊಸ ರೂಪ ನೀಡುವಂತಹ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭರವಸೆ ನೀಡಿದರು.ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾವು ಶಾಸಕನಾಗುವುದಕ್ಕೂ ಮೊದಲು ವೈದ್ಯರು ಮತ್ತು ಸಿಬ್ಬಂದಿ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದವು. ಈಗ ಅಂತಹ ಪರಿಸ್ಥಿತಿ ಇಲ್ಲ ಎಂದರು.
ಸಿಬ್ಬಂದಿ ಭರ್ತಿಗೆ ಕ್ರಮಸಾರ್ವಜನಿಕ ಆಸ್ಪತ್ರೆಯಲ್ಲಿರುವ ತಜ್ಞ ವೈದ್ಯರು ಸೇರಿ ಸಿಬ್ಬಂದಿ ಕೊರತೆಯನ್ನು ಶೀಘ್ರದಲ್ಲಿಯೇ ನೀಗಿಸಲಾಗುವುದು. ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಾಗಿರುವ ಗಣಕಯಂತ್ರ ಸಹಾಯಕರ ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ. ಸಾರ್ವಜನಿಕ ಆಸ್ಪತ್ರೆ ಭದ್ರತೆಗಾಗಿ ಗೃಹರಕ್ಷಕರನ್ನು ನೇಮಿಸಿಕೊಳ್ಳುವ ಬಗ್ಗೆ ತೀರ್ಮಾನಿಸಲಾಗಿದೆ. ಇಲ್ಲಿನ ವೈದ್ಯರ ಕೊರತೆಯನ್ನು ನೀಗಿಸಲು ಎಂ.ಎಸ್.ರಾಮಯ್ಯ ಆಸ್ಪತ್ರೆ ಅಥವಾ ಆಕಾಶ್ ಆಸ್ಪತ್ರೆಯ ತರಬೇತಿ ವೈದ್ಯರನ್ನು ಹಾಕಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುವುದು. ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳ ಸೇವೆಯನ್ನು ಪ್ರಾಮಾಣಿಕವಾಗಿ ಸಲ್ಲಿಸುವಂತೆ ವೈದ್ಯರಿಗೆ ಮನವಿ ಮಾಡಿದರು.
ಆಸ್ಪತ್ರೆಗೆ ಹೊಸ ಕಟ್ಟಡಸಾರ್ವಜನಿಕ ಆಸ್ಪತ್ರೆಗೆ ಹೊಸರೂಪ ನೀಡಲು ಹಳೇ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವನ್ನು ಹೊಸ ವಿನ್ಯಾಸದೊಂದಿಗೆ ನಿರ್ಮಿಸುವುದು ಹಾಗೂ ತುರ್ತು ಸೇವೆ ವಿಭಾಗವನ್ನು ಮತ್ತಷ್ಟು ಆಧುನೀಕರಣಗೊಳಿಸಿ ತ್ವರಿತ ಚಿಕಿತ್ಸೆ ದೊರಕುವ ನಿಟ್ಟಿನಲ್ಲಿ ಬದಲಾಯಿಸಲಾಗುವುದು. ಬಾಗೇಪಲ್ಲಿಯಂತಹ ಹಿಂದುಳಿದ ಪ್ರದೇಶದಲ್ಲಿ ಬಹುತೇಕ ಬಡರೋಗಿಗಳು ಸರ್ಕಾರಿ ಆಸ್ಪತ್ರೆಗೆ ಬರುವುದರಿಂದ ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಸೇವೆ ಉಚಿತವಾಗಿ ನೀಡಲೇಬೇಕು ಎಂದು ತಾಕೀತು ಮಾಡಿದ ಶಾಸಕರು, ಯಾವುದೇ ಕಾರಣಕ್ಕೂ ಬಡವರಿಂದ ಹಣಕ್ಕೆ ಬೇಡಿಕೆ ಇಡುವುದನ್ನು ಸಹಿಸಲಾಗುವುದಿಲ್ಲ. ಆಸ್ಪತ್ರೆಯಲ್ಲಿ ಔಷಧಿಗಳ ಅಗತ್ಯ ದಾಸ್ತಾನು ಇರಬೇಕು. ಚೀಟಿಗಳನ್ನು ಯಾವುದೇ ಕಾರಣಕ್ಕೂ ಹೊರಗೆ ಬರೆದು ಕೊಡಬಾರದು ಎಂದರು.
ಸಭೆಯಲ್ಲಿ ಟಿಎಚ್‍ಒ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸುಷ್ಮ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಿ.ಎನ್.ಕೃಷ್ಣಾರೆಡ್ಡಿ, ಮನು, ರಾಹುಲ್, ಅಂಜಿನಪ್ಪ ಮತ್ತಿತರರು ಉಪಸ್ಥಿತರಿದ್ದರು.