ಶಿವಮೊಗ್ಗ: ರಾಜಕೀಯ ಇತಿಹಾಸದಲ್ಲೇ ಒಂದು ಅಪರೂಪದ ಹಾಗೂ ವಿನೂತನ ಪ್ರಯತ್ನಕ್ಕೆ ಬೆಳಗಾವಿ ಸಾಕ್ಷಿಯಾಯಿತು. ಸೊರಬ ಕ್ಷೇತ್ರದ ಶಾಸಕರೂ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರ ವಿಶೇಷ ಆಮಂತ್ರಣದ ಮೇರೆಗೆ, ಕ್ಷೇತ್ರದ ಸುಮಾರು 500ಕ್ಕೂ ಹೆಚ್ಚು ಮತದಾರರು ಮತ್ತು ಮುಖಂಡರು ಬೆಳಗಾವಿಗೆ ಭೇಟಿ ನೀಡಿ, ನೇರವಾಗಿ ಸಚಿವರ ಸಮ್ಮುಖದಲ್ಲೇ ತಮ್ಮ ಕ್ಷೇತ್ರದ ವಿಚಾರಗಳನ್ನು ಹಂಚಿಕೊಂಡರು.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸಭೆಯಲ್ಲಿ ಪಾಲ್ಗೊಂಡು, ಹಿಂದಿನ ಸರ್ಕಾರದ ಅವಧಿಯಲ್ಲಿ ಕುಂಠಿತಗೊಂಡಿದ್ದ ವಸತಿ ಯೋಜನೆಗಳಿಗೆ ನಮ್ಮ ಸರ್ಕಾರ ಚುರುಕು ಮುಟ್ಟಿಸಿದೆ. ಸೊರಬ ಕ್ಷೇತ್ರಕ್ಕೆ ವಿಶೇಷವಾಗಿ ಹೆಚ್ಚಿನ ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್ ಹಾಗೂ ಎನ್.ಎಸ್.ಬೋಸರಾಜು ಅವರು ಸಾರ್ವಜನಿಕರೊಂದಿಗೆ ಮುಖಾಮುಖಿಯಾಗಿ ಮಾತನಾಡಿದರು. ಮೂಲಭೂತ ಸೌಕರ್ಯ, ನೀರಾವರಿ ಹಾಗೂ ಆರೋಗ್ಯ ಸೇವೆಗಳ ಕುರಿತಾದ ಮನವಿಗಳನ್ನು ಸ್ವೀಕರಿಸಿದರು.ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಈ ಐತಿಹಾಸಿಕ ಸಂವಾದದಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣ, ಮತ್ತು ಶಿರಸಿ–ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಉಪಸ್ಥಿತರಿದ್ದು, ಕ್ಷೇತ್ರದ ಅಭಿವೃದ್ಧಿ ಚರ್ಚೆಯಲ್ಲಿ ಭಾಗಿಯಾದರು.ತಮ್ಮ ಕ್ಷೇತ್ರದ ನೂರಾರು ಜನರನ್ನು ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಗೆ ಕರೆಸಿ, ಸಚಿವರೊಂದಿಗೆ ನೇರ ಸಂವಾದ ಏರ್ಪಡಿಸಿದ ಸಚಿವ ಮಧು ಬಂಗಾರಪ್ಪ ಅವರ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.