ಸೊರಬ: ಗಾಳಿ, ಮಳೆಗೆ ಧರೆಗುರುಳಿದ ಮರ, ವಿದ್ಯುತ್ ಕಂಬ

KannadaprabhaNewsNetwork | Published : May 15, 2024 1:33 AM

ಸಾರಾಂಶ

ಗಾಳಿ ಮಳೆಗೆ ಹೊಳೆಜೋಳದಗುಡ್ಡೆ ಗ್ರಾಮದಲ್ಲಿ ಬೃಹತ್ ಮರವೊಂದು ವಿದ್ಯುತ್ ತಂತಿ ಮೇಲೆ ಉರುಳಿ ರಸ್ತೆಗೆ ಅಡ್ಡಲಾಗಿ ಧರೆಗೆ ಉರುಳಿತು. ಪರಿಣಾಮ ಸುಮಾರು ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಈ ಸಂದರ್ಭದಲ್ಲಿ ಸುಮಾರು ಎರಡು ತಾಸು ಸೊರಬ-ಚಂದ್ರಗುತ್ತಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ತೊಡಕಾಯಿತು. ವಿಷಯ ತಿಳಿದು ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಆಗಮಿಸಿದರು.

ಕನ್ನಡಪ್ರಭ ವಾರ್ತೆ ಸೊರಬ

ಬಿರುಸಿನ ಗಾಳಿ ಸಹಿತ ಸುರಿದ ಮಳೆಗೆ ವಿದ್ಯುತ್ ಕಂಬ ಹಾಗೂ ಮರ ಧರೆಗೆ ಉರುಳಿದ ಘಟನೆ ತಾಲೂಕಿನ ಹೊಳೆ ಜೋಳದಗುಡ್ಡೆ ಗ್ರಾಮದ ಮುಖ್ಯರಸ್ತೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.

ಮಂಗಳವಾರ ಮಧ್ಯಾಹ್ನ ಬಿರು ಬಿಸಿಲಿನಿಂದ ಕೂಡಿದ ವಾತಾವರಣ ನಂತರ ಮೋಡ ಕವಿದು ಬಿರುಸಿನ ಗಾಳಿ ಸಹಿತ ಮಳೆ ಬೀಳಲಾರಂಭಿಸಿತು. ಗಾಳಿ ಮಳೆಗೆ ಹೊಳೆಜೋಳದಗುಡ್ಡೆ ಗ್ರಾಮದಲ್ಲಿ ಬೃಹತ್ ಮರವೊಂದು ವಿದ್ಯುತ್ ತಂತಿ ಮೇಲೆ ಉರುಳಿ ರಸ್ತೆಗೆ ಅಡ್ಡಲಾಗಿ ಧರೆಗೆ ಉರುಳಿತು. ಪರಿಣಾಮ ಸುಮಾರು ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಈ ಸಂದರ್ಭದಲ್ಲಿ ಸುಮಾರು ಎರಡು ತಾಸು ಸೊರಬ-ಚಂದ್ರಗುತ್ತಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ತೊಡಕಾಯಿತು. ವಿಷಯ ತಿಳಿದು ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಆಗಮಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ನೆರವಿನೊಂದಿಗೆ ಮರವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಗ್ರಾಪಂ ಸದಸ್ಯ ಲೋಕೇಶ್ ಸೇರಿ ಇತರರು ಅಧಿಕಾರಿಗಳಿಗೆ ಸಹಕಾರ ನೀಡಿದರು. ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ಬಹುತೇಕ ಕಡೆ ಮಳೆಯಾಗಿದ್ದು, ಬಿಸಿಲಿನಿಂದ ಕಾದ ಇಳೆಗೆ ಮಳೆ ತಂಪೆರಚಿದಂತಾಗಿದೆ.

ಜಿಲ್ಲೆಯ ಹಲವಡೆ ಮಳೆ‌

ಶಿವಮೊಗ್ಗ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದ್ದು, ಮಂಗಳವಾರವೂ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ.

ಮಧ್ಯಾಹ್ನದವರೆಗೆ ಬಿರು ಬಿಸಿಲಿದ್ದು, ಸಂಜೆ ವೇಳೆಗೆ ಮೋಡಕವಿದ ವಾತಾವರಣ ಮೂಡಿತ್ತು. ಬಳಿಕ ಗಾಳಿ ಸಹಿತ ಮಳೆ ಸುರಿದಿದೆ. ತೀರ್ಥಹಳ್ಳಿಯ ಬಿದರಗೋಡು, ಅರೇಹಳ್ಳಿ, ಕಮ್ಮರಡಿ, ತೀರ್ಥಮತ್ತೂರು, ಮೇಘರವಳ್ಳಿ, ನೊಣಬೂರು, ಹಾದಿಗಲ್ಲು. ಹೊಸನಗರ ತಾಲೂಕಿನ ಸೊನಲೆ, ಅಮೃತ, ಮೇಲಿನಬೆಸಿಗೆ, ಕೋಡೂರು, ಮಾರುತಿಪುರದಲ್ಲಿ ಮಳೆಯಾಗಿದೆ.

ಸಾಗರ ತಾಲೂಕಿನ ಆಚಾಪುರ, ಹೊಸೂರು, ಹಿರೆಬಿಲಗುಂಜಿ. ಸೊರಬದ ಹೊಸಬಾಳೆ, ಹೆಚ್ಚೆ, ನ್ಯಾರ್ಸಿ, ಗುಡುವಿ, ಬೆನ್ನೂರು, ಹರೀಶಿ, ಅಗಸನಹಳ್ಳಿ, ಕುಬಟೂರು, ತಲ್ಲೂರು, ತತ್ತೂರು. ಶಿಕಾರಿಪುರದ ಮಳವಳ್ಳಿ, ತಡಗಣಿ, ಹಿರೇಜಂಬೂರು, ಚಿಕ್ಕಜಂಬೂರು, ಬಗನಕಟ್ಟೆ, ಗೊಂಡನಕೊಪ್ಪ, ಅಂಬಾರಗೊಪ್ಪ, ಬೇಗೂರು, ಮುದ್ದನಹಳ್ಳಿ, ಗಾಮಾ, ಸಾಲೂರು, ಚುರ್ಚಿಗುಂಡಿ, ಕಲ್ಮನೆ. ಭದ್ರಾವತಿಯ ಅರೆಬಿಳಚಿ, ಅರೆಕೆರೆ, ನಾಗತಿಬೆಳಗಲು, ಕಾಗೆಕೋಡುಮಗ್ಗಿ, ಕುಮ್ಮಾರನಹಳ್ಳಿ, ದೊಡ್ಡೇರಿ ಸೇರಿದಂತೆ ವಿವಿಧೆಡೆ ಮಳೆಯಾಗಿದೆ‌.

-------

ಫೋಟೋ:೧೪ಕೆಪಿಸೊರಬ-೦೪ :

ಸೊರಬ ತಾಲೂಕಿನ ಹೊಳೆಜೋಳದಗುಡ್ಡೆ ಗ್ರಾಮದಲ್ಲಿ ಮಳೆ, ಗಾಳಿಗೆ ಧರೆಗುರುಳಿದ ವಿದ್ಯುತ್ ಕಂಬಗಳು

Share this article