ಹಳಿಯಾಳ:
ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹಳಿಯಾಳ ಮತ್ತು ದಾಂಡೇಲಿ ಪಟ್ಟಣದಲ್ಲಿ ಆರಂಭಗೊಂಡ ಮನೆ ನಿರ್ಮಾಣ ಕಾಮಗಾರಿ ಮೂರಾಲ್ಕು ವರ್ಷಗಳ ಹಿಂದೆಯೇ ಮುಕ್ತಾಯಗೊಂಡು ಫಲಾನುಭವಿಗಳಿಗೆ ಹಸ್ತಾಂತರಿಸಬೇಕಾಗಿತ್ತು, ಮನೆ ನಿರ್ಮಾಣ ತಡವಾದುದಕ್ಕೆ ನನಗೆ ಅಪಾರ ನೋವಾಗಿದೆ. ನನ್ನನ್ನು ಕ್ಷಮಿಸಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಸಭೆಯಲ್ಲಿ ಕ್ಷಮೆಯಾಚಿಸಿದರು.ಪಟ್ಟಣದ ದೇಶಪಾಂಡೆ ಆಶ್ರಯ ನಗರದಲ್ಲಿ ಶನಿವಾರ ಕರ್ನಾಟಕ ಕೊಳಗೇರಿ ಮಂಡಳಿ ವತಿಯಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ ಸರ್ವರಿಗೂ ಸೂರು ಯೋಜನೆಯಡಿ ಹಳಿಯಾಳ ಮತ್ತು ದಾಂಡೇಲಿ ಪಟ್ಟಣದಲ್ಲಿ ನಿರ್ಮಿಸುತ್ತಿರುವ 2337 ಮನೆಗಳ ಪೈಕಿ ಪೂರ್ಣಗೊಂಡಿರುವ 831 ಮನೆ ಲೋಕಾರ್ಪಣೆ ಹಾಗೂ ಹಕ್ಕುಪತ್ರಗಳ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಹೊಂದಾಣಿಕೆ ಅವ್ಯವಹಾರ:ವೇದಿಕೆ ಮೇಲೆ ಗುತ್ತಿಗೆದಾರರನ್ನು ಕರೆಯಿಸಿ ಸರ್ವರ ಎದುರೇ ತರಾಟೆಗೆ ತೆಗೆದುಕೊಂಡ ದೇಶಪಾಂಡೆ, ಕೊಳಗೇರಿ ಇಲಾಖೆಯ ಎಂಜಿನಿಯರ್ ಮತ್ತು ಗುತ್ತಿಗೆದಾರರ ನಡುವಿನ ಹೊಂದಾಣಿಕೆಗಳ ಪರಿಣಾಮ ಮನೆ ನಿರ್ಮಾಣ ವಿಳಂಬವಾಗಿದೆ ಎಂದ ಅವರು, ಕಾಮಗಾರಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದ ಬಗ್ಗೆ ಫಲಾನುಭವಿಗಳಿಂದ ದೂರುಗಳು ಈಗ ಕೇಳಿಬರುತ್ತಿವೆ ಎಂದರು.ಕಾಮಗಾರಿ ಗುತ್ತಿಗೆ ಪಡೆದ ಕಂಟ್ರ್ಯಾಕ್ಟರ್ ನನ್ನನ್ನು ಭೇಟಿ ಮಾಡಲಿಲ್ಲ, ಗುತ್ತಿಗೆದಾರರು ಯಾರೆಂದು ನೋಡಲಿಲ್ಲ, ಇವತ್ತೇ ಅವರನ್ನು ನಾನು ನೋಡುತ್ತಿದ್ದೇನೆ ಎಂದ ದೇಶಪಾಂಡೆ, ಯಾವುದೇ ಯೋಜನೆ ಅಥವಾ ಕಾಮಗಾರಿಯಾಗಲಿ ನಿಗದಿಪಡಿಸಿದ ಅವಧಿಯಲ್ಲಿಯೇ ಪೂರ್ಣಗೊಳ್ಳಬೇಕು, ಇದರಿಂದ ಫಲಾನುಭವಿಗಳಿಗೂ ಲಾಭ. ಈ ರೀತಿ ಸರ್ಕಾರದ ಕಾಮಗಾರಿಯನ್ನು ಮನಬಂದಂತೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.ನಿರ್ಮಾಣ ಹಂತದಲ್ಲಿರುವ ಮನೆಗಳ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಿ ಎಂದು ಇದೇ ವೇಳೆ ದೇಶಪಾಂಡೆ ತಾಕೀತು ಮಾಡಿದರು.ಹಳಿಯಾಳ ಕ್ಷೇತ್ರದ ಮತದಾರರ ಅಶೀರ್ವಾದಿಂದ ನಾನು 9ನೇ ಬಾರಿ ಆಯ್ಕೆಯಾಗಿದ್ದು, ರಾಜ್ಯದಲ್ಲಿಯೇ ಹಿರಿಯ ಜನಪ್ರತಿನಿಧಿಯಾಗಿದ್ದೇನೆ. ಈ ಶ್ರೇಯಸ್ಸಿಗೆ ನನ್ನ ಮತದಾರರೇ ಕಾರಣ ಎಂದ ಅವರು, ದೇಶಪಾಂಡೆ ಆಶ್ರಯ ನಗರವನ್ನು ಕೊಳಗೇರಿಯನ್ನಾಗಿ ಪರಿವರ್ತಿಸಿ ಈ ಭಾಗದ ನಿವಾಸಿಗಳಿಗೆ ಕೊಳಗೇರಿ ಮಂಡಳಿಯಿಂದ ಮನೆ ಮಂಜೂರು ಮಾಡಿ ತಂದಿದ್ದೇನೆ. ಹಳಿಯಾಳ ಮತ್ತು ದಾಂಡೇಲಿಗೆ 2337 ಮನೆಗಳ ಜತೆಯಲ್ಲಿ ಈಗ ಹೆಚ್ಚುವರಿಯಾಗಿ ಮತ್ತೆ 600 ಮನೆ ಮಂಜೂರು ಮಾಡಿದ್ದೇನೆ ಎಂದರು.ನನ್ನ ಕ್ಷೇತ್ರಕ್ಕೆ ಅತೀ ಹೆಚ್ಚು ಕಾಮಗಾರಿ, ಯೋಜನೆ ಮಂಜೂರು ಮಾಡಿ ತರುವ ಹುಚ್ಚು ನನಗಿದೆ. ಆದರೆ ನನ್ನ ಒಳ್ಳೇಯತನದ ದುರ್ಲಾಭವನ್ನು ಗುತ್ತಿಗೆದಾರರು ಮತ್ತು ಅಧಿಕಾರಿಗಳು ಪಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕೊಳಗೇರಿ ಅಭಿವೃದ್ಧಿ ಮಂಡಳಿ ಎಂಜಿನಿಯರ್ ಪ್ರತೀಕ ದಳವಾಯಿ, ಕೊಳಗೇರಿ ಮಂಡಳಿ ವತಿಯಿಂದ ಹಳಿಯಾಳ ಮತ್ತು ದಾಂಡೇಲಿಯಲ್ಲಿ ನಿರ್ಮಿಸಿರುತ್ತಿರುವ ಮನೆಗಳ ಮಾಹಿತಿ ನೀಡಿದರು.ಪುರಸಭಾ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ಮಾಜಿ ಉಪಾಧ್ಯಕ್ಷೆ ಸುವರ್ಣ ಮಾದರ, ಸದಸ್ಯ ಫಯಾಜ್ ಶೇಖ್, ಶಮೀಮಬಾನು ಜಂಬೂವಾಲೆ, ದಾಂಡೇಲಿ ನಗರಸಭೆ ಮಾಜಿ ಅಧ್ಯಕ್ಷೆ ಸರಸ್ವತಿ ರಜಪೂತ, ಅಲಿಂ ಬಸರಿಕಟ್ಟಿ, ರಹೆಮಾನ ಜಂಬೂವಾಲೆ ಇದ್ದರು.