ಆತ್ಮ, ಪರಮಾತ್ಮನ ಅನುಸಂಧಾನದಿಂದ ದೈವದ ಅನುಗ್ರಹ: ಶ್ರೀಮುರುಳೀಧರ್ ಕೆದ್ಲಾಯ

KannadaprabhaNewsNetwork |  
Published : Apr 29, 2024, 01:31 AM IST
ಅರಸೀಕೆರೆ ನಗರದ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ವಿಷ್ಣು ಪಂಚಾಯತನ ಸಾನಿಧ್ಯದಲ್ಲಿ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಸಪರಿವಾರ ದೇವತೆಗಳ ಪ್ರತಿಷ್ಠಾಪನಾ ಹಾಗೂ ಬ್ರಹ್ಮಕಲಶೋತ್ಸವ ಧಾರ್ಮಿಕ ಪೂಜಾ ಕಾರ್ಯದಲ್ಲಿ ಶ್ರೀಪಂಚಮುಖಿ ಗಣಪತಿಯ ೨೫ ಪರಿ ಕಲಶ ಬ್ರಹ್ಮಕಲಶಾಭಿಷೇಕ ಪೂಜಾ ಕಾರ್ಯ ನೆರವೇರಿಸಲಾಯಿತು.  | Kannada Prabha

ಸಾರಾಂಶ

ಅರಸೀಕೆರೆಯ ಶ್ರೀವಿದ್ಯಾನಗರದಲ್ಲಿನ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ವಿಷ್ಣು ಪಂಚಾಯತನ ಸಾನಿಧ್ಯದಲ್ಲಿ ಪರಂಪರಾ ಅವಧೂತರಾದ ಶ್ರೀಸತೀಶ್ ಶರ್ಮ ಗುರೂಜಿ ನೇತೃತ್ವದಲ್ಲಿ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಸಪರಿವಾರ ದೇವತೆಗಳ ಪ್ರತಿಷ್ಠಾಪನಾ ಹಾಗೂ ಬ್ರಹ್ಮಕಲಶೋತ್ಸವ ಧಾರ್ಮಿಕ ಪೂಜಾ ಕಾರ್ಯ ನಡೆಯಿತು.

ಉಡುಪಿಯ ಹಳ್ಳಾಡಿ ವೇದ ವಿದ್ವಾನ್ । ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಪ್ರತಿಷ್ಠಾಪನೆ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಆತ್ಮ ಮತ್ತು ಪರಮಾತ್ಮನ ನಡುವಿನ ಅನುಸಂಧಾನದಿಂದ ಮಾತ್ರ ದೈವತ್ವದ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಉಡುಪಿಯ ಹಳ್ಳಾಡಿ ವೇದ ವಿದ್ವಾನ್ ಶ್ರೀಮುರುಳೀಧರ್ ಕೆದ್ಲಾಯ ತಿಳಿಸಿದರು.

ನಗರದ ಶ್ರೀವಿದ್ಯಾನಗರದಲ್ಲಿನ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ವಿಷ್ಣು ಪಂಚಾಯತನ ಸಾನಿಧ್ಯದಲ್ಲಿ ಪರಂಪರಾ ಅವಧೂತರಾದ ಶ್ರೀಸತೀಶ್ ಶರ್ಮ ಗುರೂಜಿ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಸಪರಿವಾರ ದೇವತೆಗಳ ಪ್ರತಿಷ್ಠಾಪನಾ ಹಾಗೂ ಬ್ರಹ್ಮಕಲಶೋತ್ಸವ ಧಾರ್ಮಿಕ ಪೂಜಾ ಕಾರ್ಯದಲ್ಲಿ ಮಾತನಾಡಿದರು.

‘ಭಾರತೀಯ ಸನಾತನ ಧರ್ಮ ಹಾಗೂ ಸಂಸ್ಕೃತಿಯಲ್ಲಿ ಪ್ರಕೃತಿಯಲ್ಲಿನ ಪಂಚತತ್ವಗಳನ್ನು ನಾವು ಆಹ್ವಾನಿಸಿಕೊಂಡು ಪರಮಾತ್ಮನ ಪೂಜಾ ಮಾಡುವ ಮೂಲಕ ಆತ್ಮ ಮತ್ತು ಪರಮಾತ್ಮನ ನಡುವೆ ಅನುಸಂಧಾನದ ಸನ್ಮಾರ್ಗದಲ್ಲಿ ದೈವತ್ವದ ಅನುಗ್ರಹ ಹಾಗೂ ಪರಿಪೂರ್ಣ ಆಶೀರ್ವಾದ ಪಡೆಯಲು ಸಾಧ್ಯ ಎನ್ನುವ ಸತ್ಯವನ್ನು ಅನಾದಿಕಾಲದಿಂದಲೂ ನಮ್ಮ ಪೂರ್ವಿಕರು ಸಾಕ್ಷೀಕರಿದ್ದಾರೆ, ಅಂತಹ ಪವಿತ್ರ ಸನ್ಮಾರ್ಗದಲ್ಲಿ ವೈಶಿಷ್ಟ್ಯ ಪೂರ್ವಕವಾಗಿ ವಿಷ್ಣು ಪಂಚಾಯತನ ಸಾನಿಧ್ಯದಲ್ಲಿ ಸುಕ್ಷೇತ್ರದ ಅಧಿದೇವತೆ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ, ಶ್ರೀಪಂಚಮುಖಿ ಗಣಪತಿ, ಶ್ರೀಕಂಠೇಶ್ವರ, ಶ್ರೀಅದಿತ್ಯ, ಶ್ರೀಅಂಬಿಕಾ ಹಾಗೂ ಕ್ಷೇತ್ರ ಪಾಲಕ ಶ್ರೀಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯಗಳ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಎಲ್ಲರೂ ಈ ಕಾರ್ಯದಲ್ಲಿ ಭಕ್ತಿಭಾವನೆಯಿಂದ ಪಾಲ್ಗೊಳ್ಳುವ ಮೂಲಕ ಪುನೀತರಾಗಬೇಕು’ ಎಂದು ಹೇಳಿದರು.

ಅವಧೂತ ಶ್ರೀಸತೀಶ್ ಶರ್ಮ ಗುರೂಜಿ ಆಶೀರ್ವಚನ ನೀಡಿ, ‘ಇಂದು ಮುಂಜಾನೆ ಗಣಪತಿ ಪೂಜೆ, ಪುಣ್ಯಾಹ, ಕಲಾತತ್ವ ಹೋಮ, ಪ್ರಾಯಶ್ಚಿತ ಕಲಶಾಭೀಷೇಕ, ಕಲಾಶಾಧಿವಾಸ ಹೋಮ, ಗಣಪತಿ ಅಥರ್ವಶೀರ್ಷ ಹೋಮ, ೨೫ ಪರಿ ಕಲಶ ಬ್ರಹ್ಮಕಲಶಾಭಿಷೇಕವನ್ನು ಶ್ರದ್ದಾಭಕ್ತಿಯಿಂದ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಮೇ ೨ ರಂದು ಮುಂಜಾನೆ ಪಂಚಮುಖಿ ಆಂಜನೇಯ ಸ್ವಾಮಿ,ಶ್ರೀಕಂಠೇಶ್ವರ ಸ್ವಾಮಿ ದೇವರ ಪ್ರಾಣ ಪ್ರತಿಷ್ಠಾಪನೆ ಹಾಗೂ ಮೇ.೩ ರಂದು ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವರ ಪ್ರಾಣ ಪ್ರತಿಷ್ಠಾಪನೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕು’ ಎಂದು ತಿಳಿಸಿದರು.

ಆದಿತ್ಯಶರ್ಮ ನೇತೃತ್ವದ ವಿಪ್ರ ತಂಡ, ಶ್ರೀಕ್ಷೇತ್ರದ ಆಡಳಿತಾಧಿಕಾರಿಗಳಾದ ಬಿ.ಎಸ್.ಸೇತುರಾಮ್, ಶ್ರೀಕ್ಷೇತ್ರ ಸಂಚಾಲಕ ಮುರುಳಿ ಮಂದಾರ್ಥಿ, ಶ್ರೀವಿದ್ಯಾನಗರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು, ಆವಧೂತ ಶಿಷ್ಯ ಬಳಗದ ಸದಸ್ಯರು ಇದ್ದರು.

ಅರಸೀಕೆರೆಯಲ್ಲಿ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಸಪರಿವಾರ ದೇವತೆಗಳ ಪ್ರತಿಷ್ಠಾಪನಾ ಹಾಗೂ ಬ್ರಹ್ಮಕಲಶೋತ್ಸವ ಧಾರ್ಮಿಕ ಪೂಜಾ ಕಾರ್ಯದಲ್ಲಿ ಶ್ರೀಪಂಚಮುಖಿ ಗಣಪತಿಯ ಪೂಜಾ ಕಾರ್ಯ ನೆರವೇರಿಸಲಾಯಿತು.

PREV

Recommended Stories

ಶಾಸಕರ ಭರವಸೆಗೆ ಧರಣಿ ಹಿಂಪಡೆದ ಚಲವಾದಿ ಸಮಾಜ
ರಾಜ್ಯಾದ್ಯಂತ ಏಕರೂಪ ಬೆಲೆ ನಿಗದಿಗೊಳಿಸಲು ಒತ್ತಾಯ