ಕನ್ನಡಪ್ರಭ ವಾರ್ತೆ ನಾಗಮಂಗಲದಕ್ಷಿಣ ಭಾರತದ ಮೊದಲ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನವನ್ನು ಕೇಂದ್ರ ಸರ್ಕಾರದ ಆಯುಷ್ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಖಾತೆ ರಾಜ್ಯ ಸಚಿವ ಡಾ.ಮುಂಜ್ಪಾರ ಮಹೇಂದ್ರಭಾಯ್ ಕಲುಭಾಯ್ ಮತ್ತು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭಾನುವಾರ ಲೋಕಾರ್ಪಣೆ ಮಾಡಿದರು.
ತಾಲೂಕಿನ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಬದಿಯ ಶೀರಪಟ್ಟಣ (ಎಂ.ಹೊಸೂರು ಗೇಟ್) ಬಳಿ15 ಎಕರೆ ವಿಸ್ತೀರ್ಣದಲ್ಲಿ ₹65 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡ ಉದ್ಘಾಟಿಸಿದ ಕೇಂದ್ರ ಸಚಿವ ಡಾ.ಮುಂಜ್ಪಾರ ಮಹೇಂದ್ರಭಾಯ್ ಕಲುಭಾಯ್ ಮಾತನಾಡಿ, ದಕ್ಷಿಣ ಭಾರತದಲ್ಲಿಯೇ ಕೇಂದ್ರ ಆಯುಷ್ ಮಂತ್ರಾಲಯದ ಮೊದಲ ಚಿಕಿತ್ಸಾ ಕೇಂದ್ರವಾಗಿದೆ. ಜನಸಾಮಾನ್ಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಮಧುಮೇಹ ಮತ್ತು ರಕ್ತದೊತ್ತಡ ಕಾಯಿಲೆಗಳಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರದಿಂದ ಪರಿಹಾರ ಸಿಗಲಿದೆ. ಯೋಗ ಮತ್ತು ನಮ್ಮ ಚಿಕಿತ್ಸಾ ಕೇಂದ್ರದಲ್ಲಿ ಸಿಗುವ ಪ್ರಕೃತಿ ಔಷಧಿಗಳನ್ನು ಹಾಗೂ ಆಹಾರ ಕ್ರಮ ಅನುಸಿರಿಸಿದರೆ ಎರಡು ಕಾಯಿಲೆಗಳನ್ನು ಹತೋಟಿಗೆ ತರಬಹುದು ಎಂದರು.
ಜನರು ಈ ಚಿಕಿತ್ಸಾ ಕೇಂದ್ರದ ಸೌಲಭ್ಯ ಪಡೆದುಕೊಳ್ಳಬೇಕು. ಇದಕ್ಕೆ ಮುಂದಿನ ದಿನಗಳಲ್ಲಿ ಬೇಕಾಗಿರುವ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯ ಇಲಾಖೆ ಸಿದ್ಧವಿದೆ ಎಂದರು.ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ತಾಲೂಕಿನ ಚೌದ್ರಿಕೊಪ್ಪಲಿನ ಹಿರಿಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಡಾ.ಹೋ.ಶ್ರೀನಿವಾಸಯ್ಯ ಮತ್ತು ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರ ಆಶಯದ ಜೊತೆಗೆ ಆಯುಷ್ ಇಲಾಖೆ ನಿರ್ದೇಶಕರಾಗಿದ್ದ ಬಿ.ಟಿ.ಚಿದಾನಂದಮೂರ್ತಿ ಅವರು 2004ರಲ್ಲಿ ತಾವು ಆರೋಗ್ಯ ಮಂತ್ರಿಯಾಗಿದ್ದ ವೇಳೆ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ 15 ಎಕರೆ ಭೂಮಿ ನೀಡುವಂತೆ ಮನವಿ ಮಾಡಿದ್ದರು. ಅವರ ಮನವಿ ಮೇರೆಗೆ ಈ ಪ್ರದೇಶದಲ್ಲಿ 15 ಎಕರೆ ಜಮೀನು ಗುರುತಿಸಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲಾಗಿತ್ತು ಎಂದರು.
ನಾನು ಸಾರಿಗೆ ಸಚಿವನಾಗಿದ್ದ ಅವಧಿಯಲ್ಲಿ ಈ ಚಿಕಿತ್ಸಾಲಯಕ್ಕೆ ಭೂಮಿ ನೆರವೇರಿಸಲಾಗಿತ್ತು. ನಂತರ 15 ವರ್ಷಗಳ ಬಳಿಕ ಸುಸಜ್ಜಿತವಾದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ತಮ್ಮ ಅವಧಿಯಲ್ಲಿಯೇ ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ. ಸ್ಥಳೀಯ ಜನರು ಹೆಚ್ಚು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.ಸಂಸದೆ ಸುಮಲತಾ ಅಂಬರೀಷ್ ಮಾತನಾಡಿ, ಭಾರತ ದೇಶ ವಿಶ್ವದಲ್ಲಿಯೇ ಯೋಗ ಕ್ಷೇತ್ರದಲ್ಲಿ ವಿಶ್ವಗುರುವಾಗಿ ಹೊರ ಹೊಮ್ಮಿದೆ. ಅದರಲ್ಲೂ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಭಾರತದ ಋಷಿಮುನಿಗಳು ಮಾಡುತ್ತಿದ್ದ ಯೋಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದೆ ಎಂದರು.
ಪ್ರಸ್ತುತದಲ್ಲಿ ಉತ್ತಮ ಆರೋಗ್ಯಕ್ಕೆ ಯೋಗ ಒಳ್ಳೆಯ ಮೇಡಿಷನ್ ಎಂದ ಸಂಸದರು, ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಕೊಟ್ಟಿರುವ ಅನುದಾನವನ್ನು ಸ್ಮರಿಸಿದರು.ಬೆಂಗಳೂರಿನ ಯೋಗ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಚ್.ಆರ್.ನಾಗೇಂದ್ರ, ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚ್ಚ, ಆಯುಷ್ ಮಂತ್ರಾಲಯದ ಡಿ.ಡಿ.ಜಿ ಸತ್ಯಜೀತ್ ಪಾಲ್, ಕೇಂದ್ರಿಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನದ ನಿರ್ದೇಶಕ ಡಾ.ಎಂ.ರಾಘವೇಂದ್ರರಾವ್, ರಾಜ್ಯ ಸರ್ಕಾರದ ಆಯುಷ್ ಇಲಾಖೆ ಆಯುಕ್ತ ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ.ಕುಮಾರ್, ಚಿಕಿತ್ಸಾ ಕೇಂದ್ರದ ಸಂಶೋಧನಾ ಅಧಿಕಾರಿ ಡಾ.ವಾದಿರಾಜ್, ಜಿಲ್ಲಾ ಆಯುಷ್ ಜಿಲ್ಲಾ ಅಧೀಕ್ಷಕಿ ಡಾ.ಬಿ.ಎಸ್.ಸೀತಾಲಕ್ಷ್ಮೀ, ಮಣ್ಣಹಳ್ಳಿ ಗ್ರಾ.ಪ.ಅಧ್ಯಕ್ಷ ರವಿ, ಉಪಾಧ್ಯಕ್ಷೆ ಲಕ್ಷ್ಮೀ ಸಿ.ಎಚ್. ಸೇರಿದಂತೆ ಹಲವರು ಹಾಜರಿದ್ದರು.