ಪುತ್ತೂರಿನಲ್ಲಿ ತಲೆ ಎತ್ತಲಿದೆ ದಕ್ಷಿಣ ಭಾರತದ ಅತೀ ದೊಡ್ಡ ಜೇನು ಸಂಸ್ಕರಣ ಘಟಕ !

KannadaprabhaNewsNetwork | Updated : May 05 2025, 09:57 AM IST

ಸಾರಾಂಶ

ದಕ್ಷಿಣ ಭಾರತದಲ್ಲೇ ಅತೀ ದೊಡ್ಡ ಜೇನಿನ ಬಹು ಉತ್ಪನ್ನ ಸಂಸ್ಕರಣಾ ಘಟಕವೊಂದು ಪುತ್ತೂರಿನಲ್ಲಿ ಆರಂಭಗೊಳ್ಳುತ್ತಿದೆ. ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯು ಈ ಮಹತ್ತರವಾದ ಯೋಜನೆಯನ್ನು ರೂಪಿಸುತ್ತಿದೆ.

 ಸಂಶುದ್ಧೀನ್ ಸಂಪ್ಯ

  ಪುತ್ತೂರು : ದಕ್ಷಿಣ ಭಾರತದಲ್ಲೇ ಅತೀ ದೊಡ್ಡ ಜೇನಿನ ಬಹು ಉತ್ಪನ್ನ ಸಂಸ್ಕರಣಾ ಘಟಕವೊಂದು ಪುತ್ತೂರಿನಲ್ಲಿ ಆರಂಭಗೊಳ್ಳುತ್ತಿದೆ. ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯು ಈ ಮಹತ್ತರವಾದ ಯೋಜನೆಯನ್ನು ರೂಪಿಸುತ್ತಿದೆ.

ಪುತ್ತೂರು ತಾಲೂಕಿನ ಮುಂಡೂರು ಎಂಬಲ್ಲಿ ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ಜೇನು ಸಂಸ್ಕರಣ ಘಟಕವನ್ನು ವಿಶಾಲವಾದ ಕಟ್ಟಡದಲ್ಲಿ ಸ್ಥಾಪಿಸಿದ್ದು, ಇಲ್ಲಿ ತಿಂಗಳಿಗೆ ಸುಮಾರು ೩೦೦ ಮೆಟ್ರಿಕ್ ಟನ್‌ಗಳಷ್ಟು ಜೇನನ್ನು ಸಂಸ್ಕರಿಸಬಹುದಾಗಿದೆ. ರಫ್ತು ಗುಣಮಟ್ಟದ ಜೇನು ಸಂಸ್ಕರಣ ಘಟಕದಲ್ಲಿ 80 ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲ ಗೃಹ (ಕೋಲ್ಡ್ ಸ್ಟೋರೇಜ್) ಸೌಲಭ್ಯದ ವ್ಯವಸ್ಥೆಯಿದೆ. ರೈತರಿಗೆ ತಾವು ಬೆಳೆದ ಹಣ್ಣು ತರಕಾರಿ ಇತ್ಯಾದಿ ಉತ್ಪನ್ನಗಳನ್ನು ಕಾಪಿಡುವ ಅಥವಾ ದಾಸ್ತಾನು ಮಾಡುವ ವ್ಯವಸ್ಥೆಯನ್ನು ನೀಡಲಾಗುತ್ತಿದೆ.

ಗ್ರಾಮಜನ್ಯ ಆರಂಭದಿಂದ ಜೇನಿನ ಕೃಷಿ ಮತ್ತು ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶ ಇಟ್ಟುಕೊಂಡಿದ್ದು, 2022 ರ ವೇಳೆಗೆ ಸುಮಾರು 20ಕ್ಕೂ ಅಧಿಕ ಜೇನಿನ ಉಪ ಉತ್ಪನ್ನಗಳ ಸಂಶೋಧನೆ ನಡೆಸಿತ್ತು. ಪುತ್ತೂರಿನಲ್ಲಿ ನಡೆದ ಕೃಷಿ ಯಂತ್ರ ಮೇಳದಲ್ಲಿ ಇದರ ಪ್ರದರ್ಶನ ನಡೆಸಿತ್ತು. ಈ ವಿಚಾರವನ್ನು ಗಮನಿಸಿದ ಕೇಂದ್ರ ಸರ್ಕಾರದ ಎಸ್‌ಎಫ್‌ಎಸಿ (ಸ್ಮಾಲ್ ಫಾರ್ಮರ್ಸ್‌ ಅಗ್ರೀ ಕನ್ಸೋರ್ಟಮ್) ಅನ್ನುವ ಸಂಸ್ಥೆಯು ಇನ್ನೊಂದು ಸರ್ಕಾರಿ ಸಂಸ್ಥೆಯಾದ ರಾಷ್ಟ್ರೀಯ ಜೇನು ಮಂಡಳಿ (ರಾಷ್ಟ್ರೀಯ ತೋಟಗಾರಿಕಾ ಇಲಾಖೆಯ ಅಧೀನ ಸಂಸ್ಥೆ) ಗಮನಕ್ಕೆ ತಂದು ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಗೆ ಒಂದು ಅತ್ಯಾಧುನಿಕ ಜೇನು ಸಂಸ್ಕರಣ ಘಟಕ ಸ್ಥಾಪಿಸಲು ಅನುಮತಿ ನೀಡಿತು ಮತ್ತು ಅದಕ್ಕಾಗಿ 2.22 ಕೋಟಿ ರುಪಾಯಿಗಳ ಅನುದಾನವನ್ನು ಸಹ ನೀಡಲಾಯಿತು.

ಜೇನಿನಿಂದ ನೈಸರ್ಗಿಕ ಉತ್ಪನ್ನ: ಪೆಟ್ರೋಲಿಯಂ ಜೆಲ್ಲಿ ಬದಲಿಗೆ ಜೇನು ಮೇಣವನ್ನು ಬಳಸಿ ಸಂಸ್ಥೆ ತಯಾರಿಸುವ ಸಂಪೂರ್ಣ ನೈಸರ್ಗಿಕ ಸ್ಕಿನ್ ಕೇರ್ ಕ್ರೀಮ್ ಗ್ರಾಹಕರ ಜನಪ್ರಿಯತೆ ಗಳಿಸಿದ್ದು, ಇದಕ್ಕೆ ಉತ್ತಮ ಬೇಡಿಕೆ ಬರುತ್ತಿದೆ. ಹಾಗೆಯೇ ಇಲ್ಲಿರುವ ಸೌಲಭ್ಯ ಬಳಸಿಕೊಂಡು ಚಳಿಗಾಲದಲ್ಲಿ ತುಟಿ ಒಡೆಯುವ ಸಮಸ್ಯೆಗೆ ಲಿಪ್ ಬಾಮ್, ಕಣ್ಣಿಗೆ ಹಚ್ಚುವ ನೈಸರ್ಗಿಕ ಕಾಡಿಗೆ ಇತ್ಯಾದಿ ತಯಾರಿಸಲಾಗುತ್ತದೆ.

ನೋಂದಾಯಿತ ಸ್ವಾಯತ್ತ ಸಂಸ್ಥೆ:

ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ, ೨೦೨೦ರಲ್ಲಿ ಕಾರ್ಪೊರೇಟ್ ಸಚಿವಾಲಯದ ಅಡಿಯಲ್ಲಿ ರಿಜಿಸ್ಟ್ರಾರ್ ಆಫ್ ಕಂಪನೀಸ್‌ನಲ್ಲಿ ನೋಂದಣಿಯಾದ ಸ್ವಾಯತ್ತ ಸಂಸ್ಥೆ. ಈ ಸಂಸ್ಥೆಯಲ್ಲಿ ಭಾರತದ ಯಾವುದೇ ಭಾಗದ ಪ್ರಜೆಗಳು ಶೇರುದಾರ ಆಗಬಹುದು, ಸಂಸ್ಥೆಯ ಲಾಭದಲ್ಲಿ ಪಾಲು ಹೊಂದಬಹುದಾಗಿದೆ. ಇಲ್ಲಿ ಕೃಷಿಕರೇ ಮಾಲೀಕರಾಗಿರುತ್ತಾರೆ, ರೈತರ ಬೆಳೆಗಳ ಮೌಲ್ಯವರ್ಧನೆ ಮತ್ತು ಮಾರಾಟ ರೈತ ಉತ್ಪಾದಕ ಕಂಪನಿಗಳ ಕೆಲಸವಾಗಿರುತ್ತದೆ ಎನ್ನುತ್ತಾರೆ ಗ್ರಾಮಜನ್ಯ ರೈತ ಉತ್ಪಾಧಕ ಸಂಸ್ಥೆಯ ನಿರ್ದೇಶಕ ನಿರಂಜನ್ ಪೋಳ್ಯ.ಅಂತಾರಾಷ್ಟ್ರೀಯ ಗುಣಮಟ್ಟದ ಪ್ರಯೋಗಾಲಯ:

ರೈತರಿಗೆ ನ್ಯಾಯಯುತ ಖರೀದಿ ದರ ನೀಡುವುದರ ಜೊತೆಗೆ ಗ್ರಾಹಕರಿಗೆ ಉತ್ತಮ ತರಗತಿಯ ಜೇನು ಸಿಗುವಂತೆ ಆಗಬೇಕು ಅನ್ನುವ ದೃಷ್ಟಿಯಿಂದ ತಾವು ರೈತರಿಂದ ಖರೀದಿಸುವ ಜೇನಿನ ಗುಣಮಟ್ಟ ಹಾಗೂ ಗ್ರಾಹಕರಿಗೆ ಮಾರಾಟ ಮಾಡುವ ಜೇನಿನ ಗುಣಮಟ್ಟದ ಖಾತರಿಯನ್ನು ಖಚಿತಪಡಿಸುವ ಸಲುವಾಗಿ ಗ್ರಾಮಜನ್ಯ ಸಂಸ್ಥೆಯು ಸುಮಾರು ೪೦ ಲಕ್ಷ ರುಪಾಯಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಪ್ರಯೋಗಾಲಯವನ್ನು ಸ್ಥಾಪಿಸಿದೆ. ಸುಮಾರು 8000ಚದರ ಅಡಿ ವಿಸ್ತೀರ್ಣದ ವಿಶಾಲ ಕಟ್ಟಡದಲ್ಲಿ ತಲೆಯೆತ್ತಿ ನಿಲ್ಲುತ್ತಿರುವ ಈ ಆಧುನಿಕ ಜೇನು ಸಂಸ್ಕರಣಾ ಘಟಕದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ.ಡಿಜಿಟಲ್ ರೂಪ:

ಸಂಸ್ಥೆಯ ಇತರ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ನಿರಂಜನ್ ಪೋಳ್ಯ, ಸಂಸ್ಥೆ ಜೇನು ಕೃಷಿಗೆ ಮಹತ್ವ ನೀಡಿದ್ದು, ಇದರ ಜೊತೆಗೆ ಅಡಕೆಗೆ ಪರ್ಯಾಯ ಬೆಳೆಯಾಗಿ ಹಲಸು ಮತ್ತು ಬಿದಿರು ಕೃಷಿಯನ್ನು ಉತ್ತೇಜಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಹಲಸಿನ ಮೌಲ್ಯ ವರ್ಧನೆ ಮಾಡುತ್ತಿದ್ದು, ಸುಮಾರು ೨೦ ಟನ್‌ಗಳಷ್ಟು ಹಲಸು ಸಂಸ್ಕರಿಸಿದೆ. ಈ ವರ್ಷ ಇದನ್ನು ಇನ್ನೂ ಹೆಚ್ಚು ಮಾಡುವ ಉದ್ದೇಶ ಹೊಂದಿದ್ದು, ಸದಸ್ಯರ ಜಾಗಗಳಲ್ಲಿನ ಹಲಸಿನ ಮರಗಳ ವಿಶೇಷತೆಗಳಿಗನುಗುಣವಾಗಿ ಚಿಪ್ಸ್, ಹಣ್ಣು, ಪಲ್ಪ್, ಹಪ್ಪಳ ಇತ್ಯಾದಿ ಉಪಯೋಗಗಳಿಗೆ ತಕ್ಕಂತೆ ಗುರುತಿಸಿದ್ದು, ಮುಂಬರುವ ದಿನಗಳಲ್ಲಿ ಇದಕ್ಕೆ ಡಿಜಿಟಲ್ ರೂಪ ನೀಡುವತ್ತ ಸಂಸ್ಥೆ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದ್ದಾರೆ.

ಸುಸ್ಥಿರ ಕೃಷಿ ಪದ್ದತಿಗೆ ಮಾಹಿತಿ:

ಮಣ್ಣು ಮತ್ತು ನೀರಿನ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಬಿದಿರಿನ ಒಪ್ಪಂದ ಆಧಾರಿತ ಕೃಷಿ ವ್ಯವಸ್ಥೆಯನ್ನು ಸಂಸ್ಥೆ ಪರಿಚಯಿಸಿದ್ದು, ಈಗಾಗಲೇ ಸುಮಾರು ೩೦ ಎಕರೆಗಳಷ್ಟು ಬಿದಿರು ತೋಟವನ್ನು ಸ್ಥಾಪಿಸಲಾಗಿದೆ. ಬಿದಿರಿಗೆ ಉತ್ತಮ ಮಾರುಕಟ್ಟೆ ಇದ್ದು ಸಂಸ್ಥೆಯು ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ಸುಮಾರು ಐದು ಬಗೆಯ ವಿಶೇಷ ತಳಿಗಳನ್ನು ಗುರುತಿಸಿದ್ದು ಗಿಡಗಳನ್ನು ರೈತರಿಗೆ ಸರಬರಾಜು ಮಾಡುತ್ತಿದೆ.ಸುಳ್ಯ ತಾಲೂಕಿನ ನಿಂತಿಕಲ್ಲು ಎಂಬಲ್ಲಿ ಶಾಖಾ ಕಚೇರಿಯನ್ನು ಹೊಂದಿರುವ ಗ್ರಾಮ ಜನ್ಯ ರೈತ ಉತ್ಪಾದಕ ಕಂಪನಿ, ಮಣ್ಣು ಮತ್ತು ನೀರಿನ ಪರೀಕ್ಷೆ, ಸಾವಯವ ಗೊಬ್ಬರ ಮತ್ತು ಇತರ ಒಳಸುರಿಗಳ ವಿತರಣೆಯ ಜೊತೆಗೆ ರೈತರಿಗೆ ಸುಸ್ಥಿರ ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

 ದಕ್ಷಿಣ ಭಾರತದ ಕೃಷಿಕರಿಗೆ ವರದಾನ ಆಗಲಿರುವ ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯ ಈ ಜೇನು ಸಂಸ್ಕರಣ ಘಟಕಕ್ಕೆ ಜಿಲ್ಲೆಯ ಮತ್ತು ರಾಜ್ಯದ ರೈತಾಪಿ ಸಮುದಾಯದವರು ಕೈಜೋಡಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ಜೇನು, ಹಲಸು ಮತ್ತು ಬಿದಿರು ಕೃಷಿಯನ್ನು ಆರಂಭಿಸಿ ಸಂಸ್ಥೆಯ ಘಟಕದಲ್ಲಿ ತಮ್ಮ ಅಗತ್ಯಕ್ಕೆ ತಕ್ಕಂತೆ ಉತ್ಪನ್ನಗಳನ್ನು ಸಂಸ್ಕರಿಸಿಕೊಂಡು ಅಥವಾ ಸಂಸ್ಥೆಗೆ ವಿಕ್ರಯಿಸಿ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು.

 ನಿರಂಜನ್ ಪೋಳ್ಯ

ನಿರ್ದೇಶಕರು ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ

Share this article