ಕನ್ನಡಪ್ರಭ ವಾರ್ತೆ ಮಣಿಪಾಲಜಗತ್ತಿನಾದ್ಯಂತ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿ ಕುಸಿತವಾಗಿರುವ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ದಕ್ಷಿಣ ಭಾರತದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಕುಸಿತವಾಗಿಲ್ಲ ಎಂದು ಮಾಹೆ ಮಣಿಪಾಲದ ಅಧ್ಯಯನದಿಂದ ಸಾಬೀತಾಗಿದೆ.ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಅಂಗಸಂಸ್ಥೆ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಕಳೆದ 17 ವರ್ಷಗಳಿಂದ ಅಧ್ಯಯನ ನಡೆಸಿದ್ದು, ಅಮೆರಿಕನ್ ಜರ್ನಲ್ ಆಫ್ ಮೆನ್ಸ್ ಹೆಲ್ತ್‌ನಲ್ಲಿ ಪ್ರಕಟವಾದ ಕೆಎಂಸಿಯ ಈ ಅಧ್ಯಯನ ವರದಿಯು ಪ್ರಕಟವಾಗಿದೆ. ಈ ವರದಿಯಲ್ಲಿ ಭಾರತದ ದಕ್ಷಿಣ ರಾಜ್ಯಗಳ ಪುರುಷರಲ್ಲಿ ವೀರ್ಯ ಗುಣಮಟ್ಟ ಕುಸಿದಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.2006ರಿಂದ 2022ರ ವರೆಗೆ ಮಾಹೆಯ ಆಂಡ್ರಾಲಜಿ ಪ್ರಯೋಗಾಲಯಕ್ಕೆ ಫಲವತ್ತತೆಯ ಪರೀಕ್ಷೆಗಾಗಿ ಭೇಟಿ ನೀಡಿದ ದ.ಭಾರತದ ಸುಮಾರು 12 ಸಾವಿರ ಪುರುಷರನ್ನು ದತ್ತಾಂಶಗಳನ್ನು ವಿಶ್ಲೇಷಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಭಾರತದಲ್ಲಿಯೇ ಅತಿದೊಡ್ಡ ಮತ್ತು ದೀರ್ಘಾವಧಿಯ ಈ ಅಧ್ಯಯನದಲ್ಲಿ ಒಂದಾಗಿ ಈ ಪುರುಷರ ವೀರ್ಯಾಣುಗಳ ಎಣಿಕೆ, ಅವುಗಳ ಚಲನಶೀಲತೆ, ಕಾರ್ಯಸಾಧ್ಯತೆ ಮತ್ತು ವೀರ್ಯ ರಚನೆ ಸೇರಿದಂತೆ ಪ್ರಮುಖ ಅಂಶಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಈ ವರದಿಯು ಒಟ್ಟಾರೆ ವೀರ್ಯ ಗುಣಮಟ್ಟ ಕುಸಿಯುತ್ತಿರುವ ಜಾಗತಿಕ ಪ್ರವೃತ್ತಿಯು ನಮ್ಮ ದೇಶಕ್ಕೆ ಅನ್ವಯಿಸುವುದಿಲ್ಲ ಎಂದು ಹೇಳಿದೆ.ಜರ್ಮನಿಯ ಮನ್ಸ್ಟರ್ ವಿವಿಯಲ್ಲಿ ವಿಶ್ವಸಂಸ್ಥೆಯಿಂದ ಗುರುತಿಸಲಾದ ಪುರುಷ ಫಲವತ್ತತೆಯನ್ನು ಅಧ್ಯಯನ ಮಾಡುವ ಸೆಂಟರ್ ಫಾರ್ ರಿಪ್ರೊಡಕ್ಟಿವ್ ಮೆಡಿಸಿನ್ ಆ್ಯಂಡ್ ಆಂಡ್ರಾಲಜಿಯ ನಿರ್ದೇಶಕ ಪ್ರೊ.ಸ್ಟೀಫನ್ ಸ್ಕ್ಲಾಟ್, ಭಾರತದ ಈ ದೀರ್ಘಕಾಲೀನ ದತ್ತಾಂಶವು ವೈಜ್ಞಾನಿಕವಾಗಿ ಬಹುಮುಖ್ಯವಾಗಿದೆ. ಇದು ಸಾರ್ವತ್ರಿಕ ವೀರ್ಯ ಬಿಕ್ಕಟ್ಟಿನ ಕಲ್ಪನೆಯನ್ನು ಪ್ರಶ್ನಿಸುತ್ತದೆ ಮತ್ತು ಪುರುಷ ಸಂತಾನೋತ್ಪತ್ತಿ ಆರೋಗ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರಾದೇಶಿಕ ದತ್ತಾಂಶಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಮಾಹೆಯಲ್ಲಿ ಡಾ. ಮೈಟೈ, ಡಾ. ಧಕ್ಷಾನ್ಯಾ, ಡಾ. ಶುಭಶ್ರೀ ಈ ಅಧ್ಯಯನ ಮಾಡಿದ್ದಾರೆ. ಈ ಸಂಶೋಧನೆಗಳು ಪುರುಷ ಫಲವತ್ತತೆಯ ಸುತ್ತಲಿನ ತಪ್ಪು ಮಾಹಿತಿ ಮತ್ತು ಆತಂಕವನ್ನು ಎದುರಿಸಲು ಮತ್ತು ಭಾರತದ ಇತರ ಪ್ರದೇಶಗಳಲ್ಲಿ ಮತ್ತಷ್ಟು ದೊಡ್ಡ ಪ್ರಮಾಣದ ಅಧ್ಯಯನಗಳನ್ನು ಪ್ರೋತ್ಸಾಹಿಸತ್ತದೆ ಎಂದು ಮಾಹೆ ಹೇಳಿದೆ.