ದಕ್ಷಿಣ ಶಿಕ್ಷಕರ ಕ್ಷೇತ್ರ ಜೆಡಿಎಸ್ ಟಿಕೆಟ್ ಸಿಗುವ ವಿಶ್ವಾಸವಿದೆ: ಕೆ.ಟಿ.ಶ್ರೀಕಂಠೇಗೌಡ

KannadaprabhaNewsNetwork | Updated : May 12 2024, 11:06 AM IST

ಸಾರಾಂಶ

 ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಇರುವುದಿಂದ ಪರಿಷತ್ತಿನ ಚುನಾವಣೆಗೂ ಮೈತ್ರಿ ಬಲ ಹೆಚ್ಚಲಿದೆ. ಹೀಗಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರವು ಜೆಡಿಎಸ್‌ಗೆ ಲಭ್ಯವಾಗಬಹುದು. ಇದರಿಂದ ನನಗೆ ಜೆಡಿಎಸ್ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ - ಕೆ.ಟಿ.ಶ್ರೀಕಂಠೇಗೌಡ

 ಮಂಡ್ಯ :  ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್ ಟಿಕೆಟ್ ನಿರಿಕ್ಷೀಸುತ್ತಿದ್ದೇನೆ ಎಂದು ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಎಸ್‌. ಭವನದಲ್ಲಿ ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರ ಮಂಡ್ಯ ವ್ಯಾಪ್ತಿಯ ಶಿಕ್ಷಕರ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜೂ.3ರಂದು ಪರಿಷತ್ ಚುನಾವಣೆ ಮತದಾನ ನಡೆಯಲಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರೇ ಸ್ಪರ್ಧೆ ಮಾಡಿ ಗೆಲ್ಲಿಸಿಕೊಂಡು ಶಿಕ್ಷಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಕಲ್ಪ ಶಿಕ್ಷಕರದ್ದಾಗಿದೆ ಎಂದರು.

ಪ್ರಾಚಾರ್ಯರೂ, ಶಿಕ್ಷಕರು ಆದ ನಾನು ಈ ಭಾರಿ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧೆ ಮಾಡಲು ಒತ್ತಾಯವಿದ್ದು ಅದರ ಮೇರೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಇರುವುದಿಂದ ಪರಿಷತ್ತಿನ ಚುನಾವಣೆಗೂ ಮೈತ್ರಿ ಬಲ ಹೆಚ್ಚಲಿದೆ. ಹೀಗಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರವು ಜೆಡಿಎಸ್‌ಗೆ ಲಭ್ಯವಾಗಬಹುದು. ಇದರಿಂದ ನನಗೆ ಜೆಡಿಎಸ್ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ಕಳೆದ 13 ತಿಂಗಳಿಂದಲೇ 4 ಜಿಲ್ಲೆಗಳಲ್ಲಿ ಸತತ ಮೂರು ಮೂರು ಸುತ್ತು ಪ್ರತಿ ತಾಲೂಕಿನ ಶಿಕ್ಷಕ ಮತದಾರರನ್ನು ಸಂಪರ್ಕ ಮಾಡಿದ್ದೇನೆ. ಎಲ್ಲರೂ ಭರವಸೆ ನೀಡಿದ್ದಾರೆ. ನಾವು ಬದಲಾವಣೆ ಬಯಸುತ್ತೇವೆ. ಈ ಬಾರಿ ನಿಮಗೆ ಅವಕಾಶ ಮಾಡಿಕೊಡುತ್ತೇವೆ. ನಮ್ಮ ಪ್ರತಿನಿಧಿ ಒಬ್ಬ ಶಿಕ್ಷಕನೇ ಇರಬೇಕು ಎನ್ನುವುದು ನಮ್ಮ ಬಯಕೆಯಾದೆ ಎಂದು ಮತದಾರರು ಭರವಸೆ ನೀಡಿದ್ದಾರೆ ಎಂದರು.

ಸದಸನದಲ್ಲಿ ನಾನು ಮತನಾಡುವಾಗ ಪದವೀಧರರ ಸಮಸ್ಯೆಗಳಿಗಿಂತ ಶಿಕ್ಷಕರ ಸಮಸ್ಯೆಗಳ ಕುರಿತು ಹೆಚ್ಚು ಚರ್ಚೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿದ್ದೇನೆ. ಹಳೇ ಪಿಂಚಣಿ ವ್ಯವಸ್ಥೆ ಜಾರಿಯಾಗಬೇಕಿದೆ. ಜಾರಿ ಮಾಡಿಸುವ ಸವಾಲು ನಮ್ಮ ಮುಂದಿದೆ ಎಂದು ನುಡಿದರು.

ಸಭೆಯಲ್ಲಿ ಪಿಇಟಿ ಸಂಸ್ಥೆಯ ರಾಮಲಿಂಗಯ್ಯ, ವಕೀಲ ತುಳಸೀಧರ್ ಮತ್ತು ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಅವರ ಬೆಂಬಲಿಗರು ಹಿತೈಹಿಸಿಗಳು ಹಾಜರಿದ್ದರು.

ನಾನು ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ: ಕೆ.ಆರ್.ರಾಜು

ಮಂಡ್ಯ:ಅನುದಾನಿತ ಶಿಕ್ಷಕರ ಸಮಸ್ಯೆಗೆ ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿರುವ ನಾನು ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿತನಾಗಿದ್ದೇನೆ ಎಂದು ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಮೈಸೂರು ವಿಭಾಗೀಯ ಪ್ರಮುಖ್ ಕೆ.ಆರ್.ರಾಜು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 23 ವರ್ಷಗಳ ಕಾಲ ಅನೇಕ ಅನುದಾನಿರಹಿತ ಶಿಕ್ಷಕನಾಗಿ ಹಲವು ಸಂಸ್ಥೆಗಳಲ್ಲಿ ಗಣಿತ ವಿಷಯ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದೇನೆ. ಪ್ರಸ್ತುತ ಮಂಡ್ಯದ ಪ್ರತಿಷ್ಠಿತ ಶಾಲೆಯಲ್ಲಿ ಎನ್‌ಸಿಸಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಅನೇಕ ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ತೊಡಗಿದ್ದೇನೆ ಎಂದರು.ವಿದ್ಯಾರ್ಥಿ ದಿಸೆಯಲ್ಲಿಯಲ್ಲಿ ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡು ಹಲವು ಹೋರಾಟ, ಕಾರ್ಯಕ್ರಮ ಆಯೋಜಿಸಿ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಿದ್ದೇನೆ. ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಈಗ ಪ್ರಮುಖ್‌ನಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ ಎಂದು ವಿವರಿಸಿದರು.

ಕಳೆದ ಹಲವು ವರ್ಷಗಳಿಂದ ಅನುದಾನ ರಹಿತ ಹಾಗೂ ಅನುದಾನಿತ ಶಿಕ್ಷಕರನ್ನು ಸಂಘಟಿಸಿ ಹೋರಾಟ ರೂಪಿಸಿ ಶಿಕ್ಷಕರ ಸಮಸ್ಯೆ ಪರಿಹರಿಸುತ್ತಿದ್ದೇನೆ. ಶಿಕ್ಷಕರ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ. ಸರ್ಕಾರಿ ಮುಖ್ಯ ಶಿಕ್ಷಕರ 7525 ಬಡ್ತಿ ಹೋರಾಟದಲ್ಲಿ ಭಾಗವಹಿಸಿ ಸರ್ಕಾರದ ಗಮನ ಸೆಳೆದಿದ್ದೇನೆ ಎಂದರು.ಶಿಕ್ಷಕರ ಹೋರಾಟದಲ್ಲಿ ಸಕ್ರೀಯವಾಗಿರುವ ನನಗೆ ಬಿಜೆಪಿ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸಿ ಚುನಾವಣೆ ಎದುರಿಸುವೆ ಎಂದರು. ಸುದ್ದಿಗೋಷ್ಠಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಶಿವಕುಮಾರ್ ಇದ್ದರು.

Share this article