ಹುಬ್ಬಳ್ಳಿ:
ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್, ಒಟ್ಟು 41 ರೈಲ್ವೆ ನೌಕರರಿಗೆ ವಿಶಿಷ್ಟ ರೈಲ್ ಸೇವಾ ಪುರಸ್ಕಾರ, 21 ನೌಕರರಿಗೆ ರೈಲ್ ಸೇವಾ ಪುರಸ್ಕಾರ ಹಾಗೂ ಕರ್ತವ್ಯದಲ್ಲಿ ಅಪ್ರತಿಮ ದಕ್ಷತೆ ಮೆರೆದ 31 ನೌಕರರಿಗೆ ಮೆರಿಟ್ ಪ್ರಮಾಣ ಪತ್ರ ನೀಡಿ ಗೌರವಿಸಿದರು.
2024-25ನೇ ಸಾಲಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ವಿವಿಧ ವಿಭಾಗಗಳಿಗೆ ಒಟ್ಟು 25 ದಕ್ಷತಾ ಶೀಲ್ಡ್ ನೀಡಲಾಯಿತು. ಬೆಂಗಳೂರು ವಿಭಾಗದಲ್ಲಿ ಖಾತೆ, ವಾಣಿಜ್ಯ, ವಿದ್ಯುತ್, ಸಿಬ್ಬಂದಿ, ಭದ್ರತೆ, ಅಂತರ ವಿಭಾಗೀಯ ಸುರಕ್ಷತೆ ಹಾಗೂ ಪ್ರಮುಖ ಕಾರ್ಯಕ್ಷಮತೆ ಸೂಚಕ ತಂಡವು ಶೀಲ್ಡ್‌ಗಳನ್ನು ತನ್ನದಾಗಿಸಿಕೊಂಡಿದೆ.ಹುಬ್ಬಳ್ಳಿ ವಿಭಾಗದಲ್ಲಿ ಕಾರ್ಯಾಚರಣೆ, ಅಂತರ ವಿಭಾಗೀಯ ರಾಜಭಾಷಾ ರೋಲಿಂಗ್ ಶೀಲ್ಡ್, ರೈಲ್ ಮದದ್ ಹಾಗೂ ನವೀನ ಆವಿಷ್ಕಾರ (ಎಂಎಸ್ ಆ್ಯಕ್ಸಸ್ ಆಧಾರಿತ ಸಿಬ್ಬಂದಿ ದತ್ತಾಂಶ ನಿರ್ವಹಣೆ) ವಿಭಾಗಗಳಲ್ಲಿ ದಕ್ಷತಾ ಶೀಲ್ಡ್, ಮೈಸೂರು ವಿಭಾಗವು ಯಾಂತ್ರಿಕ, ಸಿಗ್ನಲ್ ಮತ್ತು ದೂರಸಂಪರ್ಕ, ವಿದ್ಯುತ್ ಟಿಆರ್‌ಡಿ ವಿತರಣೆ ಮತ್ತು ಕಾರ್ಯಾಗಾರ ವಿಭಾಗಗಳಲ್ಲಿ ದಕ್ಷತಾ ಶೀಲ್ಡ್, ಮೈಸೂರು ವಿಭಾಗ ಹಾಗೂ ಹುಬ್ಬಳ್ಳಿಯ ಜನರಲ್ ಸ್ಟೋರ್ಸ್ ಡಿಪೋ ಸ್ಕ್ರ್ಯಾಪ್ ಕಾರ್ಯಕ್ಷಮತೆಯ ಶೀಲ್ಡ್ ಪಡೆದವು.
ವರ್ಕ್‌ಶಾಪ್ ಕಾರ್ಯಕ್ಷಮತಾ ಶೀಲ್ಡ್‌ನ್ನು ಮೈಸೂರು ಕೇಂದ್ರೀಯ ಕಾರ್ಯಾಗಾರ ತನ್ನದಾಗಿಸಿಕೊಂಡಿತು. ಎಂಜಿನಿಯರಿಂಗ್ ವಿಭಾಗದಲ್ಲಿ ಹುಬ್ಬಳ್ಳಿ ಮತ್ತು ಮೈಸೂರು ವಿಭಾಗಗಳು ಜಂಟಿಯಾಗಿ ಪ್ರಶಸ್ತಿ ಹಂಚಿಕೊಂಡಿವೆ. ವೈದ್ಯಕೀಯ ವಿಭಾಗದಲ್ಲಿ ಹುಬ್ಬಳ್ಳಿ ಕೇಂದ್ರ ರೈಲ್ವೆ ಆಸ್ಪತ್ರೆ ಮತ್ತು ಹುಬ್ಬಳ್ಳಿ ವಿಭಾಗದ ಆರೋಗ್ಯ ಘಟಕಗಳು ಪ್ರಶಸ್ತಿ ಪಡೆದವು.ಹುಬ್ಬಳ್ಳಿಯ ಯಾಂತ್ರಿಕ ಸ್ಟೋರ್ಸ್ ಡಿಪೋ ಮತ್ತು ಜನರಲ್ ಸ್ಟೋರ್ಸ್ ಡಿಪೋಗಳು ಸ್ಟೋರ್ಸ್ ಶೀಲ್ಡ್ ತನ್ನದಾಗಿಸಿಕೊಂಡವು. ಪ್ರಮುಖ ನಿಲ್ದಾಣ ವಿಭಾಗದಲ್ಲಿ ಧಾರವಾಡ ಹಾಗೂ ಸಣ್ಣ ನಿಲ್ದಾಣ ವಿಭಾಗದಲ್ಲಿ ಶ್ರವಣಬೆಳಗೊಳ ನಿಲ್ದಾಣ ಅತ್ಯುತ್ತಮ ನಿರ್ವಹಣಾ ನಿಲ್ದಾಣ ಪ್ರಶಸ್ತಿ ಪಡೆದಿವೆ. ಹುಬ್ಬಳ್ಳಿ ವಿಭಾಗದ ಹುಬ್ಬಳ್ಳಿ-ಚೆನ್ನೈ ಎಕ್ಸ್‌ಪ್ರೆಸ್ (17313/14) ಅತ್ಯುತ್ತಮ ರೈಲು ಹಾಗೂ ಬೆಂಗಳೂರು ವಿಭಾಗದ ಕೃಷ್ಣರಾಜಪುರಂ ಡೀಸೆಲ್ ಶೆಡ್ ಅತ್ಯುತ್ತಮ ಶೆಡ್ ಪ್ರಶಸ್ತಿಗೆ ಪಾತ್ರವಾಗಿವೆ. ಹುಬ್ಬಳ್ಳಿಯ ಉಪ ಮುಖ್ಯ ಎಂಜಿನಿಯರ್ (ನಿರ್ಮಾಣ-IV) ವಿಭಾಗಕ್ಕೆ ಅತ್ಯುತ್ತಮ ನಿರ್ಮಾಣ ವಿಭಾಗ ಹಾಗೂ ಹುಬ್ಬಳ್ಳಿ ರನ್ನಿಂಗ್ ರೂಮ್‌ಗೆ ಅತ್ಯುತ್ತಮ ನಿರ್ವಹಣಾ ಪ್ರಶಸ್ತಿ ಲಭಿಸಿದೆ.
ಈ ವೇಳೆ ಹುಬ್ಬಳ್ಳಿಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ, ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ಇಲಾಖೆಗಳ ಪ್ರಧಾನ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು, ಎಸ್‌ಡಬ್ಲ್ಯೂಆರ್ ಮಹಿಳಾ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ಸಂಜೀಲಾ ಮಾಥುರ್ ಸೇರಿದಂತೆ ಹಲವರಿದ್ದರು. ಕಾರ್ಮಿಕ ಅಧಿಕಾರಿ ಸೂರ್ಯ ಪ್ರಕಾಶ್ ಸ್ವಾಗತಿಸಿದರು.