ದಕ್ಷಿಣ ಸಮರ: ಕಾಂಗ್ರೆಸ್‌-ಬಿಜೆಪಿ ಬುನಾದಿ ಕಾರ್ಯ ಶುರು!

KannadaprabhaNewsNetwork |  
Published : Mar 14, 2026, 01:30 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಸಮರ ಯಾವುದೇ ಕ್ಷಣದಲ್ಲಾದರೂ ಘೋಷಣೆಯಾಗುವ ಸಾಧ್ಯತೆ ಬೆನ್ನಲ್ಲೇ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳಲ್ಲಿ ಅಭ್ಯರ್ಥಿಗಳ ವಿಚಾರದ ಗೊಂದಲ ಪರಿಹರಿಸುವ, ಗುಂಪುಗಾರಿಕೆಗಳನ್ನು ಶಮನ ಮಾಡುವ ಪ್ರಯತ್ನಗಳು ಉಭಯ ಪಕ್ಷಗಳ ಕೇಂದ್ರ ಹಾಗೂ ರಾಜ್ಯ ನಾಯಕರಿಂದ ಆಗುತ್ತಿದೆ. ಈ ಬೆಳವಣಿಗೆ ಕಾರ್ಯಕರ್ತರಲ್ಲಿ ಹೊಸ ಹುರುಪು, ಕುತೂಹಲ ಮೂಡಿಸಿದೆ.

- ಶಾಮನೂರು ಮೊಮ್ಮಗ ಸಮರ್ಥಗೆ ಟಿಕೆಟ್ ನೀಡುವಂತೆ ಸಿಎಂ, ಡಿಸಿಎಂಗೆ ಕಾಂಗ್ರೆಸ್ ದಂಡು ಮನವಿ - ಸಿದ್ದೇಶ್ವರ- ಹರೀಶ ಬಣ, ರೇಣುಕಾಚಾರ್ಯ- ಶಿವಯೋಗಿ ಸ್ವಾಮಿ ಬಣದ ಆಕಾಂಕ್ಷಿಗಳಿಂದ ಟಿಕೆಟ್‌ಗೆ ಮನವಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಸಮರ ಯಾವುದೇ ಕ್ಷಣದಲ್ಲಾದರೂ ಘೋಷಣೆಯಾಗುವ ಸಾಧ್ಯತೆ ಬೆನ್ನಲ್ಲೇ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳಲ್ಲಿ ಅಭ್ಯರ್ಥಿಗಳ ವಿಚಾರದ ಗೊಂದಲ ಪರಿಹರಿಸುವ, ಗುಂಪುಗಾರಿಕೆಗಳನ್ನು ಶಮನ ಮಾಡುವ ಪ್ರಯತ್ನಗಳು ಉಭಯ ಪಕ್ಷಗಳ ಕೇಂದ್ರ ಹಾಗೂ ರಾಜ್ಯ ನಾಯಕರಿಂದ ಆಗುತ್ತಿದೆ. ಈ ಬೆಳವಣಿಗೆ ಕಾರ್ಯಕರ್ತರಲ್ಲಿ ಹೊಸ ಹುರುಪು, ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ, ಹಿರಿಯ ನಾಯಕ ದಿವಂಗತ ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸುತ್ತಿದ್ದ ದಕ್ಷಿಣ ಕ್ಷೇತ್ರವನ್ನು ಶತಾಯಗತಾಯ ಉಳಿಸಿಕೊಳ್ಳುವ ಅನಿವಾರ್ಯತೆ ಆಡಳಿತ ಪಕ್ಷಕ್ಕಿದೆ. ದಾವಣಗೆರೆ ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಾಲಿಗೆ ಶಾಮನೂರು ಶಿವಶಂಕರಪ್ಪನವರು ಸ್ಪರ್ಧಿಸಿದ್ದ ಕಾರಣಕ್ಕಾಗಿಯೇ ಕಬ್ಬಿಣದ ಕಡಲೆಯಾಗಿದ್ದ ದಕ್ಷಿಣ ಕ್ಷೇತ್ರವನ್ನು ಹೇಗಾದರೂ ಮಾಡಿ ಹುರಿಗಡಲೆ ಮಾಡಿಕೊಳ್ಳುವ ಲೆಕ್ಕಾಚಾರ ವಿಪಕ್ಷ ಬಿಜೆಪಿಯದ್ದು.

ಅಭ್ಯರ್ಥಿ ಆಯ್ಕೆ ಜವಾಬ್ದಾರಿ ಎಸ್ಸೆಸ್ಸೆಂಗೆ ಕೊಡಬೇಕು:

ಬೆಂಗಳೂರಿಗೆ ದಾವಣಗೆರೆಯಿಂದ ಗುರುವಾರ ಸಾವಿರಾರು ಜನರು ತೆರಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿ, ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ಸಮರ್ಥ ಎಂ. ಶಾಮನೂರುಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು. ದಾವಣಗೆರೆ ಟಿಕೆಟ್ ಆಯ್ಕೆ ವಿಚಾರವನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೇ ಬಿಡಬೇಕು ಎಂಬುದು ಅಹಿಂದ ವರ್ಗಗಳ ಮುಖಂಡರು, ಪಕ್ಷದ ಪದಾಧಿಕಾರಿಗಳು, ಹಿರಿಯ- ಕಿರಿಯ ಮುಖಂಡರು, ಕಾರ್ಯಕರ್ತರು ಉಭಯ ನಾಯಕರಿಗೆ ಸಚಿವ ಎಸ್‌.ಎಸ್‌.ಎಂ. ಸಮಕ್ಷಮದಲ್ಲೇ ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಗೃಹ ಕಚೇರಿಯಲ್ಲಿ, ನಂತರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ದಾವಣಗೆರೆ ದಕ್ಷಿಣ ಕ್ಷೇತ್ರ ಟಿಕೆಟ್‌ ಶಾಮನೂರು ಮೊಮ್ಮಗ ಸಮರ್ಥಗೆ ನೀಡುವಂತೆ, ಒಂದು ವೇಳೆ ಶಾಮನೂರು ಕುಟುಂಬಕ್ಕೆ ಕೊಡದಿದ್ದರೆ ಕಾಂಗ್ರೆಸ್‌ ಭದ್ರಕೋಟೆ ಕಾಂಗ್ರೆಸ್ ಸಂಕಷ್ಟ ಎದುರಿಸಬೇಕಾಗುತ್ತದೆಂಬ ಮಾತುಗಳನ್ನು ಪಕ್ಷದ ಕೆಲ ಮುಖಂಡರು, ಹಿರಿಯರು ಉಭಯ ನಾಯಕರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.

ಇದೇ ವೇಳೆ ಮುಖಂಡರು, ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ದಕ್ಷಿಣದಲ್ಲಿ ಗೆಲ್ಲುವಂತಹ ಸೂಕ್ತ ಅಭ್ಯರ್ಥಿಯನ್ನು ನಾವು, ನೀವೆಲ್ಲರೂ ಕುಳಿತು, ಚರ್ಚಿಸಿ, ಆಯ್ಕೆ ಮಾಡೋಣ. ಹೈಕಮಾಂಡ್ ಹೇಳಿದ್ದನ್ನು ನಾವೆಲ್ಲರೂ ಕೇಳಬೇಕಾಗುತ್ತದೆ. ಇಂತಹವರಿಗೆ ಟಿಕೆಟ್ ನೀಡುವಂತೆ ಹೇಳಿ, ಊರಿನಲ್ಲಿ ವಾತಾವರಣ ಹಾಳು ಮಾಡುವುದೂ ಬೇಡ. ಇದೇ ರೀತಿ ಮುಂದುವರಿದರೆ ಆಡಿಕೊಳ್ಳುವವರಿಗೆ ನಾವೇ ಚಾಪೆ ಹಾಸಿಕೊಟ್ಟಂತಾಗುತ್ತದೆ. ಸೂಕ್ತ ಅಭ್ಯರ್ಥಿಯನ್ನೇ ದಕ್ಷಿಣ ಕ್ಷೇತ್ರಕ್ಕೆ ಆಯ್ಕೆ ಮಾಡೋಣ. ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರೋಣ ಎಂದು ತಿಳಿಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಮಾಜಿ ಮೇಯರ್ ಕೆ.ಚಮನ್ ಸಾಬ್, ಮಾಜಿ ಉಪ ಮೇಯರ್ ಅಬ್ದುಲ್ ಲತೀಫ್, ತಂಜೀಂ ಸಮಿತಿ ಅಧ್ಯಕ್ಷ ದಾದು ಸೇಟ್‌, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಶಾಮನೂರು ಟಿ.ಬಸವರಾಜ, ಶ್ರೀಕಾಂತ ಬಗರೆ, ಸೀಮೆಣ್ಣೆ ಮಲ್ಲೇಶ, ಎಸ್.ಮಲ್ಲಿಕಾರ್ಜುನ, ಬಸಾಪುರ ಕೊಟ್ರಯ್ಯ, ಎ.ನಾಗರಾಜ, ಎಸ್.ಎಸ್.ಗಿರೀಶ, ಪರಸಪ್ಪ, ಎಸ್.ಎಸ್.ಗಿರೀಶ, ಡೋಲಿ ಚಂದ್ರು ಇತರರು ಇದ್ದರು.

- - -

(ಬಾಕ್ಸ್‌) * ಜಗನ್ನಾಥ ಭವನದಲ್ಲಿ ಒಗ್ಗೂಡುವ ಮಂತ್ರ ಬೋಧನೆ!ಮತ್ತೊಂದು ಕಡೆ ಬಿಜೆಪಿ ಸಹ ಬೆಂಗಳೂರಿನ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಪ್ರೀತಂ ಗೌಡರ ಸಮಕ್ಷದಲ್ಲಿ ನಡೆದ ಸಭೆಗೆ ಹರಿಹರ ಶಾಸಕ ಬಿ.ಪಿ.ಹರೀಶ, ಲೋಕಸಭೆ ಚುನಾವಣೆ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ನೇತೃತ್ವದ ಒಂದು ಗುಂಪು, ಮತ್ತೊಂದು ಗುಂಪು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಸಚೇತ .ಎ.ಎಚ್.ಶಿವಯೋಗಿ ಸ್ವಾಮಿ ನೇತೃತ್ವದ ಮತ್ತೊಂದು ಗುಂಪು ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿತು. ಇದೇ ವೇಳೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಈ ಸಲ ಗೆಲ್ಲುವ ಸಾಧ್ಯತೆ ದಟ್ಟವಾಗಿದ್ದು, ಪಕ್ಷದಲ್ಲಿ ಗುಂಪುಗಾರಿಕೆ ಬಿಟ್ಟು ಒಂದಾಗಿ ಕೆಲಸ ಮಾಡಿರಿ. ಏನೇ ಸಮಸ್ಯೆ, ಗೊಂದಲ, ಭಿನ್ನಾಭಿಪ್ರಾಯಗಳಿದ್ದರೂ ಕುಳಿತು ಚರ್ಚಿಸಿ, ಪರಿಹರಿಸಿಕೊಳ್ಳಿ ಎಂದು ಹಿರಿಯ ನಾಯಕ ಪ್ರಹ್ಲಾದ ಜೋಷಿ ಉಭಯ ಗುಂಪಿಗೆ ಕಿವಿಮಾತು ಹೇಳಿದರು.

ಇದೇ ವೇಳೆ ದಕ್ಷಿಣ ಕ್ಷೇತ್ರಕ್ಕೆ ಜಿ.ಎಂ. ಸಿದ್ದೇಶ್ವರ- ಬಿ.ಪಿ.ಹರೀಶ ಗುಂಪಿನಿಂದ ಯಶವಂತ ರಾವ್ ಜಾಧವ್, ಟಿ.ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ, ದೇವರಮನಿ ಶಿವಕುಮಾರ ಆಕಾಂಕ್ಷಿಗಳಿದ್ದಾರೆಂದು ಮನವಿ ಅರ್ಪಿಸಿದರು. ಎಂ. ಪಿ.ರೇಣುಕಾಚಾರ್ಯ- ಡಾ.ಶಿವಯೋಗಿ ಸ್ವಾಮಿ ಗುಂಪಿನಿಂದ ಬಿ.ಜಿ. ಅಜಯಕುಮಾರ ಒಬ್ಬರಷ್ಟೇ ಆಕಾಂಕ್ಷಿಗಳೆಂದು ಮನವಿ ಅರ್ಪಿಸಲಾಯಿತು.

ಯಶವಂತ ರಾವ್‌ಗೆ ಎಷ್ಟು ಸಲ ಚುನಾವಣೆಗೆ ಸ್ಪರ್ಧೆ ಮಾಡಿದ್ದೀರಿ, ಎಷ್ಟು ಮತಗಳ ಅಂತರದಲ್ಲಿ ಹಿನ್ನಡೆಯಾಗಿತ್ತು ಎಂಬುದನ್ನು, ಕಳೆದ ಬಾರಿ ಬಿ.ಜಿ. ಅಜಯಕುಮಾರ ಎಷ್ಟು ಮತದಿಂದ ಸೋಲನುಭವಿಸಿದ್ದರು ಎಂಬುದೂ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾಹಿತಿ ಪಡೆದು, ಅಂತಿಮವಾಗಿ ಉಪ ಚುನಾವಣೆಯಲ್ಲಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಗೆಲುವೇ ನಿಮ್ಮ ಗುರಿಯಾಗಬೇಕು ಎಂದು ರಾಜ್ಯಾಧ್ಯಕ್ಷರು, ಕೇಂದ್ರ ಸಚಿವರು, ಮಾಜಿ ಸಚಿವರು ದಾವಣಗೆರೆ ಜಿಲ್ಲೆಯ ಬಣಗಳ ನಾಯಕರು, ಗುಂಪಿನಲ್ಲಿ ಗುರುತಿಸಿಕೊಂಡವರಿಗೆ ತಿಳಿಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಸಿದ್ದೇಶ್ವರ ಬಣದ ಟಿಕೆಟ್ ಆಕಾಂಕ್ಷಿ ಯಶವಂತ ರಾವ್ ಜಾಧವ್, ಎಚ್.ಎಸ್. ಶಿವಕುಮಾರ ತುಮ್ಕೋಸ್, ಎಸ್.ಎಂ.ವೀರೇಶ ಹನಗವಾಡಿ, ಶಿವನಗೌಡ ಪಾಟೀಲ, ಗುರು ಸೋಗಿ, ಟಿಂಕರ್ ಮಂಜಣ್ಣ ಇತರರು ಇದ್ದರು.

ರೇಣುಕಾಚಾರ್ಯ ಗುಂಪಿನಿಂದ ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಎಂ.ಬಸವರಾಜ ನಾಯ್ಕ, ಟಿಕೆಟ್ ಆಕಾಂಕ್ಷಿ ಬಿ.ಜಿ.ಅಜಯಕುಮಾರ, ಮಾಡಾಳ್‌ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ ಇತರರು ಇದ್ದರು.

- - -

(- ಪ್ರತ್ಯೇಕ ಪಕ್ಷಗಳ ಫೋಟೋಗಳಿವೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ