ಕನ್ನಡಪ್ರಭ ವಾರ್ತೆ ಕಲಬುರಗಿ
ಕಳೆದ ವರ್ಷ ತೀವ್ರ ಬರಗಾಲದಿಂದ ತತ್ತರಿಸಿದ ಕಲಬುರಗಿ ಜಿಲ್ಲೆಗೆ ಈ ವರ್ಷ ಉತ್ತಮ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಸಗಜವಾಗಿಯೇ ಬಿತ್ತನೆ ಕ್ಷೇತ್ರ ಹೆಚ್ಚಾಗಲಿದ್ದು, ಬೀಜ, ರಸಗೊಬ್ಬರ ಕೊರತೆಯಾಗದಂತೆ ಆರ್.ಎಸ್.ಕೆ. ಮೂಲಕ ರೈತರಿಗೆ ಸಮರ್ಪಕವಾಗಿ ವಿತರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.ಇಲ್ಲಿನ ಡಿ.ಸಿ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ 2024-25ನೇ ಸಾಲಿನ ಮುಂಗಾರು ಸಿದ್ಧತೆ ಕುರಿತು ಚರ್ಚಿಸಲು ಕೃಷಿ, ತೋಟಗಾರಿಕೆ ಹಾಗೂ ಇತರೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ದಾಸ್ತಾನು, ಖರ್ಚು ಬಗ್ಗೆ ರೈತರಿಗೆ ಆಗಾಗ ಮಾಹಿತಿ ನೀಡಬೇಕು. ರೈತರು ಅತಂಕ ಪಡುವಂತಹ ಸ್ಥಿತಿ ಎಲ್ಲಿಯೂ ನಿರ್ಮಾಣವಾಗಬಾರದು. ತಾಲೂಕಿನ ಬೇಡಿಕೆಯಂತೆ ಹಂಚಿಕೆ ಮಾಡಬೇಕೆಂದರು.
2023-24 ನೇ ಸಾಲಿನಲ್ಲಿ ಬೆಳೆ ವಿಮೆಗೆ ಸಂಬಂಧಿಸಿದಂತೆ ತೊಗರಿ ಬೆಳೆಯ ಮಧ್ಯಂತರ ಪರಿಹಾರದ ಹಣ ರೈತರ ಖಾತೆಗೆ ಜಮೆಯಾಗಿರುತ್ತದೆ. ಉಳಿದ ಸ್ಥಳಿಯ ಪ್ರಕೃತಿ ವಿಕೋಪದಡಿ ಹಾಗೂ ಬೆಳೆ ಕಟಾವು ಪ್ರಯೋಗದ ಆಧಾರದ ಬೆಳೆ ವಿಮೆ ಹಣವನ್ನು ಒಂದು ವಾರದೂಳಗೆ ರೈತರ ಖಾತೆಗೆ ಜಮೆ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಡಿ.ಸಿ. ಅವರು, ಮುಂಗಾರು ಸಿದ್ಧತೆ ಕುರಿತ ಕರೆಯಲಾದ ಪ್ರಮುಖ ಸಭೆಗೆ ಯೂನಿವರ್ಸಲ್ ಸೊಂಪು ಜನರಲ್ ಇನ್ಶುರೆನ್ಸ್ ವಿಮಾ ಸಂಸ್ಥೆಯ ರಾಜ್ಯ ಪ್ರತಿನಿಧಿ ಗೈರಾಗಿದಕ್ಕೆ ಅತೃಪ್ತಿ ಹೊರಹಾಕಿದ ಜಿಲ್ಲಾಧಿಕಾರಿಗಳು ಈ ರೀತಿಯ ನಿಷ್ಕಾಳಜಿ ಸಹಿಸಿವುದಿಲ್ಲ. ಇದನ್ನು ಮುಂದುವರೆಸಿದಲ್ಲಿ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಸಂಸ್ಥೆಯ ಜಿಲ್ಲಾ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರು.8.65 ಲಕ್ಷ ಬಿತ್ತನೆ ಗುರಿ:
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆಯಂತೆ ಇದದೂವರೆಗೆ 60 ಮಿ.ಮಿ. ಮಳೆಯಾಗಬೇಕಿತ್ತು. 86 ಮಿ.ಮಿ. ಮಳೆಯಾಗಿದ್ದು, ಇದು ಶೇ.44ರಷ್ಟು ಹೆಚ್ಚಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಪ್ರಮುಖ ಬೆಳೆಗಳಾದ ತೊಗರಿ 5,93,050 ಹೆಕ್ಟೇರ್ ಹೆಸರು 51,500 ಹೇ, ಉದ್ದು 24,250 ಹೇ, ಸೋಯಾಬೀನ್ 42,500, ಇತರೆ ಬೆಳೆಗಳು 1,54,585 ಹೆಕ್ಟೇರ್ ಸೇರಿ ಒಟ್ಟು 8,65,885 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೂಂದಲಾಗಿದೆ ಎಂದು ಪ್ರಸಕ್ತ ಸಾಲಿನ ಮುಂಗಾರು ಸಿದ್ಧತೆ ಕುರಿತು ಸಭೆಗೆ ವಿವರಿಸಿದರು.ಪ್ರಸ್ತುತ ಸಾಲಿನಲ್ಲಿ 19,461.29 ಕ್ವಿಂಟಲ್ ಬೀಜ ವಿತರಣೆ ಕಾರ್ಯಕ್ರಮವಿದ್ದು, ಪ್ರಮುಖ ಬೆಳೆಗಳಾದ ತೊಗರಿ 6,801.74 ಕ್ವಿಂಟಲ್, ಹೆಸರು 642.13 ಕ್ವಿಂಟಲ್, ಉದ್ದು 413.07 ಕ್ವಿಂಟಲ್, ಸೋಯಾಬೀನ್ 11,255.05 ಕ್ವಿಂಟಲ್ ಬೀಜ ವಿತರಣೆ ಗುರಿ ಇದೆ. ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟಾರೆ 21,021.53 ಕ್ವಿಂಟಲ್ ಬೀಜ ದಾಸ್ತಾನು ಇದ್ದು, ಅದರಲ್ಲಿ 5,459 ಕ್ವಿಂಟಲ್ ಬೀಜ ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿಕರಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಬೀಜದ ಕೊರತೆ ಇರುವುದಿಲ್ಲ ಎಮದು ಸಮದ್ ಪಟೇಲ್ ಸಭೆಗೆ ತಿಳಿಸಿದರು.
ಮುಂಗಾರು ಹಂಗಾಮಿನಲ್ಲಿ ಒಟ್ಟು 88,592 ಮೆ.ಟನ್ ರಸಗೂಬ್ಬರ ಬೇಡಿಕೆ ಇದೆ. ಅದರಲ್ಲಿ ಯೂರಿಯಾ 32,496 ಮೆ.ಟನ್, ಡಿ.ಎ.ಪಿ 27,215 ಮೆ.ಟನ್, ಕಾಂಪ್ಲೆಕ್ಸ್ 23,495 ಮೆ.ಟನ್, ಎಮ್.ಒ.ಪಿ 2,135 ಮೆ.ಟನ್ ಹಾಗೂ ಎಸ್.ಎಸ್.ಪಿ 3,251 ಮೆ.ಟನ್ ರಸಗೂಬ್ಬರ ಸೇರಿದೆ. ಪ್ರಸ್ತುತ ಒಟ್ಟು 49,179 ಮೆ.ಟನ್ ದಾಸ್ತಾನು ಇರುತ್ತದೆ. ರಸಗೂಬ್ಬರ ಕೊರತೆ ಇರುವುದಿಲ್ಲ ಎಂದರು.ತೋಟಗಾರಿಕೆ ಉಪ ನಿರ್ದೇಶಕ ಸಂತೋಷ ಇನಾಂದಾರ್ ಅವರು 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೋಟಗಾರಿಕೆ ಬೆಳೆ ಬಿತ್ತನೆ ಗುರಿ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಕೃಷಿ ಉಪನಿರ್ದೇಶಕರು, ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಸಗೂಬ್ಬರ ಸರಬುರಾಜುದಾರ ಕಂಪನಿಯ ಪ್ರತಿನಿಧಿಗಳು, ಬೀಜೋತ್ಪಾದನಾ ಸಂಸ್ಥೆಯ ಪ್ರತಿನಿಧಿಗಳು, ರಸಗೂಬ್ಬರ ಮಾರಾಟಗಾರರ ಪ್ರತಿನಿಧಿಗಳು ಹಾಗೂ ರೈತರು ಸಭೆಯಲ್ಲಿ ಹಾಜರಿದ್ದರು.