ಬಿತ್ತನೆ ಬೀಜ, ಗೊಬ್ಬರದ ತೊಂದರೆ ಆದರೆ ನೇರವಾಗಿ ದೂರು ನೀಡಿ

KannadaprabhaNewsNetwork | Published : May 30, 2024 12:54 AM

ಸಾರಾಂಶ

ಜಿಲ್ಲೆಯಲ್ಲಿ ಸಾಮಾನ್ಯವಾಗಿ ಜೂನ್‌ದಲ್ಲಿ ಬಿತ್ತನೆ ಆರಂಭವಾಗುತ್ತದೆ. ಆದರೆ ಮೇ ತಿಂಗಳ ಮಧ್ಯದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದರಿಂದ ರೈತರು ಜೂನ್ ಪೂರ್ವದಲ್ಲಿ ಬಿತ್ತನೆ ಆರಂಭಿಸಿದ್ದಾರೆ.

ಧಾರವಾಡ:

ಬಿತ್ತನೆ ಬೀಜ, ರಸಗೊಬ್ಬರ ವಿತರಣೆಯಲ್ಲಿ ಸರ್ಕಾರಿ ಇಲಾಖೆ ಅಥವಾ ಸಹಕಾರಿ, ಖಾಸಗಿ ವ್ಯಾಪಾರಸ್ಥರಿಂದ ತೊಂದರೆ ಆದಲ್ಲಿ, ನೇರವಾಗಿ ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿಗೆ ಅಥವಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ದೂರು ನೀಡಿ. ರೈತ ಹಿತರಕ್ಷಣೆಗೆ ಜಿಲ್ಲಾಡಳಿತ ಬದ್ಧ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಂಗಾರು ಪೂರ್ವ ಸಿದ್ಧತೆಗಳ ಕುರಿತು ಜಿಲ್ಲೆಯ ರೈತ ಮುಖಂಡರು ಹಾಗೂ ರೈತ ಸಂಘಟನೆಗಳೊಂದಿಗೆ ಸಭೆ ಜರುಗಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಾಮಾನ್ಯವಾಗಿ ಜೂನ್‌ದಲ್ಲಿ ಬಿತ್ತನೆ ಆರಂಭವಾಗುತ್ತದೆ. ಆದರೆ ಮೇ ತಿಂಗಳ ಮಧ್ಯದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದರಿಂದ ರೈತರು ಜೂನ್ ಪೂರ್ವದಲ್ಲಿ ಬಿತ್ತನೆ ಆರಂಭಿಸಿದ್ದಾರೆ. ಜಿಲ್ಲಾಡಳಿತ ಪೂರ್ವಯೋಚಿತವಾಗಿ ಜಿಲ್ಲೆಯ ಬಿತ್ತನೆ ಪ್ರದೇಶಕ್ಕೆ ಅನುಗುಣವಾಗಿ ಹೆಚ್ಚುವರಿ ಬೀಜ, ಗೊಬ್ಬರದ ದಾಸ್ತಾನು ಮಾಡಿದೆ. ರೈತರು ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡದೆ ಸಮಾಧಾನದಿಂದ ಅಗತ್ಯ ಬೀಜ, ರಸಗೊಬ್ಬರ ಪಡೆಯಬೇಕು. ಸರ್ಕಾರದ ನಿಯಮಾನುಸಾರ ಪ್ರತಿ ರೈತರಿಗೆ ನೀಡಬೇಕಾದ ಬೀಜ, ರಸಗೊಬ್ಬರ ವಿತರಿಸಲು ಜಿಲ್ಲಾಡಳಿತ ಸಿದ್ದವಿದ್ದು ಆತಂಕ ಬೇಡ ಎಂದು ಹೇಳಿದರು.

ಬೆಳಗ್ಗೆ 9ರಿಂದ ಶುರು:

ರೈತರ ಬೇಡಿಕೆ ಅನುಸಾರ ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿ ಬೆಳಗ್ಗೆ 9ರಿಂದ ರೈತರ ಪಾಳಿ ಮುಗಿಯುವ ವರೆಗೆ ಬಿತ್ತನೆ ಬೀಜ ವಿತರಿಸಲಾಗುವುದು. ಇದಕ್ಕೆ ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿಗಳನ್ನು ಬೇರೆ ಇಲಾಖೆಗಳಿಂದ ನಿಯೋಜಿಸಿ, ಸೂಕ್ತ ಬಂದೋಬಸ್ತ್ ನೀಡಲಾಗುತ್ತದೆ. ಈ ಕುರಿತು ಜಂಟಿ ನಿರ್ದೇಶಕರು ವ್ಯವಸ್ಥಿತ ಕ್ರಮವಹಿಸುತ್ತಾರೆ. ತಡರಾತ್ರಿ ಆದರೂ ಬ್ಯಾಂಕ್‌, ರೈತ ಸಂಪರ್ಕ ಕೇಂದ್ರದ ಆರ್ಥಿಕ ಕಾರ್ಯಗಳಿಗೆ ಸಹಕಾರ ನೀಡಬೇಕು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ರೈತ ಸಂಪರ್ಕ ಕೇಂದ್ರಗಳಿರುವ ಬ್ಯಾಂಕ್ ಶಾಖೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದ ಅವರು, ರಸಗೊಬ್ಬರ ಮಾರಾಟ ಮಾಡುವ ಸಹಕಾರಿ ಸಂಸ್ಥೆಗಳು, ಖಾಸಗಿ ಆಗ್ರೋ ಕೇಂದ್ರಗಳು, ಚಿಲ್ಲರೆ ಮಾರಾಟಗಾರರು ರೈತರಿಗೆ ಅಗತ್ಯವಿರುವ ರಸಗೊಬ್ಬರ ಮಾತ್ರ ನೀಡಬೇಕು. ಲಿಂಕ್ ಜಿಂಕ್ ಹೆಸರಿನಲ್ಲಿ ರೈತರಿಗೆ ಬೇಡವಾದ ರಸಗೊಬ್ಬರ, ರಾಸಾಯನಿಕ ಖರೀದಿಸಲು ಒತ್ತಾಯಿಸಿದರೆ ಅಥವಾ ರಸಗೊಬ್ಬರ ನೀಡಲು ನಿರಾಕರಿಸಿದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ತಕ್ಷಣ ಲೈಸನ್ಸ್ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

11ನೇ ಕಂತು ಬರಲಿದೆ:

ಬರ ಪರಿಹಾರ ಈಗಾಗಲೇ ಹತ್ತು ಕಂತುಗಳಲ್ಲಿ ವಿತರಿಸಲಾಗಿದ್ದು, 11ನೇ ಕಂತು ಬಿಡುಗಡೆಗೆ ಕೋರಲಾಗಿದೆ. ತಾಂತ್ರಿಕ ಕಾರಣಗಳಿಂದ ಕೆಲವು ರೈತರಿಗೆ ಪರಿಹಾರ ಜಮೆ ಆಗಿರಲಿಲ್ಲ. ಇವುಗಳ ಕುರಿತು ಪರಿಶೀಲಿಸಿ ವರದಿ ನೀಡಲು, ತಹಸೀಲ್ದಾರ್‌ ಮೂಲಕ ಗ್ರಾಮ ಆಡಳಿತಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರತಿ ತಹಸೀಲ್ದಾರ್‌ ಕಚೇರಿಯಲ್ಲಿ ಬರ ಪರಿಹಾರ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ರೈತರು ಇದರ ಸದುಪಯೋಗ ಪಡೆಯಬೇಕು. ಬರ ಪರಿಹಾರ ಅರ್ಹ ಎಲ್ಲ ರೈತರಿಗೂ ದೊರೆಯುತ್ತದೆ. ಇನ್ನು ಬರ ಪರಿಹಾರ ಬಿಡುಗಡೆ ಕಾರ್ಯ ಮುಕ್ತಾಯವಾಗಿಲ್ಲ. ರೈತರು ನನಗೆ ಬಂದಿಲ್ಲ ಎಂದು ಆತಂಕ ಪಡಬಾರದು ಎಂದು ಸ್ಪಷ್ಟಪಡಿಸಿದರು.

ಬೆಳೆ ಪರಿಹಾರ ಕುರಿತು ರೈತರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಧಾರವಾಡ ಕೃಷಿ ಇಲಾಖೆಯಿಂದ ವಿಶೇಷ ಅಧ್ಯಯನ ಮಾಡಿ, ವಿವರವಾದ ವರದಿಯೊಂದಿಗೆ ಸರ್ಕಾರಕ್ಕೆ ಅಗತ್ಯ ಶಿಫಾರಸು ಮಾಡಲಾಗುತ್ತದೆ. ಅದರಲ್ಲಿ ಬೀಜ ಬಿತ್ತಿದರು ಮೊಳಕೆ ಒಡೆಯದ, ಮೊಳಕೆಯೊಡೆದರು ಮೇಲೆ ಬರದ, ಮತ್ತು ಬೆಳೆ ಬಂದರೂ ಇಳುವರಿ ಬರದಿರುವ ಹಾಗೂ ರೈತರು ಬಿತ್ತದ ಬೀಜ ಸಮರ್ಪಕವಾಗಿ ಹುಟ್ಟದ್ದರಿಂದ ಭೂಮಿ ಪಾಳು ಬಿದ್ದಿರುವ ಸಮಸ್ಯೆಗಳ ಕುರಿತು ವಿಶ್ಲೇಷಿಸಲಾಗುತ್ತದೆ. ಈ ಕುರಿತು ಈಗಾಗಲೇ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಆಗಿರುವ ಮಳೆ ಪ್ರಮಾಣ, ಬೀಜ ಮತ್ತು ಗೊಬ್ಬರ, ದಾಸ್ತಾನು ಬಿತ್ತನೆ, ಇತ್ಯಾದಿಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ. ಭದ್ರಣ್ಣನವರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಇದ್ದರು. ರೈತ ಮುಖಂಡರಾದ ಮಲ್ಲಿಕಾರ್ಜುನ ಬಾಳನಗೌಡರ, ಸುಭಾಸಚಂದ್ರ ಪಾಟೀಲ, ರಘುನಾಥ ನಡುವಿನಮನಿ, ಚಂದ್ರಶೇಖರ ಅಂಬಲಿ, ಲೋಕನಾಥ ಹೆಬಸೂರ ಮತ್ತಿತರರು ಇದ್ದರು.

Share this article