ಕನ್ನಡಪ್ರಭ ವಾರ್ತೆ ಗೋಕಾಕ
ಈ ವರ್ಷ ಮುಂಗಾರು ಮಳೆ ಒಂದು ವಾರ ಮುಂಚಿತವಾಗಿ ಪ್ರಾರಂಭವಾಗಿದ್ದು ಒಳ್ಳೆಯ ಮಳೆಯಾಗುತ್ತಿದೆ. ಆದ್ದರಿಂದ ರೈತರು ಕೃಷಿ ಇಲಾಖೆಯಿಂದ ವಿತರಿಸುವ ಗುಣಮಟ್ಟದ ಬಿತ್ತನೆ ಬೀಜಗಳನ್ನು ಸಹಾಯಧನದಡಿ ಪಡೆದು ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಂತೆ ಬಿತ್ತನೆ ಕಾರ್ಯ ಕೈಗೊಳ್ಳುವಂತೆ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು.ತಮ್ಮ ಗೃಹ ಕಚೇರಿಯಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯಿಂದ ಸರಕಾರಿ ಸಹಾಯಧನದಡಿ ರೈತರಿಗೆ ನೀಡುವ ಬೀಜ ವಿತರಣೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಕೃಷಿ ಇಲಾಖೆಯಿಂದ ತಾಲೂಕಿನ ಎಲ್ಲ ರೈತರಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ವಿವಿಧ ಬೆಳೆಗಳ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಬಿತ್ತನೆ ಬೀಜದ ಕೊರತೆ ಇಲ್ಲ, ಎಲ್ಲ ರೈತರು ಕೃಷಿ ಇಲಾಖೆಯಿಂದ ವಿತರಿಸುವ ಬೀಜಗಳನ್ನು ಪಡೆದು ಉತ್ತಮ ಬೆಳೆಗಳನ್ನು ಬೆಳೆಯುವಂತೆ ತಿಳಿಸಿದರು.
ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾಫ ಮಾತನಾಡಿ, ಗೋಕಾಕ ತಾಲೂಕಿನಲ್ಲಿ 7 ಹಾಗೂ ಮೂಡಲಗಿ ತಾಲೂಕಿನಲ್ಲಿ 6 ಬೀಜ ವಿತರಣಾ ಕೇಂದ್ರಗಳ ಮೂಲಕ ವಿವಿಧ ಬೆಳೆಗಳ ಸೋಯಾಬಿನ್, ಹೆಸರು, ಮೆಕ್ಕೆಜೋಳ, ಸೂರ್ಯಕಾಂತಿ, ಹೈಬ್ರೀಡಜೋಳ ಇತ್ಯಾದಿಗಳನ್ನು ಸಹಾಯಧನದಡಿ ರೈತರಿಗೆ ವಿತರಿಸಲು ದಾಸ್ತಾನು ಮಾಡಿಕೊಳ್ಳಲಾಗಿದೆ. ರೈತರಿಗೆ ಕ್ಯೂಆರ್ ಕೋಡ್ ಸ್ಕಾನಿಂಗ್ ಮೂಲಕ ಗುಣಮಟ್ಟದ ಬೀಜಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.ಸದ್ಯಕ್ಕೆ ಯಾವುದೇ ಬೀಜದ ಕೊರತೆ ಇಲ್ಲ. ರೈತರು ಮಳೆ ಕಡಿಮೆಯಾದ ಮೇಲೆ ಭೂಮಿ ತೇವಾಂಶ ನೊಡಿಕೊಂಡು ಬಿತ್ತನೆ ಮಾಡಬೇಕು. ರೈತರು ತಮ್ಮ ಆಧಾರ್ ಕಾರ್ಡ್ ಝರಾಕ್ಸ್ ಹಾಗೂ ಇತ್ತಿಚಿನ ಉತ್ತಾರಗಳನ್ನು ತೆಗೆದುಕೊಂಡು ಬಂದು ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಪಡೆಯಬೇಕು. ಅಲ್ಲದೇ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ರೈತರಿಗೆ ಬೇಕಾಗುವ ಪ್ರಮಾಣದಲ್ಲಿ ಯೂರಿಯಾ ಹಾಗೂ ಇತರೆ ಕಾಂಪ್ಲೆಕ್ಸ್, ರಸಗೊಬ್ಬರಗಳು (20:20:0:13, 19:19:19, 15:15:15, 10:26:26ಇತ್ಯಾದಿ) ಎಲ್ಲ ರಸಗೊಬ್ಬರ ಮಳಿಗೆಗಳಲ್ಲಿ ಮತ್ತು ಪಿಕೆಪಿಎಸ್‌ಗಳಲ್ಲಿ ಲಭ್ಯ ಇದ್ದು, ರೈತರು ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಕಾಂಪ್ಲೇಕ್ಸ್ ರಸಗೊಬ್ಬರಗಳನ್ನು ಉಪಯೋಗಿಸಲು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಮೋಹನ ಭಸ್ಮೆ ಹಾಗೂ ನಗರ ಸಭೆ ಪೌರಾಯುಕ್ತ ರಮೇಶ ಜಾಧವ, ಮಾಜಿ ಜಿಪಂ ಸದಸ್ಯರಾದ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರ, ಶಾಸಕರ ಆಪ್ತ ಸಹಾಯಕರಾದ ಭೀಮಗೌಡ ಪೊಲೀಸ್ ಪಾಟೀಲ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ಮುಖಂಡರುಗಳಾದ ಲಕ್ಷ್ಮಣ ತಪಶಿ, ಅಶೋಕ ಗೋಣಿ, ಪ್ರಮೋದ ಜೋಶಿ, ಕೃಷಿ ಅಧಿಕಾರಿಗಳಾದ ತುರಾಯಿದಾರ, ಕರಗಣ್ಣಿ, ಪಾಟೀಲ, ಪತ್ತಾರ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಹಾಗೂ ರೈತರು ಉಪಸ್ಥಿತರಿದ್ದರು.