ಸಾಮಾನ್ಯವಾಗಿ ಜೂನ್ ಆರಂಭದಿಂದ ಜಿಟಿ-ಜಿಟಿಯಾಗಿ ಮಳೆಯಾಗುತ್ತಿದ್ದು, ಮಲೆನಾಡಿನ ವಾತಾವರಣ ಸೃಷ್ಟಿಯಾಗಬೇಕಿತ್ತು. ಆದರೆ, ಕಳೆದ ಹತ್ತು ದಿನಗಳಿಂದ ಮಳೆ ತೀರಾ ಕ್ಷೀಣಿಸಿದ್ದು, ಮುಂಗಾರು ಬೆಳೆಗಳಿಗೆ ತೀವ್ರ ಮಳೆ ಕೊರತೆ ಉಂಟಾಗಿದೆ.
ಬಸವರಾಜ ಹಿರೇಮಠ
ಧಾರವಾಡ:
ವಾರದೊಳಗೆ ಮಳೆ ಬರದೇ ಹೋದಲ್ಲಿ ಜಿಲ್ಲೆಯ ರೈತರು ಈ ಬಾರಿ ಬರಗಾಲ ಅನುಭವಿಸುವುದು ನಿಶ್ಚಿತ..!
ಸಾಮಾನ್ಯವಾಗಿ ಜೂನ್ ಆರಂಭದಿಂದ ಜಿಟಿ-ಜಿಟಿಯಾಗಿ ಮಳೆಯಾಗುತ್ತಿದ್ದು, ಮಲೆನಾಡಿನ ವಾತಾವರಣ ಸೃಷ್ಟಿಯಾಗಬೇಕಿತ್ತು. ಆದರೆ, ಕಳೆದ ಹತ್ತು ದಿನಗಳಿಂದ ಮಳೆ ತೀರಾ ಕ್ಷೀಣಿಸಿದ್ದು, ಮುಂಗಾರು ಬೆಳೆಗಳಿಗೆ ತೀವ್ರ ಮಳೆ ಕೊರತೆ ಉಂಟಾಗಿದೆ. ಮಳೆಗಾಲದ ಸಮಯದಲ್ಲೂ ಬಿರು ಬಿಸಿಲಿನ ವಾತಾವರಣ ರೈತರನ್ನು ಕಂಗೆಡಿಸಿದೆ.
ಪೂರ್ವ ಮುಂಗಾರು ಉತ್ತಮ:
ಈ ಬಾರಿ ಮುಂಗಾರು ಪೂರ್ವ ಸಾಕಷ್ಟು ಪ್ರಮಾಣದ ಮಳೆಯಾಗಿದೆ ಎಂದು ಕೃಷಿ ಇಲಾಖೆ ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಮಾರ್ಚ್, ಏಪ್ರಿಲ್ ಹಾಗೂ ಮೇ ಅಂತ್ಯದ ವರೆಗೆ ವಾಡಿಕೆಯ 120.4 ಮಿಮೀ ಮಳೆ ಪೈಕಿ 213 ಮಿಮೀ ಮುಂಗಾರು ಪೂರ್ವ ಹೆಚ್ಚುವರಿ ಮಳೆಯಾಗಿದೆ. ಅದರಲ್ಲೂ ಮೇ ಕೊನೆಯ ದಿನಗಳಲ್ಲಿ ಜಿಲ್ಲಾದ್ಯಂತ ಬಿತ್ತನೆಗೆ ಬೇಕಾದಷ್ಟು ಮಳೆಯಾಗಿತ್ತು. ಹೀಗಾಗಿ ರೈತರು ಖುಷಿ ಖುಷಿಯಿಂದ ಬಿತ್ತನೆ ಮಾಡಿದ್ದರು.
ಶೇ.80ರಷ್ಟು ಬಿತ್ತನೆ:
ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ ಶೇ. 80ರಷ್ಟು ಬಿತ್ತನೆಯಾಗಿದೆ. ಈ ಪೈಕಿ ಗೋವಿನ ಜೋಳ 60 ಸಾವಿರ ಹೆಕ್ಟೇರ್ ಪೈಕಿ 34 ಸಾವಿರ, ಉದ್ದು 8755 ಹೆಕ್ಟೇರ್ ಗುರಿ ಪೈಕಿ 19053 ಹೆಕ್ಟೇರ್ (ಹೆಚ್ಚುವರಿ), ಹೆಸರು 93750 ಹೆಕ್ಟೇರ್ ಗುರಿ ಪೈಕಿ 74319, ಶೇಂಗಾ 13000 ಹೆಕ್ಟೇರ್ ಗುರಿ ಪೈಕಿ 8160 ಹೆಕ್ಟೇರ್ ಬಿತ್ತನೆಯಾಗಿದೆ. ಹಾಗೆಯೇ, ಭತ್ತ 10481 ಹೆಕ್ಟರ್ ಗುರಿ ಪೈಕಿ 8119ರಷ್ಟು ಬಿತ್ತನೆಯಾಗಿದೆ. ಒಟ್ಟು ಮುಂಗಾರಿನಲ್ಲಿ 282677 ಹೆಕ್ಟೇರ್ ಗುರಿ ಪೈಕಿ 224399 (ಶೇ.79.38) ಬಿತ್ತನೆಯಾಗಿದೆ. ಈ ಬೆಳೆಗಳೆಲ್ಲವೂ ಬೆಳವಣಿಗೆಯ ಹಂತದಲ್ಲಿವೆ.
ಕೈ ಕೊಟ್ಟ ಮಳೆ:
ಈ ಹಂತದಲ್ಲಿ ಅಗತ್ಯವಾಗಿ ಬೇಕಾದ ಮಳೆ ಮಾತ್ರ ಕೈಕೊಟ್ಟಿದೆ. ಕೆಲವೊಮ್ಮೆ ಮಳೆ ಪ್ರಮಾಣ ಕಡಿಮೆಯಾದರೂ ಮೋಡ ಮುಸುಕಿದ ವಾತಾವರಣ, ತಂಪು ವಾತಾವರಣ ಇರಬೇಕಿತ್ತು. ಬಿತ್ತನೆ ಸಮಯದಲ್ಲಿ ಮಳೆಯಾಗಿದ್ದು, ಭೂಮಿಯಲ್ಲಿ ಇನ್ನು ತುಸು ತೇವಾಂಶ ಇದೆ. ಆದರೆ, ಬೇಸಿಗೆಯ ಬಿಸಿಲು ರೀತಿಯಲ್ಲಿ ಒಣ ಹವೆಯಿಂದ ಭೂಮಿಯ ತೇವಾಂಶ ಸಹ ದಿನದಿಂದ ದಿನಕ್ಕೆ ಆರುತ್ತಿದೆ. ಬೆಳೆಗಳು ಸೊರಗುತ್ತಿವೆ ಎಂದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ರೈತರಿಗೆ ಸಂಕಷ್ಟ:
ಇನ್ನು, ಕಲಘಟಗಿ, ಅಳ್ನಾವರ ಹಾಗೂ ಧಾರವಾಡ ಭಾಗಶಃ ಕಬ್ಬು ಸೇರಿದಂತೆ ತೋಟಗಾರಿಕೆ ಬೆಳೆಗಳಿವೆ. ಅಲ್ಲಲ್ಲಿ ನೀರಾವರಿ ವ್ಯವಸ್ಥೆ ಇದ್ದವರು ಸ್ಪಿಂಕ್ಲರ್ ಮೂಲಕ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಒಣ ಬೇಸಾಯದ ರೈತರು ಮಾತ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಿಶೇಷವಾಗಿ ಧಾರವಾಡ ಉತ್ತರ ಗ್ರಾಮೀಣ, ನವಲಗುಂದ, ಕುಂದಗೋಳ ಭಾಗದ ರೈತರು ಮಳೆಯನ್ನೇ ನೆಚ್ಚಿದ್ದಾರೆ.
ಬಿತ್ತನೆ ಸಮಯದಲ್ಲಿ ಉತ್ತಮ ಮಳೆಯಾಗಿದ್ದರಿಂದ ಆರು ಎಕರೆ ಉದ್ದು ಬಿತ್ತಿದ್ದೇನೆ. ಚೆನ್ನಾಗಿ ಹುಟ್ಟಿವೆ ಕೂಡಾ. ಆದರೆ, ವಾರದೊಳಗೆ ಮಳೆಯಾಗದೇ ಹೋದಲ್ಲಿ ಬೆಳೆ ಕಮರುವ ಭಯ ಶುರುವಾಗಿದೆ. ಸದ್ಯದ ವಾತಾವರಣ ಗಮನಿಸಿದರೆ ಮಳೆ ಸಾಧ್ಯತೆ ಕಡಿಮೆ ಇದ್ದು, ಮಳೆಗಾಗಿ ಕಾಯುತ್ತಿದ್ದೇವೆ ಎಂದು ಉಪ್ಪಿನ ಬೆಟಗೇರಿಯ ರೈತ ಕಲಂದರ ಮುಲ್ಲಾ ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ಶೇ. 80ರಷ್ಟು ಬಿತ್ತನೆಯಾಗಿದ್ದು ಸದ್ಯ ಬೆಳೆಗಳ ಸ್ಥಿತಿ ಉತ್ತಮವಾಗಿದೆ. ಆದರೆ, ಬರುವ ದಿನಗಳಲ್ಲಿ ಅಗತ್ಯವಾಗಿ ಮಳೆ ಬೇಕು. ಒಣ ಬೇಸಾಯದ ರೈತರು ಕೃಷಿ ವಿಜ್ಞಾನಿಗಳ ಸಲಹೆ ಪಡೆಯಬೇಕು. ಸಮೀಪದ ನೀರಾವರಿ ರೈತರ ಸಹಾಯ ಪಡೆದು ಬೆಳೆ ಉಳಿಸಿಕೊಳ್ಳುವಷ್ಟು ನೀರು ಕೊಡಬೇಕು. ಆಗಾಗ ಎಡೆಕುಂಟಿ ಹೊಡೆದು ಮಣ್ಣಿನ ತೇವಾಂಶ ರಕ್ಷಿಸಿಕೊಳ್ಳಬೇಕು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.