ಮಸೀದಿ ಗಣೇಶ ಮೂರ್ತಿ ದರ್ಶನ ಪಡೆದ ಎಸ್ಪಿ ರೋಹನ್ ಜಗದೀಶ

KannadaprabhaNewsNetwork |  
Published : Aug 31, 2025, 02:00 AM IST
30 ರೋಣ 1ಎ.1ಬಿ. ಸಂದಿಗವಾಡ ಗ್ರಾಮದಲ್ಲಿನ ಮಸೀದಿ ಅಧ್ಯಕ್ಷರು, ಮುಸ್ಲಿಂ ಮುಖಂಡರು ಹಾಗೂ ಗ್ರಾಮಸ್ಥರಿಗೆ ಎಸ್ಪಿ ರೋಹನ್ ಜಗದೀಶ  ಪ್ರಶಂಸೆ ವ್ಯಕ್ತಪಡಿಸಿದರು.30 RON 1 ಸಿ. ಕನ್ನಡಪ್ರಭ ಪತ್ರಿಕೆಯ ರೋಣ ವರದಿಗಾರ ಪಿ.ಎಸ್.ಪಾಟೀಲ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಹಾಗೂ ಸಂದಿಗವಾಡ ಗ್ರಾಮಸ್ಥರು ಸನ್ಮಾನಿಸಿ, ಅಭಿನಂದಿಸಿದರು. | Kannada Prabha

ಸಾರಾಂಶ

ರೋಣ ತಾಲೂಕಿನ ಸಂದಿಗವಾಡ ಗ್ರಾಮದ ಮಸೀದಿಯಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿ ದರ್ಶನವನ್ನು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ರೋಹನ್ ಜಗದೀಶ ಅವರು ಶನಿವಾರ ಪಡೆದರು.

ರೋಣ:ತಾಲೂಕಿನ ಸಂದಿಗವಾಡ ಗ್ರಾಮದ ಮಸೀದಿಯಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿ ದರ್ಶನವನ್ನು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ರೋಹನ್ ಜಗದೀಶ ಅವರು ಶನಿವಾರ ಪಡೆದರು.

ಈ ಕುರಿತು ಶನಿವಾರ ಕನ್ನಡಪ್ರಭದಲ್ಲಿ ಸಂದಿಗವಾಡ ಗ್ರಾಮದಲ್ಲಿ ಜಾತಿಭೇದವಿಲ್ಲದೇ ಹಿಂದೂ- ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಇರುವ ಕುರಿತು ಹಾಗೂ " ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ " ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ವರದಿ ಗಮನಿಸಿದ ಎಸ್ಪಿ ರೋಹನ್ ಜಗದೀಶ ಅವರು, ಸಂದಿಗವಾಡ ಗ್ರಾಮಕ್ಕೆ ಭೇಟಿ ನೀಡಿ ಮಸೀದಿಯಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿ ದರ್ಶ ಪಡೆದು, ಕೆಲ ಕಾಲ ಗ್ರಾಮಸ್ಥರು ಹಾಗೂ ಮಸೀದಿ ಅಧ್ಯಕ್ಷರು, ಸದಸ್ಯರೊಂದಿಗೆ ಚರ್ಚಿಸಿದರು. ಮಸೀದಿ ಹಾಗೂ ಮುಸ್ಲಿಂ ಬಾಂಧವರೊಂದಿಗೆ ಗ್ರಾಮಸ್ಥರು ಸಹಕಾರ, ಸಹಬಾಳ್ವೆ, ಭ್ರಾತೃತ್ವ ಕಂಡು ಪ್ರಶಂಸೆ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಎಸ್ಪಿ ರೋಹನ್ ಜಗದೀಶ ಅವರು, ನಾನು ಸಂದಿಗವಾಡ ಗ್ರಾಮಕ್ಕೆ ಬರಲು, ಇಲ್ಲಿನ ಮಸೀದಿಯಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿ ದರ್ಶನ ಭಾಗ್ಯ ಪಡೆಯಲು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೇ ಪ್ರಮುಖ ಕಾರಣವಾಗಿದೆ. ಯಾವುದೇ ಜಾತಿ ಭೇದವಿಲ್ಲದೇ ಪ್ರತಿಯೊಂದು ಹಬ್ಬವನ್ನು ಒಟ್ಟುಗೂಡಿ ಆಚರಿಸುವ ಬಗ್ಗೆ, ಗ್ರಾಮಸ್ಥರಲ್ಲಿನ ಭಾವೈಕ್ಯತೆ ಕರಿತು ''''ಕನ್ನಡಪ್ರಭ'''' ವರದಿಯಿಂದ ನನಗೆ ತಿಳಿಯಿತು‌. ಉತ್ತಮವಾದ ವರದಿ ಪ್ರಕಟವಾಗಿದೆ. ಇಂತಹ ವರದಿ ಪ್ರಕಟಿಸಿದ ''''ಕನ್ನಡಪ್ರಭ'''' ಪತ್ರಿಕೆ ಹಾಗೂ ವರದಿಗಾರರಿಗೆ ಪೊಲೀಸ್ ಇಲಾಖೆ ವತಿಯಿಂದ ಅಭಿನಂದಿಸುತ್ತೇನೆ ಎಂದು ಶ್ಲಾಘಿಸಿದರು.

ಪ್ರತಿ ಗ್ರಾಮಕ್ಕೂ ಸಂದಿಗವಾಡ ಮಾದರಿ -

ಸಂದಿಗವಾಡದಲ್ಲಿ ಯಾವುದೇ ಜಾತಿ ಭೇದವಿಲ್ಲದೇ ಸಾಮರಸ್ಯ, ಸೌಹಾರ್ದದಿಂದ ಗಣೇಶ ಹಬ್ಬವನ್ನು ಆಚರಿಸುತ್ತಿರುವದು ಸಂತಸ ತಂದಿದೆ. ಸ್ವತಃ ಮಸೀದಿಯ ಅಧ್ಯಕ್ಷರು, ಸದಸ್ಯರು ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಗ್ರಾಮಸ್ಥರೊಂದಿಗೆ ಕೂಡಿಕೊಂಡು ಗಣೇಶನಿಗೆ ಪೂಜೆ ಗೈಯುತ್ತಿರುವದು ಭಾವೈಕ್ಯತೆಗೆ ಸಾಕ್ಷಿ ಮತ್ತು ಅಭಿನಂದನಾರ್ಹವಾಗಿದೆ. ಸಂದಿಗವಾಡ ಗ್ರಾಮಸ್ಥರಲ್ಲಿನ ಸಹಕಾರ, ಸಾಮರಸ್ಯ, ಭ್ರಾತೃತ್ವ ಮನೋಭಾವ ಪ್ರತಿಯೊಂದು ಗ್ರಾಮಗಳಿಗೂ ಮಾದರಿಯಾಗಲಿದೆ. ಗ್ರಾಮದಲ್ಲಿರುವವರೆಲ್ಲರೂ ಒಂದೇ ಎಂಬ ಮನೋಭಾವನೆ ಹೊಂದಿ, ಸಾಮರಸ್ಯತೆಯಿಂದ ಬದುಕು ಸಾಗಿಸುವದು ಅತ್ಯಂತ ಸಂತಸದ ವಿಷಯವಾಗಿದೆ. ಇದೇ ರೀತಿ ಬಾಂಧವ್ಯ ಹಾಗೂ ಹೊಂದಾಣಿಕೆಯಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಡಿವೈಎಸ್ಪಿ ಪ್ರಭುಗೌಡ.ಕರೇದಳ್ಳಿ, ಸಿಪಿಐ ಎಸ್.ಎಸ್. ಬಿಳಗಿ, ಪಿಎಸ್‌ಐ ಪ್ರಕಾಶ ಬಣಕಾರ ಗ್ರಾಪಂ ಅಧ್ಯಕ್ಷ ಹನಮಂತಗೌಡ ಹುಲ್ಲೂರ, ತಿಪ್ಪನಗೌಡ ಹುಲ್ಲೂರ, ವ್ಹಿ.ಕೆ. ಪಾಟೀಲ, ಮಲ್ಲನಗೌಡ ಪಾಟೀಲ, ಮಹಾದೇವಗೌಡ ಪಾಟೀಲ, ಶಿವಲಿಂಗೌಡ ಪಾಟೀಲ, ಮೈಲಾರಪ್ಪ ಗಾಣಿಗೇರ, ಮುತ್ತಪ್ಪ ಜಾಲಿಹಾಳ, ಹಸನಸಾಬ ನದಾಫ, ಲಾಡಸಾಬ ಗಂಗೂರ, ದಾವಲಸಾಬ ನದಾಫ, ಮಯೂರ ನದಾಫ, ಫಕೀರಸಾಬ ಪಿಂಜಾರ, ಮಂಜುನಾಥ ಭೂಸಗೌಡ್ರ, ಯಲ್ಲಪ್ಪ ಸುಗ್ಗಿ, ಉಮೇಶ ಸುಗ್ಗಿ, ಮೃತ್ಯುಂಜಯ ಹಿರೇಮಠ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು