- ಹೊನ್ನಾಳಿ ಪುರಸಭೆ ವಿಶೇಷ ಸಭೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಸೂಚನೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಅಗಳ ಮೈದಾನದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತ ಸೌಲಭ್ಯಗಳೊಂದಿಗೆ ಸ್ಥಳಾವಕಾಶ ಮಾಡಿಕೊಡಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಸೂಚಿಸಿದರು.ನಗರದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಮೈಲಪ್ಪ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಪೊಲೀಸರು ಏಕಮುಖ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆ ಬೀದಿಬದಿ ವ್ಯಾಪರಸ್ಥರು ವ್ಯಾಪಾರ ಮಾಡಲು ಆಗುತ್ತಿಲ್ಲ. ಅವರಿಗೆ ಸೂಕ್ತ ಸ್ಥಳ ನಿಗದಿ ಮಾಡಿಕೊಟ್ಟರೆ ವ್ಯಾಪಾರ ನಡೆಸಬಲ್ಲರು ಎಂದರು.
ಪಟ್ಟಣದ ಹೃದಯ ಭಾಗದ ಅಗಳ ಮೈದಾನ ಖಾಲಿ ಇದೆ. ಅಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿ ಶೀಘ್ರವೇ ಅವರಿಗೆ ವ್ಯಾಪಾರ ಮಾಡಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಶಾಸಕರು ಪುರಸಭಾ ಸದಸ್ಯರಿಗೆ ತಿಳಿಸಿದರು. ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು. ಆಗ ಶಾಸಕರು, ಬೀದಿಬದಿ ವ್ಯಾಪಾರಿಗಳ ಸಂಖ್ಯೆ ಹಾಗೂ ಮಾಹಿತಿ ನಿಖರವಾಗಿ ಸಂಗ್ರಹಿಸಿ ನಂತರ ಅಗಳದ ಜಾಗವನ್ನು ಹದ್ದುಬಸ್ತು ಮಾಡಿ, ಪುರಸಭೆಯಲ್ಲಿ ಲಭ್ಯವಿರುವ ಹಣದ ಜೊತೆಗೆ ಶಾಸಕರ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.2019-20ನೇ ಸಾಲಿನಿಂದ 2023-24ನೇ ಸಾಲಿನವರೆಗೆ ಶೇ.24.10, ಶೇ.7.25, ಮತ್ತು ಶೇ.5ರ ಯೋಜನೆಯಡಿಯಲ್ಲಿ ಬಂದಿರುವ ಅರ್ಜಿಗಳನ್ನು ಸೂಕ್ತವಾಗಿ ಪರಿಶೀಲಿಸಿ ಫಲಾನುಭವಿಗಳ ಅಂತಿಮ ಪಟ್ಟಿ ತಯಾರಿಸುವಂತೆ ಸೂಚಿಸಿದರು. ಈ ಬಗ್ಗೆ ಚರ್ಚೆ ನಡೆದು, ತಮ್ಮ ವಾರ್ಡಿನಲ್ಲಿರುವ ಎಸ್ಸಿ ಹಾಗೂ ಎಸ್ಟಿ ವರ್ಗದ ನೈಜ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಿ ಸೌವಲತ್ತುಗಳನ್ನು ವಿತರಿಸುವ ಬಗ್ಗೆ ಕ್ರಮ ಕೈಗೊಳ್ಳುವುದಕ್ಕೆ ಸಭೆ ಒಪ್ಪಿಗೆ ನೀಡಿತು.
2025- 26ನೇ ಸಾಲಿಗೆ ಹೊನ್ನಾಳಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ಬಾಬ್ತುಗಳ ಅಂತಿಮ ಬೀಡ್‌ದಾರರಲ್ಲಿ ಕೆಲವರು ಸ್ವಲ್ಪ ಹಣ ಮಾತ್ರ ಪಾವತಿ ಮಾಡಿದ್ದು, ಬಾಕಿ ಉಳಿಸಿದ್ದಾರೆ. ಪುರಸಭೆವ ತಿಯಿಂದ 3 ತಿಂಗಳು ಸಮಯ ನೀಡಿ, 3 ಬಾರಿ ನೋಟಿಸ್ ನೀಡಲಾಗಿದೆ. ಹೀಗಿದ್ದರೂ ಇದುವರೆವಿಗೂ ಬಿಡ್‌ದಾರರು ಹರಾಜಿನ ಬಾಕಿ ಹಣ ಪಾವತಿಸಿಲ್ಲ ಎಂದು ಸಭೆ ಗಮನಕ್ಕೆ ತಂದರು. ಆಗ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಜು.31ರವರೆಗೆ ಬಾಕಿ ಹಣ ಕಟ್ಟಲು ಸಮಯ ನೀಡಿ, ಆದಾಗ್ಯೂ ಬಾಕಿ ಹಣ ಕಟ್ಟದಿದ್ದರೆ ಹೊಸದಾಗಿ ಹರಾಜು ಪ್ರಕ್ರಿಯೆ ಮಾಡಲು ಸಭೆಗೆ ತಿಳಿಸಿದಾಗ ಸದಸ್ಯರು ಸಮ್ಮತಿಸಿದರು.ಸಭೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್, ಪುರಸಭೆ ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಸದಸ್ಯರಾದ ಧರ್ಮಪ್ಪ, ಕೆ.ವಿ.ಶ್ರೀಧರ್, ರಂಗನಾಥ್, ಸುಮಾ ಮಂಜುನಾಥ್, ರಂಜಿತಾ ಚನ್ನಪ್ಪ, ಸುಮಾ ಸತೀಶ್, ಉಷಾ ಗಿರೀಶ್, ರಾಜೇಂದ್ರ, ಸವಿತಾ ಮಹೇಶ್ ಹುಡೇದ್, ಸುರೇಶ್ ಎಂ. ಅನುಚಂದ್ರು, ರಾಜಪ್ಪ ಬಾವಿಮನೆ, ತನ್ವಿರ್ ಅಹ್ಮದ್, ನಾಮಿನಿ ಸದಸ್ಯರಾದ ರವಿ, ಚಂದ್ರಪ್ಪ, ಮಾದಪ್ಪ, ಮುಖ್ಯಾಧಿಕಾರಿ ಲೀಲಾವತಿ, ಎಂಜಿನಿಯರ್ ದೇವರಾಜ್ ಹಾಗೂ ಇತರರು ಇದ್ದರು.
- - -(ಬಾಕ್ಸ್) * ಆನ್‌ಲೈನ್ ಅರ್ಜಿ ಸಲ್ಲಿಸಲು ಸೂಚನೆ ಕೇಂದ್ರ ಸರ್ಕಾರ ನಿವೇಶನ ರಹಿತ ಹಾಗೂ ನಿವೇಶನ ಮಾತ್ರ ಇರುವ ಫಲಾನುಭವಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜು.15 ಕೊನೆ ದಿನವಾಗಿದ್ದು, ಸಮಯಾವಕಾಶ ತೀರಾ ಕಡಿಮೆ ಇದೆ. ಈ ಹಿನ್ನೆಲೆ ಸಭೆಯಲ್ಲಿದ್ದ ತಹಸೀಲ್ದಾರ್ ಸುರೇಶ್ ಅವರನ್ನು ಕುರಿತು ಮಾತನಾಡಿ, ಕೊನೆ ಶನಿವಾರ, ಭಾನುವಾರ ರಜೆ ಇದ್ದರೂ ವಿ.ಎ. ಹಾಗೂ ಆರ್.ಐ.ಗಳು ಸೇರಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಲಿರುವವರಿಗೆ ನೀಡಬೇಕು ಎಂದು ಶಾಸಕರು ತಾಕೀತು ಮಾಡಿದರು.
-- - -
-11ಎಚ್.ಎಲ್.ಐ1.ಜೆಪಿಜಿ:ಹೊನ್ನಾಳಿ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಎ.ಕೆ.ಮೈಲಪ್ಪ ಅಧ್ಯಕ್ಷತೆ ವಿಶೇಷ ಸಭೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು.