ಶಿರಸಿ: ಕನ್ನಡದಲ್ಲಿ ಮಾತನಾಡುವುದು, ವ್ಯವಹರಿಸುವ ಪರಿಪಾಠವನ್ನು ರೂಢಿಸಿಕೊಳ್ಳಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಪಟ್ಟಣದ ಮಾರಿಕಾಂಬಾ ಪ್ರೌಢಶಾಲೆ ಆವರಣದಲ್ಲಿ ಶನಿವಾರ ತಾಲೂಕಾಡಳಿತ, ನಗರಸಭೆ ಹಾಗೂ ತಾಲೂಕು ಪಂಚಾಯಿತಿ ಆಶ್ರಯದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಾಜ್ಯ ಸರ್ಕಾರ ಕನ್ನಡಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ಬಡವ, ಬಲ್ಲಿದ ಎಂಬ ತಾರತಮ್ಯ ಬರಬಾರದು ಎಂದು ಉಚಿತ ಶಿಕ್ಷಣ ನೀಡುತ್ತಿದೆ. ಕನ್ನಡದ ಹಲವಾರು ಜನರು ಬೇರೆ ಬೇರೆ ರಾಜ್ಯದಲ್ಲಿ ಬದುಕಿಗಾಗಿ ನೆಲೆಸಿದ್ದು, ಕನ್ನಡಕ್ಕೆ ಹೆಚ್ಚಿನ ಸ್ಥಾನಮಾನ ನೀಡಬೇಕು. ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕು. ಕನ್ನಡ ಎಂದಿಗೂ ಮರೆಯಬಾರದು ಎಂದರು.
ಧ್ವಜಾರೋಹಣ ನೆರವೇರಿಸಿದ ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಮಾತನಾಡಿ, ಕದಂಬರ ನಾಡಿನಲ್ಲಿ ಉಪವಿಭಾಗಾಧಿಕಾರಿಯಾಗಿ ಧ್ವಜಾರೋಹಣ ಮಾಡುತ್ತಿರುವುದು ಅತ್ಯಂತ ಹೆಮ್ಮೆ ತಂದಿದೆ ಎಂದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಗಣಪತಿ ಭಟ್ಟ, ಜಿ.ಎಂ. ಬೊಮ್ನಳ್ಳಿ, ಕದಂಬ ರತ್ನಾಕರ, ಅನುರಾಧಾ ಹೆಗಡೆ, ಮಧುಕೇಶ್ವರ ನಾಯ್ಕ ಅವರನ್ನು ಸನ್ಮಾನಿಸಿಸಲಾಯಿತು.
ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷೆ ಸುಮಾ ಉಗ್ರಾಣಕರ, ಶಿರಸಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕ ಡಿ.ಆರ್. ನಾಯ್ಕ, ಡಿ.ಎಸ್.ಪಿ. ಗೀತಾ ಪಾಟೀಲ, ಕಸಾಪ ಅಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ, ನಗರಸಭೆ ಸದಸ್ಯರಾದ ಪ್ರದೀಪ ಶೆಟ್ಟಿ, ಗೀತಾ ಶೆಟ್ಟಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಚೆನ್ನಬಸಪ್ಪ ಹಾವಣಗಿ, ನಗರಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಭೂ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಜ್ಯೋತಿ ಪಾಟೀಲ ಮತ್ತಿತರರು ಇದ್ದರು. ತಹಸೀಲ್ದಾರ್ ಪಟ್ಟರಾಜ ಗೌಡ ಸ್ವಾಗತಿಸಿದರು. ಗೀತಾ ನಾಯ್ಕ ಸಂಗಡಿಗರು ಪ್ರಾರ್ಥಿಸಿದರು. ನಗರದಲ್ಲಿ ವಿದ್ಯಾರ್ಥಿಗಳ ಆಕರ್ಷಕ ಮೆರವಣಿಗೆ ಗಮನಸೆಳೆಯಿತು.ರಾಜಕುಮಾರ ಹಾಡಿಗೆ ಹೆಜ್ಜೆ ಹಾಕಿದ ಶಾಸಕನಗರದ ಮಾರಿಕಾಂಬಾ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದ ಮುನ್ನ ಕಲಾವಿದ ಕದಂಬ ರತ್ನಾಕರ ಹಾಡಿದ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡಿಗೆ ಶಾಸಕ ಭೀಮಣ್ಣ ನಾಯ್ಕ ಕನ್ನಡಾಭಿಮಾನಿಗಳ ನಡುವೆ ಹೆಜ್ಜೆ ಹಾಕಿ ಸಂಭ್ರಮಿಸಿದರು.