ಕನ್ನಡಪ್ರಭ ವಾರ್ತೆಸೋಮವಾರಪೇಟೆ
ನವೆಂಬರ್ ತಿಂಗಳಲ್ಲಿ ಶಾಲು ಹಾಕಿ, ಸಂಭ್ರಮಿಸಿದರೆ ಕನ್ನಡ ಬೆಳೆಸಲು ಸಾಧ್ಯವಿಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿದವರು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತರೂ ಮನೆಯಲ್ಲಿ ಮಕ್ಕಳೊಂದಿಗೆ ಬಾಯಿ ತುಂಬಾ ಕನ್ನಡದಲ್ಲಿ ಮಾತನಾಡಬೇಕು ಎಂದು ಶಾಸಕ ಡಾ.ಮಂತರ್ ಗೌಡ ಸಲಹೆ ನೀಡಿದ್ದಾರೆ.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮಹಿಳಾ ಸಮಾಜದಲ್ಲಿ ಗುರುವಾರ ನಡೆದ ಕರ್ನಾಟಕ ಸುವರ್ಣ ಸಂಭ್ರಮ ಸಮಾರೋಪ ಸಮಾರಂಭದಲ್ಲಿ, ಸಾಹಿತಿ ಶ.ಗ.ನಯನತಾರಾ ಪ್ರಕಟಿಸಿರುವ ‘ಶನಿವಾರಸಂತೆ ಕೊಡ್ಲಿಪೇಟೆ ಒಂದು ಸಾಂಸ್ಕೃತಿಕ ಪಕ್ಷಿನೋಟ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಕ್ಕಳು ಕನ್ನಡ ಸಾಹಿತ್ಯ ಓದಲು ಪ್ರೋತ್ಸಾಹ ನೀಡಿಬೇಕು. ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಕಲಿಕೆಗೆ ಅವಕಾಶ ಮಾಡಿಕೊಡಬೇಕು ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕನ್ನಡಕ್ಕೆ ೨ ಸಾವಿರ ವರ್ಷಗಳ ಇತಿಹಾಸವಿದ್ದು, ೮ ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿದೆ. ಇಂತಹ ಶ್ರೀಮಂತ ಸಂಸ್ಕೃತಿ ಹೊಂದಿರುವ ಕನ್ನಡವನ್ನು ಉಳಿಸುವುದಕ್ಕೆ ಹೋರಾಟ ಮಾಡುವಂತ ದುಃಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಪರ ಹೋರಾಟದಲ್ಲಿ ಯುವಕರು ಧುಮುಕಬೇಕು. ಈಗಂತೂ ಹಿರಿಯರೇ ಕನ್ನಡದ ಕೆಲಸ ಮಾಡುತ್ತಿದ್ದಾರೆ ಎಂದು ವಿರಾಜಪೇಟೆ ತಾಲ್ಲೂಕು ಕ.ಸಾ.ಪ., ಮಾಜಿ ಅಧ್ಯಕ್ಷ ಡಾ.ಚಂದ್ರಶೇಖರ್ ಹೇಳಿದರು.ಪರಿಷತ್ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಜಯವೀರಮಾತೆ ಚರ್ಚ್ ಧರ್ಮಗುರು ಜಾನ್ ಫರ್ನಾಂಡಿಸ್, ಹಿಂದು ಮಲೆಯಾಳ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ್, ಸಾಹಿತಿ ಜಲಾಕಾಳಪ್ಪ, ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೆರ ತುಳಸಿ, ಕ.ಸಾ.ಪ.ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಮುನೀರ್ ಆಹಮ್ಮದ್, ರೇವತಿ ರಮೇಶ್ ಮತ್ತಿತರರು ಇದ್ದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇ.೧೦೦ ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು, ಅವರಿಗೆ ಕಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.