ರೇವತಿ ನಕ್ಷತ್ರ ನಿಮಿತ್ತ ಭೂ ವರಹನಾಥಸ್ವಾಮಿಗೆ ವಿಶೇಷ ಅಭಿಷೇಕ, ಪುಷ್ಪಾಭಿಷೇಕ

KannadaprabhaNewsNetwork |  
Published : May 25, 2025, 01:13 AM ISTUpdated : May 25, 2025, 01:14 AM IST
24ಕೆಎಂಎನ್ ಡಿ15,16 | Kannada Prabha

ಸಾರಾಂಶ

17 ಅಡಿ ಎತ್ತರದ ವಿಶ್ವದಲ್ಲಿಯೇ ಅಪರೂಪದ ಸಾಲಿಗ್ರಾಮ ಶ್ರೀಕೃಷ್ಣ ಶಿಲೆಯಲ್ಲಿ ಕೆತ್ತಿರುವ ಸ್ವಾಮಿಯ ಶಿಲಾ ಮೂರ್ತಿಗೆ ಒಂದು ಸಾವಿರ ಲೀಟರ್ ಹಾಲು, ಐನೂರು ಲೀಟರ್ ಎಳನೀರು, ಐನೂರು ಲೀಟರ್ ಕಬ್ಬಿನ ಹಾಲು, ಹಸುವಿನ ತುಪ್ಪ, ಮೊಸರು, ಅರಿಶಿನ ಶ್ರೀಗಂಧ ಹಾಗೂ ಪವಿತ್ರ ಸುಗಂಧ ದ್ರವ್ಯಗಳಿಂದ ಅಭಿಷೇಕ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಕಲ್ಲಹಳ್ಳಿಯ ಭೂದೇವಿ ಸಮೇತ ಶ್ರೀಲಕ್ಷ್ಮೀ ವರಹನಾಥಸ್ವಾಮಿ ಕ್ಷೇತ್ರದಲ್ಲಿ ರೇವತಿ ನಕ್ಷತ್ರದ ಅಂಗವಾಗಿ ವರಹಾಸ್ವಾಮಿಗೆ ವಿಶೇಷ ಅಭಿಷೇಕ, ಪುಷ್ಪಾಭಿಷೇಕ, ಶ್ರೀನಿವಾಸ ಕಲ್ಯಾಣ ಹಾಗೂ ಚಂಡಿಕಾ ಹೋಮವು ವಿಶೇಷವಾಗಿ ನಡೆಯಿತು.

ಶಿವಮೊಗ್ಗ ಗ್ರಾಮೀಣ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯಕ್ ವಿಶೇಷ ಅಭಿಷೇಕ ಹಾಗೂ ಚಂಡಿಕಾ ಹೋಮದಲ್ಲಿ ಭಾಗಿಯಾಗಿ ಪ್ರಾರ್ಥನೆ ಸಲ್ಲಿಸಿದರು. ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿ ಅಭಿಷೇಕವನ್ನು ಕಣ್ತುಂಬಿಕೊಂಡರು.

17 ಅಡಿ ಎತ್ತರದ ವಿಶ್ವದಲ್ಲಿಯೇ ಅಪರೂಪದ ಸಾಲಿಗ್ರಾಮ ಶ್ರೀಕೃಷ್ಣ ಶಿಲೆಯಲ್ಲಿ ಕೆತ್ತಿರುವ ಸ್ವಾಮಿಯ ಶಿಲಾ ಮೂರ್ತಿಗೆ ಒಂದು ಸಾವಿರ ಲೀಟರ್ ಹಾಲು, ಐನೂರು ಲೀಟರ್ ಎಳನೀರು, ಐನೂರು ಲೀಟರ್ ಕಬ್ಬಿನ ಹಾಲು, ಹಸುವಿನ ತುಪ್ಪ, ಮೊಸರು, ಅರಿಶಿನ ಶ್ರೀಗಂಧ ಹಾಗೂ ಪವಿತ್ರ ಸುಗಂಧ ದ್ರವ್ಯಗಳಿಂದ ಅಭಿಷೇಕ ಮಾಡಲಾಯಿತು.

ಮಲ್ಲಿಗೆ, ಜಾಜಿ, ಸಂಪಿಗೆ, ಸೇವಂತಿಗೆ, ಗುಲಾಬಿ, ಪವಿತ್ರ ಪಾತ್ರೆಗಳು, ಧವನ, ತುಳಸಿ, ಕಮಲ ಸೇರಿದಂತೆ 58 ವಿವಿಧ ಬಗೆಯ ಹೂವುಗಳಿಂದ ಪುಷ್ಪಾಭಿಷೇಕ ನಡೆಸಿ ಶ್ರೀನಿವಾಸ ಕಲ್ಯಾಣ ಮಾಡಿ ದೇಶದ ಯೋಧರಿಗೆ ಶುಭ ಕೋರಲಾಯಿತು. ಕ್ಷೇತ್ರಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.

ಈ ವೇಳೆ ಶಿವಮೊಗ್ಗ ಗ್ರಾಮೀಣ ಕ್ಷೇತ್ರದ ಶಾಸಕಿ ಶಾರದಾ ಪೂರ್ಯ ನಾಯಕ್ ಮಾತನಾಡಿ, ತಿರುಮಲ ತಿರುಪತಿ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಭೂ ವರಹನಾಥಸ್ವಾಮಿ ಬೇಡಿ ಬಂದ ಭಕ್ತರ ಕೋರಿ ಹಾಗೂ ಬೇಡಿಕೆ ಈಡೇರಿಸುವ ಶ್ರೀ ಕ್ಷೇತ್ರವಾಗಿದೆ ಎಂದರು.

ಸ್ವಂತ ಮನೆ ಹೊಂದಬೇಕೆಂಬ ಭಕ್ತರು ಈ ಕ್ಷೇತ್ರಕ್ಕೆ ಬಂದು ಭೂವರಾಹನಾಥ ಸ್ವಾಮಿಯನ್ನು ಪ್ರಾರ್ಥಿಸಿ ಪೂಜಿಸಿದರೆ ಭಗವಂತನು ನಮ್ಮ ಬೇಡಿಕೆಗಳನ್ನು ಈಡೇರಿಸಿ ಸ್ವಂತ ಮನೆ ಕರುಣಿಸುತ್ತಿರುವ ನಂಬಿಕೆಯಿಂದಾಗಿ ಸಾವಿರಾರು ಭಕ್ತರು ಪೂಜಿಸಿ ಆರಾಧಿಸುತ್ತಿದ್ದಾರೆ ಎಂದರು.

ಮೈಸೂರಿನ ಪರಕಾಲ ಮಠದ ಶ್ರೀಪರಕಾಲಸ್ವಾಮಿಗಳ ಆಶೀರ್ವಾದದಿಂದ ಭೂ ವರಹಾನಾಥ ದೇವಾಲಯದ ನಿರ್ಮಾಣ ಕಾರ್ಯವು ಭರದಿಂದ ಸಾಗಿದೆ. ತುಂಬಾ ದಿನಗಳಿಂದ ಭೂ ವರಹನಾಥ ಕ್ಷೇತ್ರಕ್ಕೆ ಆಗಮಿಸಿ ಸ್ವಾಮಿ ಸೇವೆ ಮಾಡಬೇಕೆಂಬ ಆಸೆ ಇತ್ತು. ಆ ಘಳಿಗೆಯು ಇಂದು ಕೂಡಿ ಬಂದಿದೆ ಎಂದರು.

ಆಪರೇಷನ್ ಸಿಂಧೂರ ಕಾರ್ಯಚರಣೆಯ ಯಶಸ್ಸಿನ ರೂವಾರಿಗಳಾದ ದೇಶದ ಸೈನಿಕರಿಗೆ ಶುಭವಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು.

ದೇವಾಲಯದ ವ್ಯವಸ್ಥಾಪನ ಸಮಿತಿ ಮ್ಯಾನೇಜಿಂಗ್ ಟ್ರಸ್ಟಿ ಡಾ.ಶ್ರೀನಿವಾಸ್ ರಾಘವನ್ ಮಾತನಾಡಿ, ದೇವಾಲಯವನ್ನು ಸಂಪೂರ್ಣ ಗ್ರಾನೈಟ್ ಕಲ್ಲಿನಿಂದಲೇ ಸಿಎನ್‌ಸಿ ತಂತ್ರಜ್ಞಾನದಿಂದ ನಿರ್ಮಿಸಲಾಗುತ್ತಿದೆ. ಇನ್ನು ಮೂರು ವರ್ಷದೊಳಗೆ ದೇವಾಲಯ ಹಾಗೂ 168 ಅಡಿ ಎತ್ತರದ ರಾಜಗೋಪುರ ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಸುಸಜ್ಜಿತ ಶಾಲೆ ಲೋಕಾರ್ಪಣೆಯಾಗಲಿದೆ ಎಂದು ಹೇಳಿದರು.

PREV

Latest Stories

ಜಿಲ್ಲೆಯಲ್ಲಿ ಬೇಡಿಕೆಗಿಂತ ಹೆಚ್ಚು ಯೂರಿಯಾ ಪೂರೈಕೆ
ಕನ್ನಿಕಾ ಮಹಲ್‌ನಲ್ಲಿ ನಾಣ್ಯ, ನೋಟುಗಳ ಅಪೂರ್ವ ಪ್ರದರ್ಶನ
ಜಿ.ಎಸ್‌.ಟಿ ವಿರೋಧಿಸಿ ಪ್ರತಿಭಟನೆ