ಕನ್ನಡಪ್ರಭ ವಾರ್ತೆ ಬೀದರ್
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ 1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ರಜೆ ಅವಧಿಯಲ್ಲಿ ವಿಶೇಷ ತರಗತಿ ನಡೆಸುವಂತೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹೊರಡಿಸಿದ ಆದೇಶ ರದ್ದುಪಡಿಸಬೇಕೆಂದು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.ಜಿಲ್ಲಾಧ್ಯಕ್ಷ ಪಾಂಡುರಂಗ ಬೆಲ್ದಾರ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ನಗರದಲ್ಲಿ ನಿಯೋಗದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಕಲಬುರಗಿ ಹೆಚ್ಚುವರಿ ಆಯುಕ್ತರಿಗೆ ಬರೆದ ಮನವಿ ಪತ್ರವನ್ನು ಇಲಾಖೆಯ ಅಧಿಕಾರಿ ಶಿವಲಿಂಗಪ್ಪ ಹಿರೇಮನಿಗೆ ಸಲ್ಲಿಸಿದರು.
ಏ.10ರಿಂದ ಮೇ 28ರ ವರೆಗೆ ರಜೆ ಅವಧಿ ಇದ್ದರೂ ಶಿಕ್ಷಕರು ಮೇ 7ರ ವರೆಗೆ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಹಾಗೂ ಲೋಕಸಭೆ ಚುನಾವಣೆ ಕೆಲಸ ನಿರ್ವಹಿಸಿದ್ದಾರೆ. ಇದೀಗ ಉಳಿದ ರಜೆ ಅವಧಿಯಲ್ಲೂ ತರಗತಿ ನಡೆಸಲು ಸೂಚಿಸಿರುವುದು ಶಿಕ್ಷಕರಿಗೆ ಆಘಾತ ಉಂಟು ಮಾಡಿದೆ ಎಂದು ಹೇಳಿದರು.ಇಲಾಖೆ ಕ್ರಮ ಶಿಕ್ಷಕರ ಮೇಲೆ ಒತ್ತಡ ಹೇರುವಂಥದ್ದಾಗಿದೆ. ಇದು, ಕೆಲ ದಿನಗಳಾದರೂ ನೆಮ್ಮದಿಯಿಂದ ರಜೆ ಕಳೆಯ ಬಯಸಿದ್ದ ಶಿಕ್ಷಕರ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಿಕ್ಷಕ ವೃತ್ತಿ ರಜೆ ಸಹಿತ ಸೇವೆಯಾಗಿದೆ. ಶಿಕ್ಷಕರು ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ ಶಾಲಾ ಪೂರ್ವ ಅವಧಿ ಹಾಗೂ ನಂತರದ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿಕೊಂಡು ಬಂದಿದ್ದಾರೆ. ಎಫ್‌ಎ 1ರಿಂದ ಎಫ್‌ಎ 4, ಮೂರು ಸರಣಿ ಹಾಗೂ ಒಂದು ಪೂರ್ವ ಸಿದ್ಧತಾ ಪರೀಕ್ಷೆ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.ಸಂಘದ ಜಿಲ್ಲಾ ಗೌರವಾಧ್ಯಕ್ಷ ಕಲಾಲ್ ದೇವಿಪ್ರಸಾದ್, ಉಪಾಧ್ಯಕ್ಷ ಸೂರ್ಯಕಾಂತ ಶಿಂಗೆ, ಪ್ರಧಾನ ಕಾರ್ಯದರ್ಶಿ ವೀರಭದ್ರಪ್ಪ ಚಟ್ನಾಳೆ, ಸಹ ಕಾರ್ಯದರ್ಶಿ ಬಲವಂತರಾವ್ ರಾಠೋಡ್, ಬೀದರ್ ತಾಲೂಕು ಘಟಕದ ಅಧ್ಯಕ್ಷ ಎಂ.ಡಿ. ಶಹಾಬೊದ್ದಿನ್, ಬಾಬುರಾವ್ ಮಾಳಗೆ, ಅನಿಲಕುಮಾರ ಶೇರಿಕಾರ್, ಸುಭಾಷ್ ಚೌಹಾಣ್, ರಘುನಾಥರಾವ್ ಭೂರೆ ನಿಯೋಗದಲ್ಲಿ ಇದ್ದರು.