ಕನ್ನಡಪ್ರಭ ವಾರ್ತೆ ಮಡಿಕೇರಿ
ಸದಸ್ಯರ ಮತ ಪಡೆದು ಆಡಳಿತ ಚುಕ್ಕಾಣಿ ಹಿಡಿದ ನಂತರ ತಮ್ಮ ಸಂಸ್ಥೆಗಳ ಅಭಿವೃದ್ಧಿಗೆ ಆದ್ಯತೆ ಕೊಡಬೇಕು ಎಂದು ಸಹಕಾರ ಯೂನಿಯನ್ ನಿರ್ದೇಶಕ ಎನ್.ಎ. ರವಿ ಬಸಪ್ಪ ಕರೆ ನೀಡಿದ್ದಾರೆ.ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಆಶ್ರಯದಲ್ಲಿ ಜಿಲ್ಲೆಯ ಸಹಕಾರ ದವಸ ಭಂಡಾರಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಸಹಕಾರ ಕಾಯ್ದೆ, ಕಾನೂನು ತಿದ್ದುಪಡಿ ಹಾಗೂ ಪಶುಪಾಲನೆ ಕುರಿತು ವಿಶೇಷ ಶಿಕ್ಷಣ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಯೂನಿಯನ್ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ ಮಾತನಾಡಿ, ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೆ ಮೊದಲ ಸ್ಥಾನದಲ್ಲಿದೆ. ಕರ್ನಾಟಕವೂ ಸಹ ಅಗ್ರ ಪಾಲು ಉತ್ಪಾದಕರ ರಾಜ್ಯಗಳ ಪೈಕಿ ಇದೆ. ಆದರೆ ಕೊಡಗು ಕೇವಲ ಹಾಲಿನ ಮಾರಾಟ ಪ್ರದೇಶವಾಗಿದ್ದು ಹೈನೋದ್ಯಮ ಜಿಲ್ಲೆಯ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಿದೆ ಎಂದರು.ಇತ್ತೀಚಿನ ವರ್ಷಗಳಲ್ಲಿ ದೇಶೀಯ ಹಸು ತಳಿಗಳನ್ನು ಆರೋಗ್ಯ ಮತ್ತು ಔಷಧದ ಹಿತದೃಷ್ಟಿಯಿಂದ ಸಹ ಸಲಹುವವರು ಹೆಚ್ಚಾಗುತ್ತಿದ್ದಾರೆ. ಕೇವಲ ಹಾಲು ಮಾತ್ರ ಅಲ್ಲ ಸಗಣಿ ಮತ್ತು ಗೋಮೂತ್ರಕ್ಕೂ ಅತ್ಯಧಿಕ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ದವಸ ಭಂಡಾರಗಳು ಹಾಲು ಶೇಖರಣಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಿದಲ್ಲಿ ರೈತರಿಗೂ ಉಪಯೋಗವಾಗಿ ಆರ್ಥಿಕ ಅಭಿವೃದ್ಧಿಯಾಗುತ್ತದೆ ಎಂದು ಅಬಿಪ್ರಾಯಪಟ್ಟರು.
ತರಬೇತಿ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳೂ ಸೇರಿದಂತೆ ಹಲವು ರೀತಿಯ ವಿಷಯಗಳ ಕುರಿತು ವಿಚಾರ ವಿನಿಮಯ, ವಿಷಯ ಮಂಡನೆಯ ಕೆಲವನ್ನಾದರೂ ಅನುಷ್ಠಾನಗೊಳಿಸಿದಲ್ಲಿ ಸಂಘವು ಮುನ್ನಡೆಯುತ್ತದೆ. ಸಮಾಜ ಆರ್ಥಿಕವಾಗಿ ಸಬಲವಾದರೆ ದೇಶ ಮುನ್ನಡೆಯೂ ಸ್ವಾಭಾವಿಕವಾಗಿ ಆಗುತ್ತದೆ ಎಂದು ತಿಳಿಸಿದರು.ಯೂನಿಯನ್ ನಿರ್ದೇಶಕರಾದ ಬಿ.ಎ. ರಮೇಶ್ ಚಂಗಪ್ಪ, ಕನ್ನಂಡ ಸಂಪತ್, ಪಿ.ಬಿ. ಯತೀಶ್, ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಹೇಮಲತಾ ಇದ್ದರು.ಪಶುಪಾಲನೆ, ಉಪಕಸುಬುಗಳು, ಸರ್ಕಾರದ ಯೋಜನೆಗಳ ಕುರಿತು ಡಾ.ಕೆ.ಎ. ಪ್ರಸನ್ನ, ಸಹಕಾರ ಕಾಯ್ದೆ, ಕಾನೂನು ಮತ್ತು ಇತ್ತೀಚಿನ ತಿದ್ದುಪಡಿಗಳ ಕುರಿತು ಕೆ.ಐ.ಸಿ.ಎಂ.ನ ನಿವೃತ್ತ ಪ್ರಾಂಶುಪಾಲೆ ಎಂ.ಎಂ. ಶ್ಯಾಮಲಾ ಮತ್ತು ಲೆಕ್ಕಪರಿಶೋಧನಾ ವರದಿ ತಯಾರಿಕೆ ಕುರಿತು ಲೆಕ್ಕಪರಿಶೋಧನಾ ಇಲಾಖೆಯ ಲೆಕ್ಕಪರಿಶೋಧಕ ಹಂಸ ಮಾಹಿತಿ ನೀಡಿದರು.
ಜಿಲ್ಲೆಯ ವಿವಿಧ ದವಸ ಭಂಡಾರದ ಪ್ರತಿನಿಧಿಗಳು ಮಾತನಾಡಿ, ದವಸ ಭಂಡಾರಗಳೇ ಸಹಕಾರ ಪರಿಕಲ್ಪನೆಗೆ ಮೂಲವಾಗಿದ್ದು ಹಿರಿಯರ ಉದ್ದೇಶಗಳಿಗೆ ಗೌರವ ನೀಡಿ ಸಂಘವನ್ನು ಉಳಿಸಿ ಬೆಳೆಸಲು ಅಗತ್ಯವಾದ ಪ್ರಗತಿ, ಕುಂದುಕೊರತೆ ಅಗತ್ಯತೆ ಕುರಿತು ಸಭೆಯ ಗಮನಕ್ಕೆ ತಂದರು.ಕೊಳಕೇರಿ ದವಸ ಭಂಡಾರದ ಅಧ್ಯಕ್ಷ ರಮೇಶ್ ಮುದ್ದಯ್ಯ ಮಾತನಾಡಿ, ಹಿರಿಯರು ಉದಾರವಾಗಿ ನೀಡಿದ ಸ್ಥಳದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದ್ದು ಕಾರ್ಯದರ್ಶಿ ಮತ್ತು ಸ್ಟೋರ್ ಕೀಪರ್ ನಮ್ಮ ಆಧಾರ ಸ್ತಂಭಗಳಂತೆ ಕೆಲಸ ಮಾಡಿದ ಕಾರಣ ಉತ್ತಮ ಲಾಭಗಳಿಸುತ್ತಿದ್ದು ಕಡಿಮೆ ದರದಲ್ಲಿ ಗುಣಮಟ್ಟದ ಗೊಬ್ಬರ ಪೂರೈಕೆ ಮತ್ತು ಸಾಲ ನೀಡುತ್ತಿರುವ ಕುರಿತು ತಿಳಿಸಿದರು.
ಹಾಲುಗುಂದ ಸಹಕಾರ ದವಸ ಭಂಡಾರದ ಅಧ್ಯಕ್ಷ ಪಿ.ಸಿ. ನಾಣಯ್ಯ ಮಾತನಾಡಿ, ಕಟ್ಟಡವನ್ನು ಹೊಟೇಲ್, ವರ್ಕ್ ಶಾಪ್ ಬಾಡಿಗೆಗೆ ಕೊಟ್ಟಿದ್ದು, ಸದಸ್ಯರೆಲ್ಲರು ಸೇರಿ ಮುಂಗಡ ಹಾಡಿ ಗೊಬ್ಬರ, ತಾಟು ಇತರೆ ಖರೀದಿಸಿ ಮಾರಾಟ ಮಾಡುತ್ತಿದ್ದು ಸಂಘದ ಪುಶ್ಚೇನಕ್ಕಾಗಿ ಈ ಹಿಂದೆ ಯೂನಿಯನ್‌ನವರು ರೂಪಿಸಿದ ಕಾರ್ಯಕ್ರಮವನ್ನು ಉತ್ತಮವಾಗಿ ಅನುಷ್ಠಾನಗೊಳಿಸಿದ ಬಾಪ್ತು ಲಾಭದಲ್ಲೇ ಮುಂದುವರೆಯಲು ಯೂನಿಯನ್ ಪುನಶ್ಚೇತನಾ ಸಮಿತಿಯೇ ಕಾರಣ ಎಂದರು.ಸ್ವಂತ ಕಟ್ಟಡವನ್ನು ಸಣ್ಣಪುಟ್ಟ ಕಾರ್ಯಗಳಿಗೆ ಬಾಡಿಗೆಗೆ ನೀಡಿ ಬಹುದಿನದಿಂದ ನವೀಕರಣಕ್ಕಾಗಿ ಆದಾಯದ ಕೊರತೆ ಇರುವುದಾಗಿ ದುರ್ಬಲ ಸಹಕಾರ ಸಂಘಗಳಾದ ದವಸ ಭಂಡಾರಗಳಿಗೂ ಕೇಂದ್ರ ಬ್ಯಾಂಕ್‌ನಿಂದ ಪ್ಯಾಕ್ಸ್‌ಗಳಿಗೆ ವಿತರಿಸಿದ ರೀತಿ ಸಹಾಯಧನ ಮಾತ್ರವಲ್ಲದೆ ಲ್ಯಾಪ್‌ಟಾಪ್, ಗಣಕಯಂತ್ರ ಪರಿಕರಗಳನ್ನು ನೀಡಬೇಕು ಎಂದು ಪ್ರತಿನಿಧಿಗಳು ಕೋರಿದರು.ದುಬಾರಿ ಲೆಕ್ಕಪರಿಶೋಧನಾ ಶುಲ್ಕ, ಸಕಾಲದಲ್ಲಿ ಲೆಕ್ಕಪರಿಶೋಧನೆ ಆಗದ ಕುರಿತು ಇಲಾಖೆಯವರಿಗೆ ದವಸ ಭಂಡಾರದ ಲೆಕ್ಕಪರಿಶೋಧನೆ ನಡೆಸುವ ಜ್ಞಾನದ ಕೊರತೆ ಇರುವ ಕುರಿತು ಆಕ್ರೋಶ ವ್ಯಕ್ತಪಡಿಸಿ ಕೊಡಗಿನವರೇ ಆಡಿಟ್ ಮಾಡಿಕೊಡಬೇಕಾಗಿ ಕೋರಿದರು.
ಪ್ರಾಥಮಿಕ ಶಾಲೆಗಳ ಮಾದರಿ ದವಸ ಭಂಡಾರಗಳ ಭೂ ದಾಖಲೆಗಳಾದ ಖಾತೆ ವರ್ಗಾವಣೆ, ದಾಖಲೀಕರಣ ಇತ್ಯಾದಿ ಭೂ ದಾಖಲೆಗಳನ್ನು ಸರಿಪಡಿಸಿ ಇಲಾಖೆಯಿಂದಲೇ ಕ್ರಮಕೈಗೊಂಡು ತುರ್ತಾಗಿ ಸರಿಪಡಿಸಿಕೊಡಬೇಕಾಗಿ ಕೋರಿದರು.ಕಗ್ಗೋಡ್ಲು ಪ್ಯಾಕ್ಸ್‌ನ ಕಾರ್ಯದರ್ಶಿ ಇಂದ್ರಕುಮಾರ್ ಪ್ರಾರ್ಥಿಸಿದರು. ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿದರು.