ಕನ್ನಡಪ್ರಭ ವಾರ್ತೆ ಮದ್ದೂರು
ಸ್ಥಳೀಯರು ಸೇರಿದಂತೆ ಬೆಂಗಳೂರು, ಮೈಸೂರು, ಮಂಡ್ಯ ಒಳಗೊಂಡಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತರು ಗೋವಿಂದ ನಾಮಸ್ಮರಣೆಯೊಂದಿಗೆ ದೇವರ ದರ್ಶನ ಪಡೆದು ಧನ್ಯತಾ ಭಾವ ಮೆರೆದರು.
ಪಟ್ಟಣದ ಹೊರವಲಯದ ಕದಂಬ ನದಿ ದಂಡೆಯ ಶ್ರೀಹೊಳೆಆಂಜನೇಯ ಸ್ವಾಮಿ ದೇಗುಲದಲ್ಲಿ ಮುಂಜಾನೆ ಮೂಲ ವಿಗ್ರಹಕ್ಕೆ ಮಧು ಮತ್ತು ಪಂಚಾಮೃತ ಅಭಿಷೇಕದ ನಂತರ ಪುಷ್ಪಾಲಂಕಾರದೊಂದಿಗೆ ವಿಶೇಷವಾಗಿಬೆಣ್ಣೆ ಅಲಂಕಾರ ಬಳಿಕ ಮಹಾಮಂಗಳಾರತಿ ನೆರವೇರಿಸಲಾಯಿತು.ಮಧ್ಯಾಹ್ನ ಶ್ರೀನಿವಾಸ, ಶ್ರೀದೇವಿ, ಭೂದೇವಿ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿ ದೇಗುಲದ ಪ್ರಕಾರದಲ್ಲಿ ಮೆರವಣಿಗೆ ನಡೆಸಲಾಯಿತು. ಮನ್ಮುಲ್ ನಿರ್ದೇಶಕಿ ರೂಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ ಹಾಗೂ ನಿರ್ದೇಶಕರುಗಳು ಉತ್ಸವದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ನೆರವೇರಿಸಿದರು.
ಕಡೇ ಶ್ರಾವಣ ಮಾಸದ ದಿನದಂದು ಮಾತ್ರವೇ ಶ್ರೀಉಗ್ರ ನರಸಿಂಹಸ್ವಾಮಿ ದೇವರಿಗೆ ಬೆಣ್ಣೆ ಅಲಂಕಾರ ಮಾಡಿರುವುದು ವಿಶೇಷವಾಗಿತ್ತು. ದೇಗುಲಕ್ಕೆ ಹೊಂದಿಕೊಂಡಿರುವ ಶ್ರೀ ವರದರಾಜ ಸ್ವಾಮಿ ದೇವಾಲಯದಲ್ಲೂ ಸಹ ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳನ್ನು ನಡೆದವು.
ಶ್ರೀ ಕದಲಿ ಲಕ್ಷ್ಮಿ ವೆಂಕಟೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಶಿವರಾಂ ಹಾಗೂ ಪ್ರಧಾನ ಅರ್ಚಕ ಕೆ.ನಾರಾಯಣ್ ನೇತೃತ್ವದಲ್ಲಿ ಅಭಿಷೇಕದೊಂದಿಗೆ ವಿಶೇಷ ಪೂಜಾ ಕಾರ್ಯಗಳು ನಡೆದವು. ತಾಲೂಕಿನ ಕೊಪ್ಪ ಹೋಬಳಿ ಆಬಲವಾಡಿ ಗ್ರಾಮದ ತೋಪಿನ ತಿಮ್ಮಪ್ಪನ ದೇವಾಲಯದಲ್ಲೂ ಸಹ ಶ್ರಾವಣ ಮಾಸದ ಕೊನೆಯ ದಿನದ ಅಂಗವಾಗಿ ಅಭಿಷೇಕದೊಂದಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರಿದವು.