ಹುಬ್ಬಳ್ಳಿ: ಶಾಸಕರಿಗೆ ₹7455 ಕೋಟಿ ವಿಶೇಷ ಅನುದಾನ ನೀಡಲಾಗುತ್ತಿದೆ. ಇದು ರಾಜ್ಯ ಉಸ್ತುವಾರಿ ಸುರ್ಜೇವಾಲಾ ಬಂದು ಹೋದ ಮೇಲೆ ನಿರ್ಧಾರ ಮಾಡಿರುವುದಲ್ಲ, ಬಜೆಟ್ ಸಭೆಯಲ್ಲೇ ಚರ್ಚೆ ಮಾಡಲಾಗಿತ್ತು. ಈಗ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸ್ಪಷ್ಟಪಡಿಸಿದರು.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದರು.ರಾಜ್ಯದ ಎಲ್ಲ ಶಾಸಕರಿಗೂ ತಲಾ ₹50 ಕೋಟಿ ವಿಶೇಷ ಅನುದಾನ ಕೊಡುವ ಬಗ್ಗೆ ಚರ್ಚೆ ಆಗಿತ್ತು. ಲೆಕ್ಕ ಹಾಕಿದರೆ ₹11 ಸಾವಿರ ಕೋಟಿ ಹಣ ಬೇಕಾಗಿತ್ತು. ಹೀಗಾಗಿ ಅದನ್ನು ₹8 ಸಾವಿರ ಕೋಟಿಗೆ ಸೀಮಿತಗೊಳಿಸಲಾಯಿತು ಎಂದು ರಾಯರಡ್ಡಿ ವಿವರಿಸಿದರು.
ಬಿಬಿಎಂಪಿಗೆ ವಿಶೇಷ ಅನುದಾನ ನೀಡುತ್ತಿರುವುದರಿಂದ ಬೆಂಗಳೂರು ವ್ಯಾಪ್ತಿಗೆ ಬರುವ 28 ಶಾಸಕರನ್ನು ಹೊರತುಪಡಿಸಿ, ಉಳಿದ 196 ಶಾಸಕರಿಗೆ ವಿಶೇಷ ಅನುದಾನ ನೀಡಲಾಗುತ್ತಿದೆ. ಈ ಪೈಕಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೂ ವಿಶೇಷ ಅನುದಾನ ಬರುವುದರಿಂದ ಅಲ್ಲಿನ 41 ಶಾಸಕರಿಗೆ ₹25 ಕೋಟಿ ವಿಶೇಷ ಅನುದಾನ ನೀಡಲು ನಿರ್ಧರಿಸಲಾಗಿದೆ. ಉಳಿದಂತೆ ವಿಪಕ್ಷದ 68 ಸದಸ್ಯರಿಗೆ ತಲಾ ₹25 ಕೋಟಿ, ಇನ್ನುಳಿದ 101 ಕಾಂಗ್ರೆಸ್ ಶಾಸಕರಿಗೆ ತಲಾ ₹50 ಕೋಟಿ ಅನುದಾನ ನೀಡಲಾಗುವುದು. ಶಾಸಕರಿಗೆ ಅನುದಾನ ಹಂಚಿಕೆಯ ವಿಷಯದಲ್ಲಿ ತಾರತಮ್ಯವಾಗುತ್ತಿದೆ ಎಂಬುದೆಲ್ಲವೂ ಸುಳ್ಳು. ಯಾವುದೇ ಬಗೆಯ ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.ಹಣದ ಕೊರತೆ ಇಲ್ಲ: ಹೀಗೆ ಎಲ್ಲ ಶಾಸಕರನ್ನೂ ಒಳಗೊಂಡಂತೆ ₹7455 ಕೋಟಿ ವಿಶೇಷ ಅನುದಾನ ನೀಡಲಾಗುತ್ತಿದೆ. ಎಲ್ಲ ಶಾಸಕರೊಂದಿಗೆ ಒನ್ ಟು ಒನ್ ಮಾತನಾಡಿಯೇ ವಿಶೇಷ ಅನುದಾನದ ಬಗ್ಗೆ ತಿಳಿಸಲಿದ್ದಾರೆ. ಹೀಗಾಗಿ ಜು. 30 ರಂದು ಕಲ್ಯಾಣ ಕರ್ನಾಟಕ, 31 ರಂದು ಕಿತ್ತೂರು ಕರ್ನಾಟಕ ಹಾಗೂ ಆ. 3ರಂದು ಹಳೇ ಮೈಸೂರು ಭಾಗದ ಶಾಸಕರನ್ನು ಭೇಟಿ ಮಾಡಿ ವಿಶೇಷ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು ಚರ್ಚೆ ಮಾಡಲಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲಿದ್ದಾರೆ.
ಶ್ವೇತಪತ್ರ: ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ವಿಪಕ್ಷಗಳು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಜನರಿಗೆ ಸರಿಯಾದ ಮಾಹಿತಿ ನೀಡುವ ಉದ್ದೇಶದಿಂದ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡುತ್ತೇನೆ ಎಂದರು.ರಾಜ್ಯ ಸರ್ಕಾರ ದಿವಾಳಿಯಾಗಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ವಿಪಕ್ಷಗಳು ನಿರಂತರವಾಗಿ ಆರೋಪಿಸುತ್ತಿವೆ. ಇವರ ಆರೋಪಕ್ಕೆ ಜನತೆ ಕಿವಿಗೊಡುವ ಅವಶ್ಯಕತೆ ಇಲ್ಲ. ರಾಜ್ಯದ ಅಭಿವೃದ್ಧಿಗಾಗಿ ಕಳೆದ ಬಜೆಟ್‌ನಲ್ಲಿ ₹83 ಸಾವಿರ ಕೋಟಿ ಮೀಸಲಿರಿಸಿದ್ದೇವೆ. ಇಷ್ಟು ಹಣವನ್ನು ಹಿಂದಿನ ಯಾವ ಸರ್ಕಾರಗಳೂ ಮೀಸಲು ಇಟ್ಟಿರಲಿಲ್ಲ ಎಂದರು.
ಕೇಂದ್ರದಿಂದ ಅನ್ಯಾಯ: ವಿಪಕ್ಷದವರನ್ನು ತರಾಟೆಗೆ ತೆಗೆದುಕೊಂಡ ರಾಯರಡ್ಡಿ, ಕೇಂದ್ರದಿಂದ ರಾಜ್ಯಕ್ಕೆ ಆಗಬೇಕಾದ ಸಾಕಷ್ಟು ಕೆಲಸಗಳಿವೆ. 15ನೇ ಹಣಕಾಸು ಆಯೋಗದ ಪ್ರಕಾರ ರಾಜ್ಯಕ್ಕೆ ಕೇಂದ್ರದಿಂದ ₹5443 ಕೋಟಿ ಬರಬೇಕಿದೆ. ಭದ್ರಾ ಯೋಜನೆಗೆ ₹5400 ಕೋಟಿ ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಎಲ್ಲವೂ ಸೇರಿ ಒಟ್ಟು ₹16 ಸಾವಿರ ಕೋಟಿ ಹಣ ಬಿಡುಗಡೆ ಆಗಬೇಕಿತ್ತು. ಆದರೆ, ಈ ಬಗ್ಗೆ ಬಿಜೆಪಿಯ ರಾಜ್ಯ ನಾಯಕರು ತುಟಿ ಬಿಚ್ಚುತ್ತಿಲ್ಲ ಎಂದು ಕಿಡಿಕಾರಿದರು.14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಪ್ರತಿ ವರ್ಷ ಬರುತ್ತಿದ್ದ ಜಿಎಸ್‌ಟಿ ಹಣದಲ್ಲಿ ನಮಗೆ ₹21 ಸಾವಿರ ಕೋಟಿ ಕಡಿಮೆ ಬರುತ್ತಿದೆ. ಗ್ಯಾರಂಟಿ ಯೋಜನೆಯ ₹52 ಸಾವಿರ ಕೋಟಿ ಪೈಕಿ ₹32 ಸಾವಿರ ಕೋಟಿ ಗೃಹ ಲಕ್ಷ್ಮಿ ಯೋಜನೆಗೆ ಹೋಗುತ್ತಿದೆ. ಗೃಹ ಜ್ಯೋತಿ ಯೋಜನೆ 1.02 ಕೋಟಿ ಕುಟುಂಬಗಳಿಗೆ ನೇರ ಲಾಭವಾಗುತ್ತಿದೆ. ಇದನ್ನೆಲ್ಲ ಜನ ಅರಿತುಕೊಳ್ಳಬೇಕಿದೆ ಎಂದರು.
ಮಾಜಿ ಸಂಸದ ಐ.ಜಿ. ಸನದಿ, ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ, ವಾಯವ್ಯ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಸೇರಿದಂತೆ ಅನೇಕರಿದ್ದರು.