ಹುಬ್ಬಳ್ಳಿ:
ಸಖಿ ಮತಗಟ್ಟೆಗಳೆಲ್ಲ ನೇರಳೆ(ಪರ್ಪಲ್), ಗುಲಾಬಿ ಬಣ್ಣದಲ್ಲಿ ಹೊಳೆಯುತ್ತಿದ್ದರೆ, ಇನ್ನು ಕೆಲವು ಮತಗಟ್ಟೆಗಳು ಜಿಲ್ಲೆಯ ಐತಿಹಾಸಕ ಹಿನ್ನೆಲೆ ಸಾರುವ, ಸಂಸ್ಕೃತಿ ಬಿಂಬಿಸುವ ಮತಗಟ್ಟೆಗಳಾಗಿ ಮತದಾರರನ್ನು ಆಕರ್ಷಿಸಿದವು. ಮತದಾರರೂ ಸಹ ಅಷ್ಟೇ ಉತ್ಸಾಹದಿಂದ ಪಾಲ್ಗೊಂಡು ಮತದಾನ ಮಾಡಿದರು.
ಪ್ರತಿ ಮತಗಟ್ಟೆಗಳಲ್ಲೂ ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸುವ ಬರವಣಿಗೆಗಳು ಮತದಾರರ ಗಮನ ಸೆಳೆದವು. ಹುಬ್ಬಳ್ಳಿಯ ಗಂಗಿವಾಳದ ಮತಗಟ್ಟೆ 6ರಲ್ಲಿ ಸ್ಥಾಪಿಸಲಾಗಿದ್ದ ಸಖಿ ಮತಗಟ್ಟೆ ಹೆಚ್ಚು ಆಕರ್ಷಣಿಯವಾಗಿತ್ತು. ಮತದಾನ ಮಾಡಿ ಬರುವ ಯುವತಿಯರು ಮತದಾನದ ಗುರುತು ತೋರಿಸಿ ಸೆಲ್ಫಿ ತಗೆದುಕೊಂಡರು.ಇದರೊಂದಿಗೆ ಕುಂದಗೋಳ ಪಟ್ಟಣದ ತಾಪಂ ಕಾರ್ಯಾಲಯದಲ್ಲಿ ಮತಗಟ್ಟೆ ಸಂಖ್ಯೆ 39ರಲ್ಲಿ ಸ್ಥಾಪಿಸಲಾಗಿದ್ದ ಸಖಿ ಮತಗಟ್ಟೆ ಹೆಚ್ಚು ಆಕರ್ಷಣೀಯಲಾಗಿತ್ತು. ಮತಗಟ್ಟೆ ಹೊರಗಡೆ ಗುಲಾಬಿಬಣ್ಣದ ಪೆಂಡಾಲ್ ಹಾಕಲಾಗಿತ್ತು. ಅಲ್ಲದೇ ಮತಗಟ್ಟೆ ಕೇಂದ್ರ ಕೊಠಡಿಯನ್ನು ಗುಲಾಬಿ ಬಣ್ಣದಿಂದ ಅಲಂಕರಿಸಲಾಗಿತ್ತು. ಇದರೊಂದಿಗೆ ಈ ಮತಗಟ್ಟೆಯಲ್ಲಿ ಮಹಿಳಾ ಸಿಬ್ಬಂದಿಗಳೇ ಕಾರ್ಯನಿರ್ವಹಿಸಿದ್ದು ಪ್ರಮುಖ ಆಕರ್ಷಣೆಯಾಗಿತ್ತು.