ಕರಾವಳಿಯಲ್ಲಿ ಕಂಬಳಕ್ಕೆ ವಿಶೇಷ ಪ್ರಾಧಾನ್ಯತೆ: ಎಂ.ವೆಂಕಟೇಶ್‌

KannadaprabhaNewsNetwork |  
Published : Dec 29, 2024, 01:19 AM IST
ಮಂಗಳೂರು ಕಂಬಳದ ನೋಟ | Kannada Prabha

ಸಾರಾಂಶ

ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಮಾತನಾಡಿ, ಕಂಬಳ ತುಳುನಾಡಿನ ಆರಾಧನೆ ಮತ್ತು ಆಚರಣೆಯ ಜೊತೆಗೆ ಜನಾಕರ್ಷಣೆಯಾಗಿ ಬೆಳೆಯುತ್ತಿದೆ. ಎಲ್ಲ ಜಾತಿ, ಧರ್ಮದ ಜನರನ್ನು ಒಗ್ಗೂಡಿಸುತ್ತಿದೆ. ಯುವ ಜನತೆಗೆ ಹಿರಿಯರ ಕಾಲದ ಸಂಸ್ಕೃತಿಯನ್ನು ಪರಿಚಯಿಸಲು ಈ ಮೂಲಕ ಸಾಧ್ಯವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿಯ ಶ್ರೀಮಂತ ಸಂಸ್ಕೃತಿಯಲ್ಲಿ ಕಂಬಳಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ಮಕ್ಕಳು ತಮ್ಮ ನೆಲದ ಸಂಸ್ಕೃತಿಯನ್ನು ಅರಿತುಕೊಂಡಾಗ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಎಂಆರ್‌ಪಿಲ್‌ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್‌ ಹೇಳಿದರು.

ಸಂಸದ ಕ್ಯಾ.ಬ್ರಿಜೇಶ್‌ ಚೌಟ ಸಾರಥ್ಯದಲ್ಲಿ ಬಂಗ್ರಕೂಳೂರು ಗೋಲ್ಡ್‌ ಫಿಂಚ್‌ ಸಿಟಿಯ ರಾಮ-ಲಕ್ಷ್ಮಣ ಕರೆಯಲ್ಲಿ ಶನಿವಾರ ಆರಂಭಗೊಂಡ ‘ಮಂಗಳೂರು ಕಂಬಳ’ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿಕ ಮತ್ತು ಜಾನುವಾರುಗಳ ಬದುಕಿನ ನಂಟಿನೊಂದಿಗೆ ಆರಂಭವಾದ ಸಾಂಪ್ರದಾಯಿಕ ಕ್ರೀಡೆ ಕಂಬಳ ಕಾಲ ಕ್ರಮೇಣ ಆಧುನಿಕತೆಗೆ ತೆರೆದುಕೊಳ್ಳುವ ಮೂಲಕ ಇನ್ನಷ್ಟು ಜನಪ್ರಿಯವಾಗುತ್ತಿದೆ. ಈ ವಿಶಿಷ್ಟ ಕ್ರೀಡೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಎಂದರು.ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಅಧ್ಯಕ್ಷ ಕೆ.ಚಿತ್ತರಂಜನ್‌ ದೀಪ ಪ್ರಜ್ವಲನೆ ಮಾಡಿ, ಕ್ಯಾ.ಬ್ರಿಜೇಶ್‌ ಚೌಟ ಅವರ ನೇತೃತ್ವದಲ್ಲಿ ಕಳೆದ 8 ವರ್ಷಗಳಿಂದ ಆಯೋಜಿಸಲಾಗುತ್ತಿರುವ ಮಂಗಳೂರು ಕಂಬಳ ಇಲ್ಲಿನ ನಗರದ ಜನತೆಗೆ ಹಾಗೂ ಹೊರ ಊರುಗಳಿಂದ ಬಂದಿರುವವರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ ಎಂದರು.ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್‌.ಧರ್ಮ ಅಧ್ಯಕ್ಷತೆ ವಹಿಸಿ, ಕಂಬಳ ಆಯೋಜಿಸುವ ಮೂಲಕ ಪರಂಪರೆ ಉಳಿಸುವ ಪ್ರಯತ್ನದ ಮೂಲಕ ಭೂಮಿಯ ರಕ್ಷಣೆ ಮಾಡುತ್ತಿದ್ದಾರೆ. ಭೂಮಿ ಮತ್ತು ದೇಶ ರಕ್ಷಿಸುತ್ತಿರುವ ಸೈನಿಕರನ್ನು ಕಂಬಳದ ವೇದಿಕೆಯಲ್ಲಿ ಸ್ಮರಣೆ ಮಾಡಿರುವುದು ಅರ್ಥಪೂರ್ಣ ಎಂದರು.ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಮಾತನಾಡಿ, ಕಂಬಳ ತುಳುನಾಡಿನ ಆರಾಧನೆ ಮತ್ತು ಆಚರಣೆಯ ಜೊತೆಗೆ ಜನಾಕರ್ಷಣೆಯಾಗಿ ಬೆಳೆಯುತ್ತಿದೆ. ಎಲ್ಲ ಜಾತಿ, ಧರ್ಮದ ಜನರನ್ನು ಒಗ್ಗೂಡಿಸುತ್ತಿದೆ. ಯುವ ಜನತೆಗೆ ಹಿರಿಯರ ಕಾಲದ ಸಂಸ್ಕೃತಿಯನ್ನು ಪರಿಚಯಿಸಲು ಈ ಮೂಲಕ ಸಾಧ್ಯವಾಗಿದೆ ಎಂದರು.ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಮಂಗಳೂರು ರಾಮಕೃಷ್ಣ ಮಠದ ಚಿದಂಬರಾನಂದ ಮಹಾರಾಜ್‌, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಶುಭ ಹಾರೈಸಿದರು.ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಕರ್ನಲ್‌ ಶರತ್‌ ಭಂಡಾರಿ, ನಿವೃತ್ತ ಸೇನಾಧಿಕಾರಿ ಬ್ರಿಗೇಡಿಯರ್‌ ಐ.ಎನ್‌.ರೈ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್‌.ಪ್ರದೀಪ್‌ ಕುಮಾರ್‌ ಕಲ್ಕೂರ, ಪಾಲಿಕೆ ಪ್ರತಿಪಕ್ಷದ ನಾಯಕ ಅನಿಲ್‌ ಕುಮಾರ್‌, ಸದಸ್ಯ ಕಿರಣ್‌ ಕುಮಾರ್‌, ಮಾಜಿ ಮೇಯರ್‌ ಕವಿತಾ ಸನಿಲ್‌, ರಂಜನ್‌ ಬೆಳ್ಳರ್ಪಾಡಿ, ಸಂದೀಪ್‌ ಗರೋಡಿ, ಅರುಣ್‌ ಕುಮಾರ್‌ ಶೆಟ್ಟಿ, ಪಿ.ಆರ್‌.ಶೆಟ್ಟಿ ಮತ್ತಿತರರಿದ್ದರು. ಈ ಸಂದರ್ಭ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹಾಗೂ ಇತ್ತೀಚೆಗೆ ವೀರ ಮರಣ ಹೊಂದಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಂಬಳ ಸಮಿತಿ ಅಧ್ಯಕ್ಷ ಕ್ಯಾ.ಬ್ರಿಜೇಶ್‌ ಚೌಟ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಜಿತ್‌ ಪ್ರತಾಪ್‌ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ