ಅರಸೀಕೆರೆ: ತಾಲೂಕಿನ ಮಾಡಾಳು ಗ್ರಾಮದ ಆರಾಧ್ಯ ದೇವತೆ ಶ್ರೀ ಸ್ವರ್ಣಗೌರಿ ಅಮ್ಮನವರ ನೂತನ ದೇವಾಲಯದಲ್ಲಿ ಬೆನಕನ ಅಮಾವಾಸ್ಯೆ ಪ್ರಯುಕ್ತ ಶುಕ್ರವಾರ ಸಂಜೆ ವಿಶೇಷ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ನೂರಾರು ಭಕ್ತರು ದೇವಿಯ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಅಪ್ಪಣೆ ಹಾಗೂ ಸತ್ಸಂಕಲ್ಪದಂತೆ ಲೋಕಕಲ್ಯಾಣಾರ್ಥವಾಗಿ ಪ್ರತಿ ಅಮಾವಾಸ್ಯೆಯಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಶುಕ್ರವಾರ ಬೆಳಗ್ಗೆ ಕೋಡಿಮಠದ ಮಹಾತಪಸ್ವಿ ಶಿವಲಿಂಗಜ್ಜಯ್ಯ ಮೂರ್ತಿ ಹಾಗೂ ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಯ ಸಮ್ಮುಖದಲ್ಲಿ ರುದ್ರಾಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸಂಜೆ ಶ್ರೀ ಸ್ವರ್ಣಗೌರಿ ಅಮ್ಮನವರಿಗೆ ಅರ್ಚಕರಿಂದ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.ವಿದ್ಯುತ್ ದೀಪಗಳಿಂದ ಕಂಗೊಳಿಸಿದ ದೇವಾಲಯ:ಅಮಾವಾಸ್ಯೆ ಪ್ರಯುಕ್ತ ನೂತನ ದೇವಾಲಯವನ್ನು ಮಾವಿನ ತಳಿರು ತೋರಣ ಹಾಗೂ ಬಾಳೆಕಂದುಗಳಿಂದ ಸಾಂಪ್ರದಾಯಿಕವಾಗಿ ಅಲಂಕರಿಸಲಾಗಿತ್ತು. ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ದೇವಾಲಯವನ್ನು ಅಲಂಕರಿಸಲಾಗಿದ್ದು, ಸಂಜೆ ವೇಳೆಯಲ್ಲಿ ದೇವಾಲಯದ ಆವರಣ ಕಂಗೊಳಿಸಿ ಭಕ್ತರ ಗಮನ ಸೆಳೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ಮಾಡಾಳು ಶಿವಲಿಂಗಪ್ಪ ಹಾಗೂ ಮಕ್ಕಳು, ವೈ.ಸಿ. ಚಂದ್ರಶೇಖರಪ್ಪ ಹಾಗೂ ಮಕ್ಕಳು, ವೈಜಿಹಳ್ಳಿ ಅವರ ವತಿಯಿಂದ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು.ಮಾಡಾಳು ಗ್ರಾಮ ಸೇರಿದಂತೆ ಸೀತಾಪುರ, ಕೊಪ್ಪಲು, ಯರೇಹಳ್ಳಿ, ವೈಜಿಹಳ್ಳಿ, ದಿಬ್ಬೂರು, ಕಣಕಟ್ಟೆ, ಪಿ.ಹೊಸಳ್ಳಿ, ಕಿತ್ತನೆಕೆರೆ, ದೊಣನಕಟ್ಟೆ, ಬೊಮ್ಮಸಮುದ್ರ, ಕೆ.ಶಂಕರನಹಳ್ಳಿ, ಕಡಲಮಗೆ, ಡಿ.ಎಂ.ಕುರ್ಕೆ, ಶಶಿವಾಳ, ಚಿಕ್ಕಮೇಟಿ, ಕುರ್ಕಿ, ಹಾರನಹಳ್ಳಿ, ಅಣ್ಣಾಯಕನಹಳ್ಳಿ, ಯಳವಾರೆ, ಹಿರೀಸಾದರಹಳ್ಳಿ, ಸೊಪ್ಪಿನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಅಮ್ಮನವರ ದರ್ಶನ ಪಡೆದು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.