ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸಾಂಪ್ರದಾಯಿಕ ಸುಗ್ಗಿ ಆಚರಣೆಯ ವಿಧಿ ವಿಧಾನದಂತೆ ಸಬ್ಬಮ್ಮ ದೇವಿಯ ತವರೆಂದು ಕರೆಯಲ್ಪಡುವ ಕೂತಿ ಗ್ರಾಮದ ಚಾವಡಿ ಕಟ್ಟೆಯಲ್ಲಿ ಭಾನುವಾರ ವಿಶೇಷ ಪೂಜೆ ನಡೆಯಿತು.
ಅನಾದಿಕಾಲದಿಂದಲೂ ನಡೆದುಕೊಂಡು ಬಂದಂತೆ ಕೂತಿ ಗ್ರಾಮದ ಚಾವಡಿ ಕಟ್ಟೆಯಲ್ಲಿ ಗ್ರಾಮದ ಮನೆಗಳಲ್ಲಿರುವ ಬಂದೂಕುಗಳನ್ನು ತಂದಿಟ್ಟು ನಂತರ ಸಾಮೂಹಿಕವಾಗಿ ಪೂಜೆ ಸಲ್ಲಿಸಲಾಯಿತು. ನಂತರ ದೇವರ ಕಟ್ಟೆಗೆ ಗ್ರಾಮಸ್ಥರು ಬಂದೂಕು ಹಿಡಿದು ಪ್ರದಕ್ಷಿಣೆ ಬಂದು ಬಂದೂಕಿನಿಂದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಸುಗ್ಗಿ ಪದ್ಧತಿಯನ್ನು ಆಚರಿಸುವ ಮೂಲಕ ಸುಗ್ಗಿ ಉತ್ಸವಕ್ಕೆ ಚಾಲನೆ ನೀಡಲಾಯಿತು.ಪ್ರಮುಖ ಸುಗ್ಗಿ ಆಚರಣೆಯು ಏಪ್ರಿಲ್ - ಮೇನಲ್ಲಿ ನಗರಳ್ಳಿ ಗ್ರಾಮದ ಸುಗ್ಗಿ ಕಟ್ಟೆ ಹಾಗೂ ೧೨ ದೇವರ ಬನದಲ್ಲಿ ವಿವಿಧ ಆಚರಣೆಗಳೊಂದಿಗೆ ನಡೆಯುತ್ತದೆ.
ಸುಗ್ಗಿ ಆಚರಣೆಯಲ್ಲಿ ೧೨ ಬನ-ರಂಗಗಳಿದ್ದು ಕೊನೆಯ ದಿನ ಕಂಬತಳೆ ರಂಗ, ಸುಗ್ಗಿ ರಂಗ ಎಂಬಲ್ಲಿ ಸುಗ್ಗಿಯ ವಿಶೇಷತೆಗಳನ್ನು ಸಾರುವ ಆಚರಣೆಗಳು ನಡೆಯುತ್ತದೆ.
ಕಾರ್ಯಕ್ರಮದಲ್ಲಿ ಕೂತಿ ಗ್ರಾಮಾಧ್ಯಕ್ಷ ಎಚ್.ಎಂ. ಜಯರಾಮ್, ಉಪಾಧ್ಯಕ್ಷ ಕೆ.ಡಿ. ಗಿರೀಶ್, ಕಾರ್ಯದರ್ಶಿ ಯಾದವ್ ಕುಮಾರ್, ಖಜಾಂಚಿ ಲಕ್ಷ್ಮಯ್ಯ, ಅರ್ಚಕರಾದ ಅನಂತ್ ರಾಮ್, ಪ್ರಮುಖರಾದ ಜಿತೇಂದ್ರ, ರಾಜೇಶ್, ಕೆ.ಟಿ. ಪರಮೇಶ್, ಭರತ್, ಕೆ.ಸಿ. ಉದಯ್ ಕುಮಾರ್, ಹೆಚ್. ಡಿ. ಮೋಹನ್ ಸೇರಿದಂತೆ ಗ್ರಾಮಸ್ಥರು ಇದ್ದರು.