ಹರಪನಹಳ್ಳಿ: ತಾಲೂಕಿನಲ್ಲಿ ಕಳೆದ ಎರಡು ದಿನಗಳಲ್ಲಿ ನಡೆದ ವಿಶೇಷ ತೆರಿಗೆ ವಸೂಲಾತಿ ಅಭಿಯಾನದಲ್ಲಿ ಜಿಪಂ ಸಿಇಒ ಸೂಚನೆ, ಉಪ ಕಾರ್ಯದರ್ಶಿ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಪಡೆಯಂತೆ ತಾಲೂಕಿನ ಸಿಬ್ಬಂದಿ ಕೈಜೋಡಿಸುವ ಮೂಲಕ ಎರಡೇ ದಿನದಲ್ಲಿ ₹40 ಲಕ್ಷ ತೆರಿಗೆ ಸಂಗ್ರಹ ಮಾಡಿ ಜಿಲ್ಲೆಯಲ್ಲೇ ಹರಪನಹಳ್ಳಿ ತಾಲೂಕು ಪ್ರಥಮ ಸ್ಥಾನ ಪಡೆದಿದೆ.
ಹಲುವಾಗಲು ಗ್ರಾಪಂ ಪ್ರಥಮ: ವಿಶೇಷ ತೆರಿಗೆ ವಸೂಲಾತಿ ಅಭಿಯಾನದಲ್ಲಿ ಎಲ್ಲ 37 ಗ್ರಾಪಂಗಳ ಪೈಕಿ ಹಲುವಾಗಲು ಗ್ರಾಪಂ ₹3 ಲಕ್ಷ ಸಂಗ್ರಹಿಸಿ ಮೊದಲ ಸ್ಥಾನ ಪಡೆದರೆ, ಕಂಚಿಕೆರೆ ₹2.53 ಲಕ್ಷ ದ್ವಿತೀಯ ಸ್ಥಾನ, ನಿಚ್ಚವ್ವನಹಳ್ಳಿ ₹1.93 ಲಕ್ಷ ತೆರಿಗೆ ಸಂಗ್ರಹಿಸಿ ತೃತೀಯ ಸ್ಥಾನ ಪಡೆದಿದೆ. ಇನ್ನು 13 ಗ್ರಾಪಂಗಳಲ್ಲಿ ₹1 ಲಕ್ಷಕ್ಕೂ ಅಧಿಕ ತೆರಿಗೆ ಸಂಗ್ರಹಿಸಿ ಸಾಧನೆ ಮಾಡಲಾಗಿದೆ.ತಾಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಜಿಪಂ ಸಿಇಒ ಆದೇಶ ಮಾಡಿದ್ದರು. ಅದರಲ್ಲಿ ಜಿಪಂ ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ ಅವರನ್ನು ಹರಪನಹಳ್ಳಿಗೆ ನೇಮಕ ಮಾಡಲಾಗಿತ್ತು. ಇನ್ನು ಹೋಬಳಿಗೆ ಒಬ್ಬರಂತೆ ಕಸಬಾ ಹೋಬಳಿಗೆ ನರೇಗಾ ಸಹಾಯಕ ನಿರ್ದೇಶಕ ಯು.ಎಚ್. ಸೋಮಶೇಖರ್, ತೆಲಿಗಿ ಹೋಬಳಿಗೆ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ಚಿಗಟೇರಿ ಹೋಬಳಿಗೆ ತಾಲೂಕು ಯೋಜನಾಧಿಕಾರಿ ಎನ್.ವಿ.ನವೀನ್ ಕುಮಾರ್, ಅರಸೀಕೆರೆ ಹೋಬಳಿಗೆ ಸಹಾಯಕ ಲೆಕ್ಕಾಧಿಕಾರಿ ವಿಜಯಕುಮಾರ್ ಅವರನ್ನು ಇಲ್ಲಿಯ ತಾಪಂ ಇಒ ಚಂದ್ರಶೇಖರ ನೇಮಕ ಮಾಡಿದ್ದರು.
ಪ್ರತೀ ಗ್ರಾಪಂಗೂ ತಾಲೂಕು ಮಟ್ಟದ ಬಿ-ಗ್ರೂಪ್ ಹುದ್ದೆಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಲಾಗಿತ್ತು. ಇದರಿಂದ ಹೆಚ್ಚಿನ ತೆರಿಗೆ ಸಂಗ್ರಹಕ್ಕೆ ಕಾರಣವಾಗಿದೆ.ಪಿಡಿಒ, ಕಾರ್ಯದರ್ಶಿ, ಎಸ್‌ಡಿಎಎ, ಬಿಲ್ ಕಲೆಕ್ಟರ್, ಡಿಇಒ, ನೀರಗಂಟಿಗಳು, ಗ್ರಾಪಂ ವ್ಯಾಪ್ತಿಯ ಜನಪ್ರತಿನಿಧಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಎನ್‌ಆರ್‌ಎಲ್‌ಎಂ ಯೋಜನೆಯ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ನರೇಗಾ ಕೂಲಿಕಾರರಿಂದ ತೆರಿಗೆ ಸಂಗ್ರಹ ಮಾಡಲು ಸಂಬಂಧಿಸಿದ ಸಿಬ್ಬಂದಿ ಸಹ ಈ ಅಭಿಯಾನದಲ್ಲಿ ಪಾಲ್ಗೊಂಡು ತೆರಿಗೆ ಪಾವತಿಸಲು ಜಾಗೃತಿ ಮೂಡಿಸಿ ಕಂದಾಯ ಸಂಗ್ರಹಿಸಿದ್ದರು.
ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿ:ಗ್ರಾಪಂ ವ್ಯಾಪ್ತಿಯ ಎಲ್ಲ ಕರ ವಸೂಲಿಗಾರರು ಮನೆಮನೆಗೆ ಬಂದಾಗ ಅಥವಾ ಆಯಾ ಗ್ರಾಪಂಗಳ ಕಚೇರಿಗೆ ಭೇಟಿ ನೀಡಿದರೂ ತೆರಿಗೆ ಕಟ್ಟಿಸಿಕೊಳ್ಳಲಾಗುತ್ತಿದೆ. ಇನ್ನು ಜನರ ಅನುಕೂಲಕ್ಕೆ ಮೊಬೈಲ್ ನಲ್ಲೇ ತೆರಿಗೆ ಪಾವತಿಸಲು ಅವಕಾಶ ಮಾಡಿಕೊಟ್ಟಿದೆ. ಬಾಪೂಜಿ ಸೇವಾ ಕೇಂದ್ರ ಮೊಬೈಲ್ ಅಪ್ಲಿಕೇಶನ್‌ನಲ್ಲೇ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು ಅಥವಾ ಇದೇ ಅಪ್ಲಿಕೇಶನ್ ಮೂಲಕ ಪ್ರಾಪರ್ಟಿ ಐಡಿ ಪಡೆದು ಯುಪಿಐನಲ್ಲಿಯೂ ಪಾವತಿಸಬಹುದು ಎಂದು ತಿಳಿಸಲಾಗಿದೆ.
ತೆರಿಗೆ ಸಂಗ್ರಹ ಅಭಿಯಾನದಲ್ಲಿ ಸಾಕಷ್ಟು ಜನ ತೆರಿಗೆ ಕಟ್ಟುತ್ತಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಕಂದಾಯ ವಸೂಲಾತಿ ಮಾಸಾಚರಣೆ ಮಾಡಲಾಗುತ್ತಿದೆ. ಪ್ರತಿ ಸೋಮವಾರ ವಿಶೇಷ ಕರ ವಸೂಲಾತಿ ಅಭಿಯಾನ ಮಾಡಲಾಗುತ್ತಿದೆ. ಸ್ವತ್ತುಗಳಿಗೆ ತೆರಿಗೆ ನೀಡಿದರೆ ಮಾತ್ರ ಸರ್ಕಾರದ ವಿವಿಧ ಕೆಲಸಗಳು ನಡೆಯಲು ಸಾಧ್ಯ. ಗ್ರಾಪಂ ವ್ಯಾಪ್ತಿಯಲ್ಲಿ ಮೂಲಸೌಲಭ್ಯ ಕಲ್ಪಿಸಲು ಅನುಕೂಲ ಆಗುತ್ತಿದೆ. ಎಲ್ಲರೂ ತೆರಿಗೆ ನೀಡಿ, ಗ್ರಾಪಂಗಳ ಸಬಲೀಕರಣಕ್ಕೆ ಸಹಕರಿಸಬೇಕು ಎನ್ನುತ್ತಾರೆ ತಾಪಂ ಇಒ ಚಂದ್ರಶೇಖರ್ ವೈ.ಎಚ್.ಹರಪನಹಳ್ಳಿ ತಾಲೂಕಿನ ಕಂಚಿಕೆರೆ ಗ್ರಾಮದಲ್ಲಿ ತೆರಿಗೆ ವಸೂಲಾತಿ ವಿಶೇಷ ಅಭಿಯಾನದಲ್ಲಿ ಇ.ಒ ಚಂದ್ರಶೇಖರ್ ವೈ.ಎಚ್., ನರೇಗಾ ಸಹಾಯಕ ನಿರ್ದೇಶಕಯು.ಎಚ್.ಸೋಮಶೇಖರ್, ಪಿಡಿಒ ದುರುಗಪ್ಪ, ಕಾರ್ಯದರ್ಶಿ ಶ್ರೀನಿವಾಸ ಸೇರಿದಂತೆ ಇತರರು.