ಹುಬ್ಬಳ್ಳಿ:ದೀಪಾವಳಿ ಹಾಗೂ ಚತ್ತ ಹಬ್ಬದ ಪ್ರಯಾಣದ ಸೇವೆಯಲ್ಲಿ ಹುಬ್ಬಳ್ಳಿ ರೈಲ್ವೆ ವಿಭಾಗವು ಅತ್ಯುತ್ತಮ ಸಾಧನೆ ಮಾಡಿದ್ದು, ಈ ಬಾರಿಯ ದೀಪಾವಳಿ ಹಬ್ಬದ ಅವಧಿಯಲ್ಲಿ ಶೇ. 58ರಷ್ಟು ಆದಾಯ ಏರಿಕೆಯಾಗಿದೆ ಎಂದು (ಎಡಿಆರ್‌ಎಂ) ರೈಲ್ವೆ ವಿಭಾಗೀಯ ಹೆಚ್ಚುವರಿ ವ್ಯವಸ್ಥಾಪಕ ಪ್ರೇಮಚಂದ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ದೀಪಾವಳಿ ಸಂದರ್ಭದಲ್ಲಿ ಕೇವಲ 13 ವಿಶೇಷ ರೈಲು ಓಡಿಸಲಾಗಿತ್ತು. ಆದರೆ ಈ ವರ್ಷ ಒಟ್ಟು 19 ವಿಶೇಷ ರೈಲುಗಳು ಹುಬ್ಬಳ್ಳಿ ವಿಭಾಗದಿಂದ ಸಂಚರಿಸಿವೆ. ಇದರಲ್ಲಿ 8 ರೈಲುಗಳು ಹುಬ್ಬಳ್ಳಿ ವಲಯದಿಂದಲೇ ಪ್ರಾರಂಭಗೊಂಡಿದ್ದು, ಶೇ.46ರಷ್ಟು ಸಂಚಾರ ಹೆಚ್ಚಳವಾಗಿದೆ. ಅದರಂತೆ ಪ್ರಯಾಣಿಕರ ಸಂಖ್ಯೆಯೂ ಏರಿಕೆಯಾಗಿದ್ದು, ಈ ವರ್ಷ 2.95 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದರು.ಇದರಿಂದ ಒಟ್ಟು ₹ 26.7 ಕೋಟಿ ಆದಾಯ ಗಳಿಸಿದ್ದು, ಕಳೆದ ವರ್ಷಕ್ಕಿಂತ ಶೇ. 58ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ, ಪ್ರತಿ ರೈಲಿನ ಸರಾಸರಿ ಪ್ರಯಾಣಿಕರ ಸಂಖ್ಯೆ 958ರಿಂದ 1,028ಕ್ಕೆ ಏರಿಕೆಯಾಗಿದೆ. ಅಲ್ಲದೇ, ಪ್ರತಿ ಪ್ರಯಾಣದಿಂದ ಸರಾಸರಿ ಆದಾಯ ₹ 7.66 ಲಕ್ಷದಿಂದ ₹ 9.3 ಲಕ್ಷಕ್ಕೆ ಹೆಚ್ಚಳವಾಗಿದೆ ಎಂದರು.ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸುವ ಉದ್ದೇಶದಿಂದ ಅವರ ಸೇವೆಗೆ ಹುಬ್ಬಳ್ಳಿ ರೈಲ್ವೆ ವಿಭಾಗವು ಅಗತ್ಯ ಕ್ರಮಕೈಗೊಂಡಿತ್ತು. ಸಹಾಯ ಕೌಂಟರ್, ವೇಗದ ಟಿಕೆಟ್ ವಿತರಣೆ, ರೈಲು ಮಾರ್ಗ ಮತ್ತು ಸಮಯ ಮಾಹಿತಿ ಫಲಕಗಳ ಪ್ರದರ್ಶನ, ನಿರಂತರ ಘೋಷಣೆ, ಹಿರಿಯರು-ವಿಶೇಷಚೇತನರಿಗಾಗಿ ಬ್ಯಾಟರಿ ಚಾಲಿತ ವಾಹನಗಳು ಸೇರಿದಂತೆ ಹತ್ತಾರು ಕ್ರಮವಹಿಸಲಾಗಿತ್ತು. ರೈಲ್ವೆ ಕೈಗೊಂಡು ಇಂತಹ ಹಲವು ಕ್ರಮಗಳಿಂದ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುವ ಜತೆಗೆ ಆದಾಯ ಗಳಿಕೆ ಹೆಚ್ಚಳವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಭಾಗೀಯ ವಾಣಿಜ್ಯ ಹಿರಿಯ ವ್ಯವಸ್ಥಾಪಕ ಕಾರ್ತಿಕ ಹೆಗಡೆಕಟ್ಟಿ, ವಿಭಾಗೀಯ ಭದ್ರತಾ ಆಯುಕ್ತ ಅಲೋಕಕುಮಾರ, ವಾಣಿಜ್ಯ ಸಹಾಯಕ ವ್ಯವಸ್ಥಾಪಕ ರಾಜಕುಮಾರ ಡಿ. ನೈಋತ್ಯ ರೈಲ್ವೆ ಮುಖ್ಯ ಪಿಆರ್‌ಒ ಮಂಜುನಾಥ ಕನಮಡಿ ಸೇರಿದಂತೆ ಇತರರು ಇದ್ದರು.