ಗುರು ಪೂರ್ಣಿಮೆ ಅಂಗವಾಗಿ ಸಾಯಿಬಾಬಾಗೆ ವಿಶೇಷ ಪೂಜೆ

KannadaprabhaNewsNetwork |  
Published : Jul 11, 2025, 12:32 AM IST
ಕಂಪ್ಲಿಯ ಎಸ್ ಎನ್ ಪೇಟೆಯ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಗುರು ಪೂರ್ಣಿಮೆ ಅಂಗವಾಗಿ ವಿಶೇಷ ಅಲಂಕಾರ ನೆರವೇರಿಸಲಾಗಿತ್ತು.  | Kannada Prabha

ಸಾರಾಂಶ

ಕಂಪ್ಲಿ ಪಟ್ಟಣದ ಎಸ್‌.ಎನ್‌. ಪೇಟೆಯ ಶ್ರೀ ಶಿರಿಡಿ ಸಾಯಿಬಾಬಾ ದೇವಸ್ಥಾನದಲ್ಲಿ ಗುರು ಪೂರ್ಣಿಮೆ ನಿಮಿತ್ತ ಗುರುವಾರ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ಜರುಗಿದವು.

ಕಂಪ್ಲಿ: ಪಟ್ಟಣದ ಎಸ್‌.ಎನ್‌. ಪೇಟೆಯ ಶ್ರೀ ಶಿರಿಡಿ ಸಾಯಿಬಾಬಾ ದೇವಸ್ಥಾನದಲ್ಲಿ ಗುರು ಪೂರ್ಣಿಮೆ ನಿಮಿತ್ತ ಗುರುವಾರ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ಜರುಗಿದವು. ಶ್ರೀ ಶಿರಡಿ ಸಾಯಿಬಾಬಾ ಅವರ ಅಮೃತಶಿಲೆಗೆ ಸದ್ಭಕ್ತರಿಂದ 108 ಲೀ. ಹಾಲಿನ ಅಭಿಷೇಕ ಮಾಡಲಾಯಿತು. ಬಳಿಕ ವಿವಿಧ ರೀತಿಯ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿ ಸಾಯಿಬಾಬಾ ಅವರ ಪ್ರತಿಮೆಯನ್ನು ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಇನ್ನು ದೇವಸ್ಥಾನಕ್ಕೆ ಆಗಮಿಸಿದ್ದ ಸದ್ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಸಂಜೆ ಕಂಪ್ಲಿಯ ನಾಟ್ಯ ಲಕ್ಷ್ಮಿ ಕಲಾ ಟ್ರಸ್ಟ್ ಜಿಲಾನಿ ಬಾಷಾ ತಂಡದಿಂದ ಸಾಯಿಬಾಬಾ ಚರಿತ್ರೆ ನೃತ್ಯ ಸಂಯೋಜನೆ, ಕೆ.ಇ. ವಾಣಿಶ್ರೀ, ಡಿ. ಶಿಲ್ಪಾ ತಂಡದವರಿಂದ ಕೋಲಾಟ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಪಲ್ಲಕ್ಕಿ ಸೇವೆ ನಡೆಯಿತು.

ಅರ್ಚಕ ಪೂರ್ಣಿಮ ರಾಜೇಂದ್ರಚಾರ್‌ ಜೋಷಿ, ಸಾಯಿಬಾಬಾ ದೇವಸ್ಥಾನದ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀರಾಮಗೋಪಾಲರೆಡ್ಡಿ, ಪದಾಧಿಕಾರಿಗಳಾದ ಬಟಾರಿ ದೇವೇಂದ್ರಪ್ಪ, ಪಿ. ಶ್ರೀನಿವಾಸುಲು, ಗಿರಿನಾಥ ಶೆಟ್ಟಿ, ಜಿ. ವೆಂಕಟೇಶ್ವರರಾವು, ಕೊಡಿದಲ ವೆಂಕಟೇಶ, ಬಟ್ಟಾ ಪ್ರಸಾದ, ಸಿ.ಎಚ್. ವೆಂಕಟೇಶ್ವರರಾವ್ ಸೇರಿ ಸದ್ಭಕ್ತರು ಪಾಲ್ಗೊಂಡಿದ್ದರು.

ಪಟ್ಟಣದ ಮಾರುತಿನಗರದ ಬಲಿಜ ಭವನದಲ್ಲಿ ಯೋಗಿ ನಾರೇಯಣ ಯತೀಂದ್ರರ ಪ್ರತಿಮೆಗೆ ವಿಶೇಷ ಅಲಂಕಾರ, ಪೂಜೆ ನಡೆಯಿತು. ಬಲಿಜ ಸಮಾಜದ ಮಹಿಳಾ ಅಧ್ಯಕ್ಷೆ ಶಾರದಾ ಲೋಕೇಶ್, ಪದಾಧಿಕಾರಿಗಳಾದ ನಾರಾಯಣಪ್ಪ ಇಂಗಳಗಿ, ಆರ್. ತಿರುಮಲದೇವರಾಯ, ಅನಿಲ್‌ಕುಮಾರ್, ಕೆ. ರಾಘವೇಂದ್ರ, ಶ್ರೀಧರ, ಡಿ. ಸತೀಶ್, ಡಿ. ಶ್ರೀನಿವಾಸಪ್ಪ, ಪಿ. ವೆಂಕೋಬಣ್ಣ, ಕವಿತಾಳ್ ವಿದ್ಯಾ, ಸುನಂದಮ್ಮ, ಶೋಭಾ, ಪದ್ಮಾ ಸೇರಿ ಇತರರಿದ್ದರು.

ಸತ್ಯನಾರಾಯಣಪೇಟೆಯಲ್ಲಿನ ಶ್ರೀ ರಾಘವೇಂದ್ರಸ್ವಾಮಿಗಳ ಶಾಖಾಮಠದಲ್ಲಿನ ರಾಯನ ಬೃಂದಾವನವನ್ನು ತುಳಸಿಮಾಲೆ, ಪುಷ್ಪಮಾಲೆಗಳಿಂದ ಅಲಂಕರಿಸಲಾಗಿತ್ತು.

ಗುರುಪೂರ್ಣಿಮೆ-ಕದಳೀವನ ಸಿದ್ಧೇಶ್ವರ ಮಠದ ಶ್ರೀಗಳಿಗೆ ಗುರುವಂದನೆಜನ್ಮಭಿಕ್ಷೆ ನೀಡಿದ ತಾಯಿ, ಜೀವನ ಭಿಕ್ಷೆ ನೀಡಿದ ತಂದೆ ಮತ್ತು ಮೋಕ್ಷ ಭಿಕ್ಷೆ ನೀಡಿದ ಗುರುವನ್ನು ಎಂದಿಗೂ ಮರೆಯಬಾರದು ಎಂದು ಕದಳೀವನ ಸಿದ್ದೇಶ್ವರ ಮಠದ ಚಿದಾನಂದ ತಾತನವರು ಹೇಳಿದರು.ಕುರುಗೋಡು ಸಮೀಪದ ಸಿದ್ದರಾಂಪುರ ಗ್ರಾಮದ ಕದಳೀವನ ಸಿದ್ದೇಶ್ವರ ತಾತನವರ ಮಠದ ಶಿಷ್ಯಬಳಗ ಗುರುವಾರ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು. ಸಂಕಷ್ಟದಿಂದ ಪಾರುಮಾಡಿ ಸನ್ಮಾರ್ಗದಲ್ಲಿ ನಡೆಯಲು ಪ್ರತಿಯೊಬ್ಬರಿಗೂ ಗುರುವಿನ ಮಾರ್ಗದರ್ಶನ ಅಗತ್ಯವಿದೆ. ಗುರುವೆಂದು ನಂಬಿದ್ದ ದ್ರೋಣಾಚಾರ್ಯರ ಮೂರ್ತಿ ಪ್ರತಿಷ್ಠಾಪಿಸಿ ಶ್ರದ್ಧೆಯಿಂದ ಅಭ್ಯಾಸ ಮಾಡಿ ಧನುರ್ವಿದ್ಯೆಯಲ್ಲಿ ಪಾರಂಗತನಾದ ಏಕಲವ್ಯ ಗುರು-ಶಿಷ್ಯ ಪರಂಪರೆಗೆ ಉತ್ತಮ ನಿದರ್ಶನ ಎಂದರು.

ವೀರಭದ್ರ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿದರು. ಕಾರ್ಯಕ್ರಮದ ಪೂರ್ವದಲ್ಲಿ ಶ್ರೀಮಠದ ಲಿಂಗೈಕ್ಯ ಹಿರಿಯ ಶ್ರೀಗಳ ಕರ್ತೃಗದ್ದುಗೆಗೆ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಜರುಗಿದವು.ಭಕ್ತರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆ ದರ್ಶನ ಪಡೆದು ಹೂ, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿ ಮೆರೆದರು.

ಬಿ. ತೇಜಮೂರ್ತಿ, ನಾಗರುದ್ರ ಗೌಡ, ಬಸವನ ಗೌಡ, ಚನ್ನಬಸವನ ಗೌಡ, ಬಿ.ಎಂ. ಎರ್ರಿಸ್ವಾಮಿ, ಟಿ.ಎಂ. ಮೃತ್ಯುಂಜಯ, ಅಮರೇಶ್, ಕುಮಾರಸ್ವಾಮಿ, ಸಂಗಮೇಶ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಗೌಡ, ಗುಂಡಿಗನೂರು ಪಂಪನ ಗೌಡ, ಸಿ.ಎಂ. ನಾಗರಾಜ ಸ್ವಾಮಿ, ಭೀಮನ ಗೌಡ, ಸಿ.ಎಂ. ನಟರಾಜ ಸ್ವಾಮಿ, ಮಹಮ್ಮದ್ ಖಾಸೀಂ, ಶಾಮಿಯಾನ ಮೌಲಾಲಿ, ಸೋಮಶೇಖರಪ್ಪ ಇದ್ದರು.

PREV