ಪೋಡಿಮುಕ್ತ ಗ್ರಾಮ ಯೋಜನೆಗೆ ವೇಗ

KannadaprabhaNewsNetwork |  
Published : Jul 12, 2025, 12:32 AM IST
ಭದ್ರಾವತಿ ತಹಸೀಲ್ದಾರ್ ಪರುಸಪ್ಪ ಕುರುಬರ | Kannada Prabha

ಸಾರಾಂಶ

ತಾಲೂಕಿನಾದ್ಯಂತ ಸುಮಾರು ೮೦೦ ಪೋಡಿ ಖಾತೆ ಪ್ರಕರಣಗಳನ್ನು ಗುರುತಿಸಲಾಗಿದ್ದು, ಕೇವಲ ೬ ತಿಂಗಳಲ್ಲಿ ಈ ಪೈಕಿ ಸುಮಾರು ೩೦೦ಕ್ಕೂ ಹೆಚ್ಚು ಪ್ರಕರಣಗಳನ್ನು ಬಗೆಹರಿಸಿ ಪೋಡಿಮುಕ್ತ ಗ್ರಾಮಗಳಾಗಿ ಘೋಷಿಸಲಾಗಿದೆ. ಈ ಮೂಲಕ ಕಂದಾಯ ಸಚಿವರಾದ ಕೃಷ್ಣಭೈರೇಗೌಡರವರ ಮಹತ್ವಾಕಾಂಕ್ಷೆ ಯೋಜನೆಗಳಿಗೆ ತಾಲೂಕಿನಲ್ಲಿ ವೇಗ ನೀಡಲಾಗಿದೆ ಎಂದು ತಹಸೀಲ್ದಾರ್ ಪರುಸಪ್ಪ ಕುರುಬರ ತಿಳಿಸಿದರು.

ಭದ್ರಾವತಿ: ತಾಲೂಕಿನಾದ್ಯಂತ ಸುಮಾರು ೮೦೦ ಪೋಡಿ ಖಾತೆ ಪ್ರಕರಣಗಳನ್ನು ಗುರುತಿಸಲಾಗಿದ್ದು, ಕೇವಲ ೬ ತಿಂಗಳಲ್ಲಿ ಈ ಪೈಕಿ ಸುಮಾರು ೩೦೦ಕ್ಕೂ ಹೆಚ್ಚು ಪ್ರಕರಣಗಳನ್ನು ಬಗೆಹರಿಸಿ ಪೋಡಿಮುಕ್ತ ಗ್ರಾಮಗಳಾಗಿ ಘೋಷಿಸಲಾಗಿದೆ. ಈ ಮೂಲಕ ಕಂದಾಯ ಸಚಿವರಾದ ಕೃಷ್ಣಭೈರೇಗೌಡರವರ ಮಹತ್ವಾಕಾಂಕ್ಷೆ ಯೋಜನೆಗಳಿಗೆ ತಾಲೂಕಿನಲ್ಲಿ ವೇಗ ನೀಡಲಾಗಿದೆ ಎಂದು ತಹಸೀಲ್ದಾರ್ ಪರುಸಪ್ಪ ಕುರುಬರ ತಿಳಿಸಿದರು.

ಶುಕ್ರವಾರ ಈ ಕುರಿತು ತಮ್ಮ ಕಚೇರಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿ, ಉಳಿದ ಪ್ರಕರಣಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ತಾಲೂಕಿನಲ್ಲಿ ಯೋಜನೆ ಯಶಸ್ವಿಗೊಳಿಸಲಾಗುವುದು ಎಂದರು. ಕಂದಾಯ ಇಲಾಖೆ ಅಗತ್ಯ ಇರುವ ಕಡೆಗಳಲ್ಲಿ ಅರಣ್ಯ ಇಲಾಖೆ ನೆರವು ಪಡೆಯಲಿದ್ದು, ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಈ ಯೋಜನೆ ಅನುಷ್ಠಾನದಿಂದಾಗಿ ಕಚೇರಿಗಳಿಗೆ ವೃಥಾ ಅಲೆದಾಟ, ಮಧ್ಯವರ್ತಿಗಳ ಹಾವಳಿ ತಪ್ಪಲಿದ್ದು, ಬಹುವರ್ಷಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.

ಇ-ಪೌತಿ ಖಾತೆ ಆಂದೋಲನ:ರಾಜ್ಯ ಸರ್ಕಾರ ಇ-ಪೌತಿ ಆಂದೋಲನ ಜಾರಿಗೊಳಿಸಿದ್ದು, ಭದ್ರಾವತಿ ತಾಲೂಕಿನಲ್ಲಿ ಜಮೀನಿಗೆ ಸಂಬಂಧಪಟ್ಟಂತೆ ಸುಮಾರು ೭ ಸಾವಿರ ಪೌತಿ ಖಾತೆಗಳನ್ನು ಗುರುತಿಸಲಾಗಿದ್ದು, ಮನೆ-ಮನೆಗೆ ತೆರಳಿ ದಾಖಲೆ ಸಂಗ್ರಹಿಸಿ ವಾರಸುದಾರರಿಗೆ ಪೌತಿ ಖಾತೆಯನ್ನು ಮಾಡಿ ಕೊಡಲಾಗುವುದು, ರೈತ ಬಾಂಧವರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದರು.

ಭೂ ಸುರಕ್ಷಾ ಯೋಜನೆ:

ಸರ್ಕಾರಿ ಆಸ್ತಿಗಳನ್ನು ಗುರುತಿಸಿ ದಾಖಲಿಸುವ ಭೂ ಸುರಕ್ಷಾ ಯೋಜನೆ ಈಗಾಗಲೇ ಜಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಕೆರೆ ಸೇರಿದಂತೆ ಸರ್ಕಾರಿ ಆಸ್ತಿಗಳ ಒತ್ತುವರಿ ತೆರವು ಕಾರ್ಯ ನಡೆಯಲಿದೆ ಎಂದರು.ದಾಖಲೆ ಡಿಜಿಟಲೀಕರಣ : ತಾಲೂಕು ಕಚೇರಿಯ ಅಭಿಲೇಖಾಲಯದಲ್ಲಿರುವ ಎಲ್ಲಾ ರೀತಿಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಕಳೆದ ೬ ತಿಂಗಳ ಅವಧಿಯಲ್ಲಿ ೯ ಲಕ್ಷ ಪುಟಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಇನ್ನೂ ಸುಮಾರು ೮೦ ಲಕ್ಷ ಪುಟಗಳ ಡಿಜಿಟಲೀಕರಣ ಬಾಕಿ ಉಳಿದಿದೆ. ಮುಂದಿನ ೨ ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಚೇರಿ, ಲ್ಯಾಪ್‌ಟ್ಯಾಪ್ :

ತಾಲೂಕಿನಲ್ಲಿ ಒಟ್ಟು ೨೬ ಜನ ಗ್ರಾಮ ಲೆಕ್ಕಾಧಿಕಾರಿಗಳಿದ್ದು, ಈ ಪೈಕಿ ೨೧ ಜನರಿಗೆ ಈಗಾಗಲೇ ಲ್ಯಾಪ್‌ಟ್ಯಾಪ್ ವಿತರಿಸಲಾಗಿದೆ. ಸುಮಾರು ೧೫ ಜನರಿಗೆ ಆಯಾ ಭಾಗದ ಗ್ರಾಮ ಪಂಚಾಯಿತಿ ಹಾಗೂ ನಾಡಕಚೇರಿಗಳಲ್ಲಿ ಕಚೇರಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದಾಗಿ ಜನರು ನೇರವಾಗಿ ತಾಲೂಕು ಕಚೇರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಗ್ರೇಡ್-೨ ತಹಸೀಲ್ದಾರ್ ಮಂಜಾನಾಯ್ಕ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು