ಚಿಕ್ಕಂದಿನಿಂದಲೇ ಮಕ್ಕಳಿಗೆ ಅಧ್ಯಾತ್ಮಿಕ ಸಂಸ್ಕಾರ ಅಗತ್ಯ: ವಿಧುಶೇಖರ ಶ್ರೀ

KannadaprabhaNewsNetwork | Published : Mar 21, 2024 1:08 AM

ಸಾರಾಂಶ

ಮಕ್ಕಳಿಗೆ ಚಿಕ್ಕಂದಿನಿಂದಲೇ ಆಧ್ಯಾತ್ಮಿಕ ಸಂಸ್ಕಾರ ಅತ್ಯಂತ ಅವಶ್ಯಕ ಎಂದು ಶ್ರೀ ಶೃಂಗೇರಿ ಶಂಕರ ಮಠ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಹೇಳಿದ್ದಾರೆ.

- ತರೀಕೆರೆ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ನೂತನ ಮುಖಮಂಟಪ, ಪ್ರಾಕಾರ, ವಿಮಾನಗೋಪುರಗಳ ಮಹಾ ಕುಂಭಾಭಿಷೇಕ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಕ್ಕಳಿಗೆ ಚಿಕ್ಕಂದಿನಿಂದಲೇ ಆಧ್ಯಾತ್ಮಿಕ ಸಂಸ್ಕಾರ ಅತ್ಯಂತ ಅವಶ್ಯಕ ಎಂದು ಶ್ರೀ ಶೃಂಗೇರಿ ಶಂಕರ ಮಠ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಹೇಳಿದ್ದಾರೆ.

ಬುಧವಾರ ಪಟ್ಟಣದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಗಣೇಶ, ಶ್ರೀ ಶಾರದಾ ಪರಮೇಶ್ವರಿ ಹಾಗೂ ಶ್ರೀ ಆದಿಶಂಕರರ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಮುಖಮಂಟಪ, ವಿಶಾಲವಾದ ಪ್ರಾಕಾರ ಹಾಗೂ 3 ವಿಮಾನಗೋಪುರಗಳ ಮಹಾ ಕುಂಭಾಭಿಷೇಕ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳನ್ನು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುವುದು ಮತ್ತು ಅವರಿಗೆ ದೇಗುಲಗಳ ಬಗ್ಗೆ ತಿಳಿಸಿಕೊಡಬೇಕು. ನಮ್ಮ ಆತ್ಮೋದ್ದಾರಕ್ಕೆ ಭಗವಂತನ ಅನುಗ್ರಹ ಅಗತ್ಯ, ಭಗವಂತನ ಆರಾಧನೆಯಿಂದ ಪುಣ್ಯ ಪ್ರಾಪ್ತಿ ಎಂದು ಹೇಳಿದರು.

ಉಪಕಾರ ಮತ್ತು ಪರೋಪಕಾರ, ಭಗವಂತನ ಆರಾಧನೆಯಿಂದ ಪುಣ್ಯ ಸಂಪಾದನೆ ಸಾಧ್ಯ. ಈ ಪುಣ್ಯವೇ ಕಷ್ಟ ಸಂದರ್ಭದಲ್ಲಿ ನಮ್ಮನ್ನು ಕಾಪಾಡುತ್ತದೆ. ಪ್ರತಿಯೊಂದು ಕಡೆ ಪರಮಾತ್ಮ ಇದ್ದಾನೆ. ಎಲ್ಲ ಕಡೆಯೂ ಪರಮಾತ್ಮನನ್ನು ನೋಡಬೇಕು. ಬಂಗಾರ ಒಂದೇ, ಆಕಾರಗಳು ಬೇರೆ ಬೇರೆ ಇರುವಂತೆ ಪರಮಾತ್ಮ ಸೃಷ್ಟಿ ಮಾಡಿ, ತಾನೇ ಅದರೊಳಗೆ ಪ್ರವೇಶಿಸಿದ್ದಾನೆ ಎಂದರು.

ಐಕ್ಯತೆ ಧರ್ಮವನ್ನು ರಕ್ಷಿಸುತ್ತದೆ, ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಪ್ರತಿ ಮನೆಯಲ್ಲೂ ಆಚರಿಸಬೇಕು ಎಂದು ತಿಳಿಸಿದ ಅವರು ಶೃಂಗೇರಿಗೂ ತರೀಕೆರೆಗೂ ಗುರು ಶಿಷ್ಯರ ಸಂಬಧವಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಮಾತನಾಡಿ ಶ್ರೀ ಶೃಂಗೇರಿ ದಕ್ಷಿಣಾಮ್ನಾಯ ಪೀಠ ಇಂದು ದೇಶದಲ್ಲಿ ಅತ್ಯಂತ ಪ್ರಭಾವಿ ಶ್ರದ್ಧಾ ಕೇಂದ್ರವಾಗಿದ್ದು ಧಾರ್ಮಿಕ ಬೆಳಕಾಗಿದೆ. ಶ್ರೀ ಶಂಕರ ಭಗವತ್ಪಾದರ ತತ್ವಕ್ಕನುಗುಣವಾಗಿ ಬದುಕಿನ ಬೆಳಕಾಗಿದೆ ಎಂದು ಹೇಳಿದರು.

ಶಾರದ ಮಂಜುನಾಥ್, ಸುನಿತಾ ಕಿರಣ್ ಪ್ರಾರ್ಥಿಸಿದರು. ಶ್ರೀ ಶೃಂಗೇರಿ ಶಂಕರ ಮಠ ತರೀಕೆರೆ ಶಾಖೆ ಗೌ. ವ್ಯವಸ್ಥಾಪಕ ಆರ್.ಕೃಷ್ಣಮೂರ್ತಿ ಜಗದ್ದುರು ಶ್ರೀ ವಿಧುಶೇಖರ ಭಾರತೀ ಸ್ವಾಮಿಗೆ ಪೂರ್ಣಕುಂಭ ಸ್ವಾಗತ ನೀಡಿದರು.20ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಗಣೇಶ, ಶ್ರೀ ಶಾರದಾಪರಮೇಶ್ವರಿ ಹಾಗೂ ಶ್ರೀ ಆದಿಶಂಕರರ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಾಣವಾದ ಮುಖಮಂಟಪ, ವಿಶಾಲವಾದ ಪ್ರಾಕಾರ ಹಾಗೂ 3 ವಿಮಾನಗೋಪುರಗಳ ಮಹಾ ಕುಂಭಾಭಿಷೇಕವನ್ನು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ನೆರವೇರಿಸಿದರು.

Share this article